ನೇತ್ರ ಚಿಕಿತ್ಸೆ ಮಾಡಿ ದೃಷ್ಟಿ ನೀಡೋದು ಮಹತ್ತರ ಕಾರ್ಯ: ವೆಂಕಯ್ಯನಾಯ್ಡು

ನೇತ್ರದಾನ ಮಾಡಿ ದೃಷ್ಟಿಹೀನರಿಗೆ ಬೆಳಕು ನೀಡಿ

128

Get real time updates directly on you device, subscribe now.

ಪಾವಗಡ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅತ್ಯಾಧುನಿಕ ನೇತ್ರ ಚಿಕಿತ್ಸೆ ನೀಡಲು ಸರಕಾರದೊಂದಿಗೆ ಸೇವಾ ಸಂಸ್ಥೆಗಳ ಸಹಭಾಗಿತ್ವವೂ ಅವಶ್ಯಕ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದ ಜನರು ಯಾವುದೇ ಹಿಂಜರಿಕೆಯಿಲ್ಲದೆ, ಅಳುಕಿಲ್ಲದೆ ತಮ್ಮ ದೃಷ್ಟಿ ದೋಷಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅನಿವಾರ್ಯ ಕಾರಣಗಳಿಂದ ಪುಟ್ಟ ಪರದೆಯ ಮೇಲೆ ಆನ್ ಲೈನ್ ಶಿಕ್ಷಣ ಪಡೆಯಬೇಕಾಗಿದ್ದು, ಮಕ್ಕಳಲ್ಲಿ ಕಣ್ಣಿನ ತೊಂದರೆ ಹೆಚ್ಚಾಗುತ್ತಿದೆ, ತಂತ್ರಜ್ಞಾನ ಹೆಚ್ಚಳವಾದಂತೆ ಕಣ್ಣಿನ ಸಮಸ್ಯೆ ಹೆಚ್ಚಳವಾಗುತ್ತಿದ್ದು, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯ ಒದಗಿಸಬೇಕಿದೆ ಎಂದು ಹೇಳಿದರು.
ನೇತ್ರ ಚಿಕಿತ್ಸೆಯ ಮಹತ್ತರ ಕಾರ್ಯ ಕೈಗೆತ್ತಿಕೊಂಡು ಸಮಾಜಕ್ಕೆ ಅವಶ್ಯಕ ಉತ್ತಮ ಸೇವೆ ಒದಗಿಸುತ್ತಿರುವ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಅವರ ಸೇವೆ ಅತ್ಯಾವಶ್ಯಕವಾಗಿದ್ದು, ಕಣ್ಣಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ನೇತ್ರದಾನ ಮಾಡುವ ಮೂಲಕ ಅಂಧರಿಗೆ ಬೆಳಕು ನೀಡಬೇಕಿದೆ ಎಂದು ಕರೆ ನೀಡಿದರು.
ಸಾರ್ವಜನಿಕರು ಮೌಢ್ಯಗಳನ್ನು ತೊರೆದು ತಮ್ಮ ಜೀವಿತಾವಧಿಯ ನಂತರ ನೇತ್ರ ದಾನ ಮಾಡುವುದರ ಮೂಲಕ ದೃಷ್ಟಿ ಹೀನರ ಮೂಲಕ ಪ್ರಪಂಚ ನೋಡಬೇಕು ಎಂದು ತಿಳಿಸಿದರು.
ಸುಧಾಮೂರ್ತಿ ಅವರ ಕೊಡುಗೆ ಶ್ಲಾಘಿಸಿ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆಯ ಸೇವೆಗಳು ಇನ್ನೂ ವಿಸ್ತಾರಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಅನೇಕ ಕಾರಣಗಳಿಂದ ಪಾವಗಡ ಕುಖ್ಯಾತಿ ಪಡೆದಿದ್ದು ಸ್ವಾಮಿ ಜಪಾನಂದಜೀ ಅವರ ಆಗಮನದಿಂದ ಈಗ ಪಾವನಗಡವಾಗಿದೆ, ಬರಗಾಲ ಪರಿಹಾರ ಕಾರ್ಯಕ್ಕಾಗಿ ಆಗಮಿಸಿದ ಸ್ವಾಮಿ ಜಪಾನಂದರು ಇಲ್ಲಿಯೇ ನೆಲೆಸಿ ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸೇವೆ ಸಲ್ಲಿಸಿ ಗ್ರಾಮಾಂತರ ಪ್ರದೇಶದ ಜನರಿಗೆ ವರದಾನವಾಗಿದ್ದಾರೆ ಎಂದರು.
ಕುಷ್ಟರೋಗಿಗಳಿಗೆ ಮಾತೃ ಹೃದಯದ ಸ್ಪರ್ಶ ನೀಡಿ ಅವರಲ್ಲಿ ಹೊಸ ಚೈತನ್ಯ ನೀಡಿದ್ದಾರೆ, ಅವರ ಕಷ್ಟ ನಿವಾರಣೆಗೆ ಕಾರಣಕರ್ತರಾಗಿದ್ದಾರೆ, ಎರಡು ದಶಕಗಳ ಹಿಂದೆ ಕಣ್ಣಿನ ಆಸ್ಪತ್ರೆ ಸ್ಥಾಪಿಸಿ ತನ್ಮೂಲಕ ಗ್ರಾಮಾಂತರ, ಬಡ ಜನರ ಪಾಲಿಗೆ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಈ ಆಸ್ಪತ್ರೆಯ ಮೂಲಕ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಜಪಾನಂದಜೀ ಮಾತನಾಡಿ, ಪಾವಗಡ ತಾಲ್ಲೂಕಿನ ಜನರು ತಮ್ಮ ದೃಷ್ಟಿ, ನೇತ್ರ ಚಿಕಿತ್ಸೆಗಳಿಗೆ ನಗರ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಬೇಕು ಹಾಗೂ ಬಡ ಜನರಿಗೆ ಹೆಚ್ಚಿನ ಹೊರೆಯಾಗದಂತೆ ಸೌಲಭ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಈ ಸಂಕೀರ್ಣ ನಿರ್ಮಿಸಲಾಗಿದೆ, ದಕ್ಷಿಣ ಭಾರತದಲ್ಲಿಯೇ ಈ ಒಂದು ಆಸ್ಪತ್ರೆ ಗ್ರಾಮಾಂತರ ಪ್ರದೇಶದ ಹೈಟೆಕ್ ಆಸ್ಪತ್ರೆಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅದಮ್ಯಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಡಾ.ಜಿ.ವೆಂಕಟರಾಮಯ್ಯ, ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಅರ್ಚನಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ಪುರಸಭಾ ಸದಸ್ಯ ಜಿ.ಸುದೇಶ್ ಬಾಬು, ಕಿದ್ವಾಯಿ ಗಂಥಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!