ಯುರಿಯಾ ರಸಗೊಬ್ಬರಕ್ಕೆ ರೈತರ ಕ್ಯೂ..

530

Get real time updates directly on you device, subscribe now.

ಕುಣಿಗಲ್‌: ತಾಲೂಕಿನಾದ್ಯಂತ ಮಳೆರಾಯನ ಕೃಪೆ ಕಳೆದ ಕೆಲ ದಿನಗಳಿಂದ ಉತ್ತವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ, ಯುರಿಯಾ ರಸಗೊಬ್ಬರಕ್ಕೆ ಪಟ್ಟಣದ ಟಿಎಪಿಸಿಎಂಎಸ್‌ ಬಳಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ರೈತರು ಸೋಮವಾರ ಸಾಲುಗಟ್ಟಿ ನಿಂತರು.
ಕಳೆದೊಂದು ವಾರದಿಂದಲೂ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ, ಈಗಾಗಲೆ ಒಟ್ಟಾರೆ 47 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿಬೆಳೆ ಕೈಗೊಂಡಿದ್ದಾರೆ. ರಾಗಿ ಬೆಳೆಗೆ ಈಗ ಯುರಿಯಾ ರಸಗೊಬ್ಬರ ಪ್ರಮುಖವಾಗಿ ನೀಡಬೇಕಿದೆ, ಹೀಗಾಗಿ ಯುರಿಯಾ ಗೊಬ್ಬರಕ್ಕೆ ಇನ್ನಿಲ್ಲದ ಬೇಡಿಗೆ ಹೆಚ್ಚಿದೆ, ರೂ.266 ದರ ಇರುವ ಒಂದು ಮೂಟೆ ಯುರಿಯಾ ಗೊಬ್ಬರ ಕಳೆದ ಎರಡುದಿನದಿಂದ ಕಾಳಸಂತೆಯಲ್ಲಿ 700 ರಿಂದ ಸಾವಿರ ರೂ.ಗೆ ಬಿಕರಿಯಾಗುತ್ತಿದೆ. ಇದನ್ನು ನಿಯಂತ್ರಿಸದ ಕೃಷಿ ಅಧಿಕಾರಿಗಳ ಕ್ರಮ ಖಂಡಿಸಿದ ಅನ್ನದಾತರು ರೈತ ಸಂಘದ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿಗಳು, ತಾಲೂಕಿಗೆ ರಸಗೊಬ್ಬರ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯವಹಿಸಿರುವ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಮಾತನಾಡಿ, ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ ಅಲ್ಲ, ರಸಗೊಬ್ಬರ ಮಾಲೀಕರ ಮನೆ ಕಡೆಗೆ, ಕಾಳಸಂತೆಯಲ್ಲಿ ಮಾರಾಟ ಮಾಡುವ ಅಂಗಡಿಯವರ ಮೇಲೆ ಕ್ರಮಕೈಗೊಳ್ಳದೆ ರೈತರ ಶೋಷಣೆ ಮಾಡಲು ಅಂಗಡಿಯವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿ, ತಾಲೂಕಿನ ಬೇಡಿಕೆಗೆ ತಕ್ಕಂತೆ ಯುರಿಯಾ ಸಂಗ್ರಹಕ್ಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ರಸಗೊಬ್ಬರದ ಬೆಲೆ ಇಷ್ಟೆ ಮಾರಾಟ ಮಾಡಬೇಕೆಂದು ಪ್ರಚಾರ ಮಾಡಿಲ್ಲ, ಇದುವರೆಗೂ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿರುವವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ, ರೈತರಿಗೆ ಅವಶ್ಯಕವಾಗಿರುವ ಹಂತದಲ್ಲಿ ಯುರಿಯಾ ನೀಡದೆ ನಂತರ ಕೊಡಲು ಮುಂದಾಗುವ ಕ್ರಮ ಖಂಡನೀಯ ಎಂದಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ಮಾತನಾಡಿ, ತಾಲೂಕಿಗೆ 2,200 ಟನ್‌ ಯುರಿಯಾ ಬೇಕು, 1,300 ಟನ್‌ ವಿತರಣೆ ಮಾಡಲಾಗಿದೆ, ಈ ಮಾಹೆಯಲ್ಲಿ 250 ಟನ್‌ ನೀಡಲು ವ್ಯವಸ್ಥೆ ಮಾಡಿದ್ದು, ಉಳಿಕೆ 650 ಟನ್‌ ಹಂತ ಹಂತವಾಗಿ ಪೂರೈಸಲಾಗುವುದು. 45 ಡೀಲರ್‌, 19 ಕೃಷಿ ಸಹಕಾರ ಸಂಘದ ಮೂಲಕ ವಿತರಣೆ ಮಾಡಬೇಕಿದೆ. ಆದರೆ ಕೇವಲ 5 ಕೃಷಿ ಸಹಾಕಾರ ಸಂಘ ವಿತರಣೆ ಮಾಡುತ್ತಿದ್ದಾರೆ. ಉಳಿದವರು ಆಸಕ್ತಿ ತೋರುತ್ತಿಲ್ಲ, ಕಾಳಸಂತೆ ಮಾರಾಟದ ಬಗ್ಗೆ ಒಂದು ಲಿಖಿತ ದೂರು ಬಂದಿದೆ, ಕ್ರಮ ಕೈಗೊಂಡು ಎಲ್ಲಾ ಮಾರಾಟಗಾರರಿಗೂ ಎಚ್ಚರಿಸಲಾಗಿದೆ, ಕಾಳಸಂತೆ ಮಾರಾಟದ ಬಗ್ಗೆ ಲಿಖಿತ ದೂರು ಬಂದಲ್ಲಿ ಕ್ರಮ ಜರುಗಿಸಲಾಗುವುದು, ಯಾವುದೇ ಮಾರಾಟಗಾರರಿಗೆ ಮೂರು ಬಾರಿ ನೋಟಿಸ್‌ ನೀಡಿದ ನಂತರ ಶಿಸ್ತುಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!