ಯುರಿಯಾ ರಸಗೊಬ್ಬರ ಸಿಗದೆ ರೈತರು ಅತಂತ್ರ

90

Get real time updates directly on you device, subscribe now.


ಕುಣಿಗಲ್‌: ತಾಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೂ ಉತ್ತಮ ಮಳೆಯಾಗಿದ್ದು ಅನ್ನದಾತನ ಮೊಗದಲ್ಲಿ ಸಂತಸ ಮೂಡಿದರೆ, ಕೃಷಿ ಚಟುವಟಿಗೆ ಪೂರಕವಾಗಿ ಯುರಿಯಾ ರಸಗೊಬ್ಬರ ಸಿಗದೆ ಹೈರಾಣಾಗಿ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನಾದ್ಯಂತ ಗುರುವಾರ ಸಂಜೆ ಐದು ಗಂಟೆ ವೇಳೆಗೆ ಪ್ರಾರಂಭವಾದ ಮಳೆ ಶುಕ್ರವಾರ ಬೆಳಗಿನಜಾವ ಆರುಗಂಟೆ ವರೆಗೂ ಸುರಿದಿದೆ. ಹುತ್ರಿದುರ್ಗ ಹೋಬಳಿಯ ಸಂತೇಪೇಟೆಯಲ್ಲಿಅತ್ಯಧಿಕ- 100.4, ಕುಣಿಗಲ್‌- 76, ಮಾರ್ಕೋನಹಳ್ಳಿ- 59, ನಿಡಸಾಲೆ- 54, ಅಮೃತೂರು- 13.1, ಕೆ.ಹೊನ್ನಮಾಚನಹಳ್ಳಿಯಲ್ಲಿ 10.2 ಮಿಮಮೀ ಮಳೆಯಾಗಿದೆ. ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಈಗಾಗಲೆ ಬಹುತೇಕವಾಗಿ ಕೈಗೊಂಡಿರುವ ರಾಗಿ ಬೆಳೆಗೆ ಪೂರಕ ವಾತಾವರಣವಾಗಿದೆ. ನಾಟಿಯಾಗಿರುವ ರಾಗಿಬೆಳೆ ಮತ್ತಷ್ಟು ಚೆನ್ನಾಗಿ ಬರಲು ಯುರಿಯಾ ರಸಗೊಬ್ಬರಕ್ಕೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.
ತಾಲೂಕಿನಲ್ಲಿ ರಾಗಿ ಬೆಳೆಯನ್ನು ಪ್ರಮುಖವಾಗಿ ಕೈಗೊಳ್ಳಲಾಗುತ್ತಿದ್ದು ಒಟ್ಟಾರೆ 38 ಸಾವಿರ ಹೆಕ್ಟೇರ್‌ (95 ಸಾವಿರ ಎಕರೆ) ಪ್ರದೇಶದಲ್ಲಿ ರಾಗಿ ಬೆಳೆ ಕೈಗೊಳ್ಳಲಾಗಿದೆ. ಐದು ಕಡೆಗಳ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಮಾತ್ರ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ನಿಗದಿತ ಬೆಲೆ 268.50 ರೂ.ಆಗಿದೆ, ಆದರೆ 300 ರೂ. ನೀಡಿ ರೈತರು ಖರೀದಿ ಮಾಡುತ್ತಿದ್ದು, ಒಮ್ಮೆಲೆ ಎಲ್ಲಾ ಸೊಸೈಟಿಗಳಿಗೆ ಯುರಿಯಾಗೆ ರೈತರು ಮುಗಿಬಿದ್ದ ಪರಿಣಾಮ ಬಹುತೇಕ ಎಲ್ಲಾ ಸೋಸೈಟಿಗಳಲ್ಲಿ ಸಂಗ್ರಹ ಖಾಲಿಯಾಗಿ ರೈತರು ಪರದಾಡುವಂತಾಗಿದೆ. ಸಮರ್ಪಕ ವ್ಯವಸ್ಥೆ ಮಾಡದ ಕಾರಣ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು. ಕೊತ್ತಗೆರೆ ರೈತರಂಗಪ್ಪ ಮಾತನಾಡಿ, ತಾಲೂಕಿನಲ್ಲಿ ಯುರಿಯಾ ಕೊಡುತ್ತಿಲ್ಲ, ಕೊಟ್ಟರೂ ಹೆಚ್ಚಿನ ದರ ಕೇಳುತ್ತಾರೆ, ಮಾಗಡಿ ತಾಲೂಕಿನಲ್ಲಿ ನಾಲ್ಕುನೂರುಗೆ ಸಿಗುತ್ತಿದೆ, ನಮ್ಮ ಕಷ್ಟ ಕೇಳುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನೂರ್‌ಆಜಾಮ್‌ ಮಾತನಾಡಿ, ಯುರಿಯಾ ರಸಗೊಬ್ಬರಕ್ಕೆ ಯಾವುದೇ ಅಭಾವ ಇಲ್ಲ, ಸೊಸೈಟಿಯವರು ಸ್ಟಾಕ್‌ವಿತರಿಸಿ ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಬೇಕು, ಸಲ್ಲಿಸದಿದ್ದಲ್ಲಿ ಹೊಸ ಸ್ಟಾಕ್‌ ನೀಡುತ್ತಿಲ್ಲ, ಹೀಗಾಗಿ ದಾಖಲೆ ಅಪ್‌ಲೋಡ್‌ಮಾಡಿ ರಸಗೊಬ್ಬರ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಖಾಸಗಿ ಅಂಗಡಿಯವರಿಗೆ ರಸಗೊಬ್ಬರ ಉತ್ಪಾದಕ ಕಂಪನಿಯವರು ಇತರೆ ಗೊಬ್ಬರವನ್ನು ಸೇರಿಸಿ ಪ್ಯಾಕೇಜ್‌ ಖರೀದಿ ಮಾಡುವಂತೆ ಸೂಚನೆ ನೀಡಿದ್ದರಿಂದ ದರ ತುಸು ಹೆಚ್ಚು, ರೈತರು ಎಕರೆಗೆ 30 ಕೆಜಿ ಮಾತ್ರ ಯುರಿಯಾ ರಸಗೊಬ್ಬರ ಬಳಸಬೇಕಿದೆ, ಆದರೆ ಅವೈಜ್ಞಾನಿಕ ಕಾರಣದಿಂದ ಹೆಚ್ಚಿನ ಬಳಕೆಯಾಗುತ್ತಿದೆ, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದ್ದರೂ ರೈತರು ರಸಗೊಬ್ಬರ ಬಳಕೆಗೆ ಮಿತಿಗೊಳಿಸುತ್ತಿಲ್ಲ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!