ಕೋವಿಡ್‌ ಮಾರ್ಗಸೂಚಿಯಂತೆ 6, 7, 8ನೇ ತರಗತಿ ಆರಂಭ

ಖುಷಿಯಾಗಿ ಶಾಲೆಗೆ ಬಂದ ವಿದ್ಯಾರ್ಥಿಗಳು

150

Get real time updates directly on you device, subscribe now.

ತುಮಕೂರು: ಕೋವಿಡ್‌-19 ಮಹಾಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಒಂದೂವರೆ ವರ್ಷಕ್ಕೂ ಅಧಿಕ ಕಾಲ ಮುಚ್ಚಿದ್ದ 6, 7, ಮತ್ತು 8ನೇ ತರಗತಿಗಳನ್ನು ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಜಿಲ್ಲೆಯಾದ್ಯಂತ ಆರಂಭಿಸಲಾಗಿದ್ದು, ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ಖುಷಿಯಿಂದಲೇ ಶಾಲೆಗಳಿಗೆ ತೆರಳಿದರು.
ತುಮಕೂರು ಶೈಕ್ಷಣಿಕ ಜಿಲ್ಲೆಯ 2,417 ಪ್ರಾಥಮಿಕ ಶಾಲೆಗಳಲ್ಲಿ 6 ರಿಂದ 8ನೇ ತರಗತಿಗೆ ಸುಮಾರು 85 ಸಾವಿರ ವಿದ್ಯಾರ್ಥಿಗಳು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 1,403 ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 45 ಸಾವಿರ ವಿದ್ಯಾರ್ಥಿಗಳು 6- 8ನೇ ತರಗತಿಗಳಿಗೆ ದಾಖಲಾಗಿದ್ದು, ಈ ಎಲ್ಲಾ ಶಾಲೆಗಳಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಸರ್ಕಾರ 9 ರಿಂದ 12ನೇ ತರಗತಿವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸಿ ಯಶ ಕಂಡಿರುವ ಹಿನ್ನೆಲೆಯಲ್ಲಿ ಅದೇ ಮಾದರಿಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೋಮವಾರದಿಂದ 6 ರಿಂದ 8ನೇ ತರಗತಿ ಆರಂಭಿಸಿದೆ.
ನಗರದ ಮರಳೂರಿನ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ, ಸರಸ್ವತಿಪುರಂನ ವಿದ್ಯಾನಿಕೇತನ ಶಾಲೆ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ ಎದ್ದು ಕಾಣುತ್ತಿತ್ತು. ಶಾಲಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಡೆಸ್ಕ್ ಗಳಲ್ಲಿ ಕುಳಿತುಕೊಂಡಿದ್ದರು.
ಕಳೆದ 2 ವರ್ಷಗಳಿಂದ ಮಕ್ಕಳ ಕಲರವ ಇಲ್ಲದೆ ಬಣಗುಡುತ್ತಿದ್ದ ಶಾಲಾ ಆವರಣಗಳು ಮಕ್ಕಳಿಂದ ತುಂಬಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿತ್ತು. ಒಂದು ಕೊಠಡಿಯಲ್ಲಿ 15- 20 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಪ್ರವಚನ ಮಾಡಲಾಗುತ್ತಿದೆ. ಮಕ್ಕಳ ಸಂಖ್ಯೆ ಹೆಚ್ಚಿದ್ದು ಕೊಠಡಿ ಸಂಖ್ಯೆ ಕಡಿಮೆ ಇದ್ದರೆ ಪಾಳಿ ಪ್ರಕಾರ ತರಗತಿ ನಡೆಸಲು ಎರಡೂ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.
ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಡಾ.ಜಯರಾಮರಾವ್‌ ಮಾತನಾಡಿ, ನಮ್ಮ ಶಾಲೆಗೆ ಸುಮಾರು 200 ಮಕ್ಕಳ ಪೈಕಿ 100 ಮಕ್ಕಳು ಹಾಜರಾಗಿದ್ದಾರೆ. ಬಹಳ ಖುಷಿಯಿಂದ ಶಾಲೆಗೆ ಬಂದಿದ್ದಾರೆ, ಹಾಗೆಯೇ ಶಿಕ್ಷಕರು ಸಹ ಸಂತಸದಿಂದ ಶಾಲೆಗೆ ಬಂದಿದ್ದಾರೆ, ಸದ್ಯ ಆನ್ ಲೈನ್‌ ತರಗತಿಗಳು ಸ್ಥಗಿತಗೊಂಡು ಭೌತಿಕ ತರಗತಿಗಳು ಆರಂಭವಾಗಿರುವುದು ಮಕ್ಕಳಲ್ಲಿ ಒಂದು ರೀತಿಯ ಹುರುಪು ತಂದಿದೆ ಎಂದರು.
ಮರಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕರಾದ ರುಕ್ಮಾಂಗದ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳುತ್ತಿದ್ದು, ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ನೀಡಿ ಸ್ವಾಗತಿಸಲಾಗುತ್ತಿದೆ. ಕೋವಿಡ್‌ ಮಾರ್ಗಸೂಚಿ ಪ್ರಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಶಾಲೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸೋಮವಾರದಿಂದ ಆರಂಭವಾಗಿರುವ 6 ನೇ ತರಗತಿಯಲ್ಲಿ 48, 7ನೇ ತರಗತಿಯಲ್ಲಿ 33 ವಿದ್ಯಾರ್ಥಿಗಳಿದ್ದು, ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಬಂದಿರುವುದು ಸಂತಸ ತಂದಿದೆ ಎಂದರು.
ಆರಂಭವಾಗಿರುವ 6 ರಿಂದ 8ನೇ ತರತಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲಾಗುತ್ತದೆ, ವಾರದಲ್ಲಿ 5 ದಿನ ಮಾತ್ರ ತರಗತಿಗಳು ನಡೆಯಲಿವೆ, ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇರುತ್ತದೆ, ವಾರಾಂತ್ಯದಲ್ಲಿ ಶಾಲಾ ಆವರಣ, ಶಾಲಾ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿಸಿ ಸ್ವಚ್ಛಗೊಳಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!