ಸರ್ಕಾರಕ್ಕೆ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಒತ್ತಾಯ

ನೀರಾವರಿ ಯೋಜನೆ ತುರ್ತಾಗಿ ಅನುಷ್ಠಾನಗೊಳಿಸಿ

352

Get real time updates directly on you device, subscribe now.


ತುಮಕೂರು: ಜಿಲ್ಲೆಯ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಹೇಮಾವತಿ, ಭದ್ರಾ ಮೇಲ್ದಂಡೆ ಹಾಗೂ ಬಿಕ್ಕೇಗುಡ್ಡ, ಹಾಗಲವಾಡಿ ಕುಡಿಯುವ ನೀರಿನ ಯೋಜನೆಗಳನ್ನು ತುರ್ತು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.
ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿ, ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಸರಕಾರ ಅನುದಾನ ನೀಡದ ಕಾರಣ, ನೆನೆಗುಂದಿಗೆ ಬಿದ್ದಿವೆ, ಸರಕಾರದ ವಿಳಂಬ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಂಠಿತವಾಗಿರುವ ಯೋಜನೆಗಳು ಕಾಲಮಿತಿ ಮೀರಿದ್ದು, ಈ ಯೋಜನೆಗಳನ್ನು ತುರ್ತು ಅನುಷ್ಠಾನಗೊಳಿಸಬೇಕು ಆಗ್ರಹಿಸಿದರು.
ಎತ್ತಿನಹೊಳೆ ಯೋಜನೆಯಡಿ ಭೂ ಸ್ವಾಧೀನ ಪ್ರಕ್ರಿಯೆಗೆ ಅನುದಾನ ನೀಡದೇ ಇರುವುದರಿಂದ ರೈತರಿಗೆ ಪರಿಹಾರ ನೀಡದೆ ಕಾಮಗಾರಿ ಮಾಡುತ್ತಿದ್ದು, ರೈತರಿಗೆ ವೈಜ್ಞಾನಿಕವಾಗಿ ಭೂ ಪರಿಹಾರ ನಿಗದಿ ಮಾಡಿ, ರೈತರಿಗೆ ಪರಿಹಾರ ನೀಡಿದ ನಂತರವೇ ಕಾಮಗಾರಿ ಪ್ರಾರಂಭಿಸಬೇಕು, ಎತ್ತಿನಹೊಳೆ ಯೋಜನೆಯಲ್ಲಿ ಗುತ್ತಿಗೆದಾರರು ದಲ್ಲಾಳಿಗಳು ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಬಫರ್‌ ಡ್ಯಾಂಗೆ 3,000 ಹೆಕ್ಟೇರ್‌ ಭೂಮಿ ಕಳೆದುಕೊಳ್ಳುವ ರೈತರಿಗೆ, ದೊಡ್ಡಬಳ್ಳಾಪುರ ಭಾಗದ ರೈತರಿಗೆ ನೀಡುವ ಪರಿಹಾರವನ್ನೇ ನೀಡಬೇಕು, ಯಾವುದೇ ಒತ್ತಡಗಳಿಗೆ ಸರ್ಕಾರ ಮಣಿಯದೇ ಕೊರಟಗೆರೆಯಲ್ಲಿಯೇ ಬಫರ್‌ ಡ್ಯಾಂ ನಿರ್ಮಾಣ ಮಾಡುವ ಮೂಲಕ ಆ ಭಾಗಕ್ಕೆ ನೀರಾವರಿ ಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರೈತರಿಗೆ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಪಾವತಿಸಿಲ್ಲ, ಹವಾಮಾನ ಆಧಾರಿತ ಬೆಳೆವಿಮೆಯನ್ನು ಪಾವತಿಸದ ವಿಮಾ ಕಂಪನಿಗಳ ಪರವಾಗಿಯೇ ಸರ್ಕಾರಗಳು ಕಾರ್ಯನಿರ್ವಹಿಸುತ್ತಿದ್ದು, ರೈತರನ್ನು ವಂಚಿಸುತ್ತಿರುವ ವಿಮಾ ಕಂಪನಿಗಳು ರೈತರಿಗೆ ಮೊದಲು ಬೆಳೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಬೆಳೆ ಪರಿಹಾರವನ್ನು ನೀಡದ ಕಂಪನಿಗಳಿಗೆ ಮತ್ತೆ ವಿಮೆಗೆ ಅವಕಾಶ ನೀಡುವುದನ್ನು ತಪ್ಪಿಸಬೇಕು ಎಂದರು.
ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸಲು ಸರ್ಕಾರ ಮುಂದಾಗಬೇಕು, ಜಿಲ್ಲೆಯಲ್ಲಿ ನೀರಿನ ರಾಜಕಾರಣ ಮಾಡದೇ ನೀರು ಹರಿಸಬೇಕು, ಅಲೋಕೇಷನ್‌ ಇಲ್ಲದೇ ಇದ್ದರೆ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಕುಡಿಯುವ ನೀರಿನ ಅಲೋಕೇಷನ್‌ ನೀಡಿ ನೀರು ಹರಿಸಬೇಕು, ಉಪಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್‌ವೈ ನೀಡಿದ್ದ ವಚನಕ್ಕೆ ಮಾಧುಸ್ವಾಮಿ ಅವರು ಒಳಗೊಂಡಿದ್ದಾರೆ, ಮದಲೂರಿಗೆ ನೀರು ಹರಿಸಲು ಆಗುವುದಿಲ್ಲ ಎನ್ನುವುದಕ್ಕೆ ಅದೇನು ಅಫ್ಘಾನಿಸ್ತಾನದಲ್ಲಿಯೇ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಬಗರ್ ಹುಕುಂ ಸಮಿತಿ ರಚನೆ ಮಾಡಬೇಕು ಮತ್ತು ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೆ ಭೂ ಮಂಜೂರಾತಿ ಮಾಡಬೇಕು, ಕಳೆದ ಸಾಲಿನಲ್ಲಿ ಈಗಾಗಲೇ ಭೂ ಮಂಜೂರಾಗಿರುವ ರೈತರಿಗೆ ಖಾತೆ ಮಾಡಬೇಕು, ಬಗರ್‌ಹುಕುಂ ಸಮಿತಿಯಲ್ಲಿರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ 27 ಟಿಎಂಸಿ ನೀರು ಶೇಖರಣೆಯಾಗಬಹುದಾಗಿದ್ದ 2,050 ಕೆರೆಗಳು ಒತ್ತುವರಿಯಾಗಿದ್ದು, ಇದರಿಂದ ಕೆರೆಗಳಿಗೆ ನೀರು ಹೋಗುತ್ತಿಲ್ಲ, ರಾಜಗಾಲುವೆಗಳು ಒತ್ತುವರಿಯಾಗಿದ್ದು, 75 ಸಾವಿರ ಹೆಕ್ಟೇರ್ ಗೆ ನೀರು ಸಿಗುತ್ತಿಲ್ಲ, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಒತ್ತುವರಿ ತೆರವುಗೊಳಿಸಲು ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಆಗ್ರಹಿಸಿ ಅವರು, ಹರಿಯಾಣದಲ್ಲಿ ಪೊಲೀಸ್‌ ದೌರ್ಜನ್ಯವನ್ನು ಖಂಡಿಸಿದ್ದು, ಸೆ.26ರಂದು ರೈತರ ಪ್ರತಿಭಟನೆಗೆ ಜಿಲ್ಲೆಯಿಂದಲೂ ಬೆಂಬಲ ವ್ಯಕ್ತಪಡಿಸಿದ್ದು, ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಸೆ.15 ರಿಂದ 23ರ ವರೆಗೆ ಪಾವಗಡ, ಶಿರಾ, ಮಧುಗಿರಿ, ಗುಬ್ಬಿ, ತುರುವೇಕೆರೆ ಸೇರಿದಂತೆ ಎಲ್ಲ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಜಿಲ್ಲಾ ಸಂಚಾಲಕ ರವೀಶ್‌, ತಾಲ್ಲೂಕು ಅಧ್ಯಕ್ಷರಾದ ವೆಂಕಟೇಗೌಡ, ಲಕ್ಷ್ಮಣ್ ಗೌಡ, ಕೊರಟಗೆರೆ ತಾಲ್ಲೂಕು ಕಾರ್ಯದರ್ಶಿ ಶಬ್ಬೀರ್‌ ಪಾಷ, ತುಮಕೂರು ತಾಲ್ಲೂಕು ಮುಖಂಡರಾದ ಮಹೇಶ್‌, ಜಿಲ್ಲಾ ಮುಖಂಡರಾದ ಸಿ.ಟಿ.ಕುಮಾರ್‌, ಚನ್ನಬಸವಯ್ಯ, ಸಿ.ಜಿ.ಲೋಕೇಶ್‌, ಜಯಣ್ಣ, ಮುಕುಂದಪ್ಪ, ಈಶಣ್ಣ, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಅವೇರಹಳ್ಳಿ ಲೋಕೇಶ್‌, ಕಾಳೇಗೌಡ, ನಾರಾಯಣಪ್ಪ, ರಾಮಣ್ಣ, ನರಸಿಂಹಮೂರ್ತಿ, ಅಸ್ಲಾಂಪಾಷ, ಮಧುಗಿರಿ ನಾಗರಾಜು, ನರಸಿಂಹಮೂರ್ತಿ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!