ಕುಣಿಗಲ್ ನಲ್ಲಿ ಅಧಿಕಾರಿಗಳಿಗೆ ರೈತ ಸಂಘದಿಂದ ಎಚ್ಚರಿಕೆ

ರೈತರಿಗೆ ತೊಂದ್ರೆ ಕೊಟ್ರೆ ಕಂಬಕ್ಕೆ ಕಟ್ತೇವೆ

316

Get real time updates directly on you device, subscribe now.


ಕುಣಿಗಲ್‌: ರೈತರ ಜಮೀನಿಗೆ ನುಗ್ಗಿ ರೈತರಿಗೆ ಬೆದರಿಕೆ ಹಾಕುವ ಅರಣ್ಯ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟುತ್ತೇವೆ, ಕೇಂದ್ರ ಸ್ಥಾನದಲ್ಲಿ ಇರದೆ ನಗರ ಕೇಂದ್ರದಲ್ಲಿ ಖಾಸಗಿ ಕಚೇರಿ ತೆಗೆದು ಕೂತಿರುವ ಗ್ರಾಮ ಲೆಕ್ಕಿಗರನ್ನು ಕಚೇರಿಯಲ್ಲಿ ಬೀಗ ಹಾಕಿ ಕೂಡಿ ಹಾಕಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಎಚ್ಚರಿಕೆ ನೀಡಿದರು.
ಸೋಮವಾರ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡಿ, ಮಾಜಿ ಸಚಿವ ವೈ.ಕೆ.ರಾಮಯ್ಯ ಅವರ ಊರಾದ ಎಲೆಕಡಕಲು ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ವೈ.ಕೆ.ದೊಡ್ಡಿ, ಕಾಚೋಹಳ್ಳಿ, ಬ್ಯಾಡರಹಳ್ಳಿ ಭಾಗದಲ್ಲಿ ರೈತರಿಗೆ ಜಮೀನು ನೀಡಿ ಹಂಚಿಕೆ ಮಾಡಲಾಗಿದೆ. ಈ ಜಮೀನಿನಲ್ಲಿ ಕೃಷಿ ಚಟುವಟಿಕೆಗೆ ಜೆಸಿಬಿ, ಟ್ರಾಕ್ಟರ್‌ ಹೋದರೆ ಅರಣ್ಯಇಲಾಖೆ ಸಿಬ್ಬಂದಿ ಅಡ್ಡಗಟ್ಟಿ ಅರಣ್ಯ ಪ್ರದೇಶ ಎಂದು ರೈತರನ್ನು ಬೆದರಿಸುತ್ತಿದ್ದಾರೆ. ರೈತರ ಹೆಸರಿಗೆ ಪಹಣಿ ಬಂದರೂ ವಿನಾಕಾರಣ ತೊಂದರೆ ಕೊಟ್ಟರೆ ಸರಿ ಇರೋಲ್ಲ ಎಂದರು.
ಪ್ರತಿಭಟನೆಯಲ್ಲಿ ಮಾತನಾಡಲು ಮುಂದಾದ ಆರ್‌ಎಪ್‌ಒ ಮಹಮದ್‌ ಮನ್ಸೂರ್‌, ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಾದ ಕಾರಣ, ಸಿಬ್ಬಂದಿ ಅರಣ್ಯ ಪ್ರದೇಶ ರಕ್ಷಣೆ ಮಾಡುತ್ತಿದ್ದಾರೆ ಎಂದಾಗ, ಸ್ಥಳದಲ್ಲಿದ್ದ ಪ್ರತಿಭಟನಕಾರರು ಆರ್‌ಎಫ್‌ಒ ವಿರುದ್ಧ ಹರಿಹಾಯ್ದರು. ತಮ್ಮಲ್ಲಿದ್ದ ಜಮೀನಿನ ದಾಖಲೆ ಪ್ರದರ್ಶಿಸಿದರು. ಈ ವೇಳೆ ಎಚ್ಚರಿಕೆ ನೀಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರೈತರ ಜಮೀನಿಗೆ ಹೋಗಿ ತೊಂದರೆ ಕೊಟ್ಟರೆ ಮುಲಾಜಿಲ್ಲದೆ ಕಂಬಕ್ಕೆ ಕಟ್ಟುತ್ತೇವೆ, ಆಮೇಲೆ ಏನಾಗುತ್ತೋ ನೋಡೋಣ ಎಂದರು. ಆರ್‌ಎಫ್‌ಒ ಈ ನಿಟ್ಟಿನಲ್ಲಿ ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಸ್ಥಳದಲ್ಲಿದ್ದ ತಹಶೀಲ್ದಾರ್‌ ಅವರಿಗೆ ಅಮೃತೂರು, ಎಡೆಯೂರು, ಹುಲಿಯೂರು ದುರ್ಗದಲ್ಲಿ ಯಾವುದೇ ಗ್ರಾಮ ಲೆಕ್ಕಾಧಿಕಾರಿ ಗ್ರಾಮದಲ್ಲಿ ಇರುವುದಿಲ್ಲ, ಎಲ್ಲರೂ ನಗರ, ಹೋಬಳಿ ಕೇಂದ್ರದಲ್ಲಿ ಖಾಸಗಿ ಕಚೇರಿ ತೆಗೆದು ಕುಳಿತಿದ್ದಾರೆ, ಕನಿಷ್ಟ ವಾರಕ್ಕೆ ಮೂರು ದಿನವೂ ಬರೊಲ್ಲ. ಇನ್ನಾದರೂ ಪರಿಸ್ಥಿತಿ ಸರಿ ಹೋಗಬೇಕು, ಇಲ್ಲವಾದಲ್ಲಿ ಅವರು ಕೆಲಸ ಮಾಡುವ ಖಾಸಗಿ ಕಚೇರಿಗೆ ಬೀಗಹಾಕಿ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೇಮಾವತಿ ನಾಲಾ ವಲಯದ ಎಇಇ ಜಯರಾಜ್‌ ಅವರನ್ನು ತರಾಟೆಗೆ ತೆಗೆದುಕೊಂಡ ಆನಂದ್‌ ಪಟೇಲ್‌, ಜಿಲ್ಲೆಗೆ 24.5 ಟಿಎಂಸಿ ನೀರು ಬರುತ್ತಿದೆ, ಇದರಲ್ಲಿ ನಮ್ಮ ತಾಲೂಕಿನ ಪ್ರಮಾಣ 3.5 ಟಿಎಂಸಿ ಯಾಕೆ ಪಡೆಯುತ್ತಿಲ್ಲ, ಈಗ ಎಷ್ಟು ನೀರು ಹರಿಸಲಾಗಿದೆ ಎಂದು ಪ್ರಶ್ನಿಸಿದಾಗ, ಎಇಇ 300 ಎಂಸಿಎಫ್ಟಿ ಹರಿಸಿದ್ದು ಇದರಲ್ಲಿ 22 ಕಟ್ಟೆಗಳು ತುಂಬಿವೆ ಎಂದರು. ಇನ್ನು ಉಳಿದ 3.2 ಟಿಎಂಸಿ ಯಾವಾಗ ಹರಿಸುತ್ತೀರಾ, ಶಾಸಕರು ಕಟ್ಟೆ ತುಂಬಿಸಿ ಪುಕ್ಕಟೆ ಪ್ರಚಾರ ಪಡೆಯೋದು ಬೇಡ. ನಮ್ಮ ಪಾಲಿನ 3.2 ಟಿಎಂಸಿ ನೀರು ಹರಿಸಬೇಕು. ಮಂಗಳಾ ಜಲಾಶಯಕ್ಕೆ ಲಿಂಕ್‌ ಕೆನಾಲ್‌ ಕಾಮಗಾರಿ ಪ್ರಾರಂಭಿಸಿ ನೀರು ತುಂಬಿಸುವ ಕೆಲಸ ಮಾಡಬೇಕು, ಇಲ್ಲವಾದಲ್ಲಿ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರೆವಣಿಗೆ ನಡೆಸಿ ರೈತರ ಶೋಷಣೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ವಿವಿಧ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಅನಿಲ್ ಕುಮಾರ್‌, ಪ್ರಮುಖರಾದ ವೆಂಕಟೇಶ್‌, ಲಕ್ಷ್ಮಣ, ಲಿಂಗರಾಜು, ನಾರಾಯಣ, ನಾಗರಾಜು, ರಾಜೇಶ, ನಂಜುಂಡಯ್ಯ, ಕೃಷ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!