ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ: ಡಾ.ರಂಗನಾಥ್

74

Get real time updates directly on you device, subscribe now.


ಕುಣಿಗಲ್‌: ತಾಲೂಕಿನಲ್ಲಿ ರಕ್ತದೊತ್ತಡ, ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಿದೆ, ಇವರಿಗೆ ಅಗತ್ಯವಾದ ಔಷಧ ಪೂರೈಕೆ ನಿಟ್ಟಿನಲ್ಲಿ ಡಿಕೆಎಸ್‌ ಟ್ರಸ್ಟ್ ವತಿಯಿಂದ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಡಾ.ರಂಗನಾಥ್‌ ತಿಳಿಸಿದರು.
ತಾಲೂಕಿನ ಬಿಳೆದೇವಾಲಯದಲ್ಲಿ ಡಿಕೆಎಸ್‌ ಚಾರಿಟೇಬಲ್‌ ಟ್ರಸ್ಟ್ ಹಾಗೂ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸುಮಾರು 80 ಸಾವಿರಕ್ಕೂ ಹೆಚ್ಚು ಮಂದಿ ತಾಲೂಕಿನಲ್ಲಿ ಮಧುಮೇಹ, ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಕಾಲಕಾಲಕ್ಕೆ ತಪಾಸಣೆ ನಡೆಸಲು ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ, ಕೊವಿಡ್‌- 19 ಪಿಡುಗು ಕಮ್ಮಿಯಾಗಿದೆ ಎಂದು ಜನತೆ ಭಾವಿಸಬೇಕಿಲ್ಲ ಎಂದರು.
ಕೊವಿಡ್‌-19 ಸುರಕ್ಷಣಾ ಕ್ರಮ ಕೈಗೊಂಡು ಸಾಮಾಜಿಕ ಅಂತರ ಪಾಲಿಸಬೇಕಿದೆ, ಲಸಿಕೆ ಪಡೆದಿದ್ದೇವೆ ಎಂದು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ, ಸರ್ಕಾರದ ವತಿಯಿಂದ ಲಸಿಕೆ ಪೂರೈಕೆ ವಿಳಂಬದ ನಡುವೆ ಡಿಕೆಎಸ್‌ ಟ್ರಸ್ಟ್ ವತಿಯಿಂದ ತಾಲೂಕಿನ ವಿವಿಧೆಡೆ ಹತ್ತು ಸಾವಿರಕ್ಕೂ ಹೆಚ್ಚು ಲಸಿಕೆ ನೀಡಲಾಗಿದೆ, ಕೊವಿಡ್‌ ಮೊದಲನೆ ಅಲೆಯಲ್ಲಿ ಇಡೀ ರಾಷ್ಟ್ರದಲ್ಲೆ ಮೊದಲ ಬಾರಿಗೆ, ಮಾದರಿಯಾಗುವಂತೆ ಡಿಕೆಎಸ್‌ ಟ್ರಸ್ಟ್ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎರಡು ಲಕ್ಷಕ್ಕೂ ಹೆಚ್ಚು ವಿಟಮಿನ್‌ ಮಾತ್ರೆಗಳನ್ನು ವಿತರಿಸಲಾಗಿದೆ. ಆರೋಗ್ಯದ ವಿಷಯದಲ್ಲಿ ಜನತೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು.
ಬಿಳೆದೇವಾಲಯ ಗ್ರಾಪಂ ಅಧ್ಯಕ್ಷೆ ಚಂದ್ರಪ್ರಭ, ಪ್ರಮುಖರಾದ ದೇವರಾಜು, ಪ್ರಕಾಶ, ಶೇಖರ್ ಗೌಡ, ರಾಜಣ್ಣ, ಪಾಪಣ್ಣ, ಪುರಸಭೆ ಅಧ್ಯಕ್ಷ ನಾಗೇಂದ್ರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!