ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ: ಕೆ.ಎನ್.ಆರ್

136

Get real time updates directly on you device, subscribe now.


ತುಮಕೂರು: ನಗರದ ಸರಸ್ವತಿಪುರಂ 2ನೇ ಹಂತದಲ್ಲಿರುವ ಶ್ರೀವಾಲ್ಮೀಕಿ ಐಟಿಐ ಕಾಲೇಜಿನಲ್ಲಿ 2019-20ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿತವಾದ ಎಲ್‌.ಜಿ.ಹಾವನೂರು ಕೊಠಡಿ ಉದ್ಘಾಟನಾ ಕಾರ್ಯಕ್ರಮವನ್ನು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮತ್ತು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ನೆರವೇರಿಸಿದರು.
ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಉತ್ತಮ ವಾತಾವರಣದಲ್ಲಿ ನಗರದ ಹೃದಯಭಾಗದಲ್ಲಿರುವ ಶ್ರೀವಾಲ್ಮೀಕಿ ಐಟಿಐ ಕಾಲೇಜಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ಐಟಿಐ ಕಾಲೇಜಿಗೆ ಕಂಪ್ಯೂಟರ್‌, ಪೀಠೋಪಕರಣ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚುವರಿಯಾಗಿ ಇನ್ನೂ 5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ಸಂಸ್ಥೆಯನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಪಯೋಗವಾಗುವಂತೆ ಉದ್ಯೋಗ ಆಧಾರಿತ ಕೋರ್ಸ್ ಗಳನ್ನು ಹೆಚ್ಚು ಹೆಚ್ಚು ಆರಂಭಿಸುವಂತೆ ಸಲಹೆ ನೀಡಿದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡು ಮುಂದಿನ ಶೈಕ್ಷಣಿಕದ ಕಡೆ ಹೆಚ್ಚು ಒತ್ತು ನೀಡಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಂತೆ ತಿಳಿಸಿದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಮಾತನಾಡಿ, ಇಂದು ಬದಲಾದ ಸನ್ನಿವೇಶದಲ್ಲಿ ಪ್ರಸ್ತುತ ಪಡೆಯುತ್ತಿರುವ ವಿದ್ಯೆ ಸಾಲದು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯೆ ಕಲಿತರೆ ಮಾತ್ರ ವಿದ್ಯೆಗೆ ತಕ್ಕ ಸ್ಥಾನಮಾನ ದೊರೆಯುತ್ತವೆ ಎಂದು ಹೇಳಿದರು.
ಹಣ, ಆಸ್ತಿ, ಅಂತಸ್ತು ಮಾಡುವ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಸಮಾಜಕ್ಕೆ ಅದೇ ಆಸ್ತಿಯಾಗುತ್ತದೆ. ಅನಾವಶ್ಯಕವಾಗಿ ಖರ್ಚು ಮಾಡುವ ಬದಲು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿದರೆ ಒಳ್ಳೆಯ ವಿದ್ಯಾವಂತರಾಗಿ ಉನ್ನತ ಹುದ್ದೆಗೇರಿ ಸಮಾಜಕ್ಕೆ ಕೀರ್ತಿ ತರುತ್ತಾರೆ ಎಂದರು.
ವಿದ್ಯೆ ಸೋಮಾರಿಗಳ ಸ್ವತ್ತಲ್ಲ, ಸಾಧಕನ ಸ್ವತ್ತು, ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ ಎನ್ನುವ ಹಾಗೆ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾವಂತರಾಗಿ ಸಮಾಜಕ್ಕೆ ಹೆಸರು ತನ್ನಿ, ಸೋಮಾರಿತನ ಬಿಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ವಿದ್ಯೆಯನ್ನು ಕರಗತ ಮಾಡಿಕೊಂಡರೆ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಅವಕಾಶಗಳಿರುತ್ತವೆ. ಇಲ್ಲದಿದ್ದರೆ ಗುಲಾಮರಾಗೇ ಉಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವುದರಿಂದ ಉತ್ತಮ ಜ್ಞಾನ ಸಂಪಾದಿಸಿಕೊಳ್ಳಬಹುದು. ದಿನಪತ್ರಿಕೆಗಳನ್ನು ಓದಿ, ಗ್ರಂಥಾಲಯಗಳಿಗೆ ತೆರಳಿ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಸಮಾಜಕ್ಕೆ ಹಾಸ್ಟೆಲ್‌ ಬಿಟ್ಟರೆ ಈ ಜಾಗವೇ ನಮ್ಮ ಸಮಾಜಕೆಕ ಆಸ್ತಿ, ಈ ಸಂಸ್ಥೆ ಬಡಮಕ್ಕಳನ್ನು ಪೋಷಿಸುವುದೇ ಸಂಸ್ಥೆಯ ಮುಖ್ಯ ಉದ್ಧೇಶವಾಗಿದೆ. ವಿದ್ಯಾರ್ಥಿಗಳಿಂದ ಕೇವಲ 1 ರೂ. ಪಡೆದು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಉತ್ತಮ ಫಲಿತಾಂಶದೊಂದಿಗೆ ಕಲಿತ ಶಾಲೆಗೆ ಮತ್ತು ಪೋಷಕರಿಗೆ ಹೆಸರು ತರುತ್ತಿದ್ದಾರೆ ಎಂದು ಹೇಳಿದರು.
ಶ್ರೀವಾಲ್ಮೀಕಿ ಐಟಿಐ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ, ಉತ್ತಮ ಫಲಿತಾಂಶ ಬರುತ್ತಿದೆ. ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಶಿಸ್ತು, ಉತ್ತಮ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಿ ಎಂದು ಆಶಿಸಿದರು.
ಮಹಾನಗರಪಾಲಿಕೆ ಸದಸ್ಯರಾದ ಧರಣೇಂದ್ರ ಕುಮಾರ್‌ ಮತ್ತು ಮಂಜುನಾಥ್‌ ಮಾತನಾಡಿ, ಶ್ರೀವಾಲ್ಮೀಕಿ ಐಟಿಐ ಕಾಲೇಜು ರಸ್ತೆಗೆ ವಾಲ್ಮೀಕಿ ರಸ್ತೆ ಎಂದು ನಾಮಕರಣ ಮಾಡಲಾಗುವುದು. ಮತ್ತು ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿವುದರ ಜೊತೆಗೆ ಈ ರಸ್ತೆಯಿಂದ ರಿಂಗ್‌ ರಸ್ತೆಗೆ ಲಿಂಕ್‌ ಮಾಡಲು ನಾಲ್ಕು ನಿವೇಶನಗಳು ಅಡ್ಡಿ ಇವೆ. ಆ ನಿವೇಶನಗಳಿಗೆ ಪಾಲಿಕೆಯಿಂದ ಪರಿಹಾರ ಕೊಟ್ಟು, ರಸ್ತೆ ಅಭಿವೃದ್ಧಿ ಮಾಡಬೇಕೆಂದು ಮಹಾನಗರಪಾಲಿಕೆ ಮೇಯರ್‌ ಮತ್ತು ಆಯುಕ್ತರಿಗೆ ಒತ್ತಾಯಿಸಿದರು.
ಈ ಸರಳ ಸಮಾರಂಭದಲ್ಲಿ ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್‌, ಪಾಲಿಕೆ ಆಯುಕ್ತರಾದ ರೇಣುಕಾ, ಪಾಲಿಕೆ ಸದಸ್ಯರಾದ ಮಂಜುನಾಥ್‌, ಧರಣೇಂದ್ರ ಕುಮಾರ್‌, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷರಾದ ಭೀಮಯ್ಯ, ದೊಡ್ಡನರಸಯ್ಯ, ಮಾಜಿ ಕಾರ್ಯದರ್ಶಿ ಪುಟ್ಟರಾಮಯ್ಯ, ನಿರ್ದೇಶಕರಾದ ತಿಪ್ಪೇಸ್ವಾಮಿ, ಶಿವಸ್ವಾಮಿ, ದೇವರಾಜು, ಸಿಂಗದಹಳ್ಳಿ ರಾಜಕುಮಾರ್‌, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್‌, ಮಂಜುನಾಥ್‌, ಲಕ್ಷ್ಮೀನಾರಾಯಣ್‌, ನಿರ್ಮಿತಿ ಕೇಂದ್ರದ ರಾಜಶೇಖರ್‌, ನಾರಾಯಣಗೌಡ, ಟಿ.ಪಿ.ಮಂಜುನಾಥ್‌, ಸಂಸ್ಥೆಯ ಪ್ರಾಂಶುಪಾಲರಾದ ಶ್ರೀದೇವಿ ಹೆಚ್, ವಾಲ್ಮೀಕಿ ಪ್ರೌಢಶಾಲೆಯ ಸಹ ಶಿಕ್ಷಕಿ ಕೆ.ಎಚ್‌.ಕಸ್ತೂರಿ ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು, ಸಮಾಝದ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!