ತುಮಕೂರು: ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ ಹಾಗೂ ತುಮಕೂರಿನಲ್ಲಿ ಸುಮಾರು 53 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಲೋಕಾರ್ಪಣೆ ಮಾಡಿದರು.
ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಲ್ಯಾಪ್ ಟಾಪ್ ನೀಡುವ ಮೂಲಕ ಮನೆಯಲ್ಲಿಯೇ ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಡುವ ಚಿಂತನೆ ಮಾಡಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.
ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ 17.83 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (ಪ.ವರ್ಗ) – 736ಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ಪರಿಶಿಷ್ಟ ವರ್ಗಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್, ಮುರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದ್ದು, ವಸತಿ ಶಾಲೆಗೆ ಅವಶ್ಯಕವಿರುವ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಅವಶ್ಯವಿರುವ ಪೀಠೋಪಕರಣ ಹಾಗೂ ಪ್ರಯೋಗಾಲಯದ ಕೊರತೆ ಇದ್ದಲ್ಲಿ ಕೂಡಲೇ ಮಂಜೂರು ಮಾಡಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ರಾಜ್ಯಾದ್ಯಂತ ಸುಸಜ್ಜಿತ ವಸತಿ ಶಾಲೆಗಳನ್ನು ನಿರ್ಮಿಸುತ್ತಿದೆ. ವಸತಿ ಶಾಲೆಗಳ ಸದುಪಯೋಗಪಡೆದುಕೊಂಡು ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಂಸ್ಕಾರವಂತರಾಗಬೇಕು ಎಂದ ಅವರು, ಕೊರೊನಾ ಅಡ್ಡಿಯಾಗದಂತೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಸೂಕ್ತ ಅನುವು ಮಾಡಿಕೊಡಲಿದೆ ಎಂದು ತಿಳಿಸಿದರು.
ಶಿಡ್ಲೆಕೋಣದ ಸಂಜಯಕುಮಾರ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದುಳಿದ ಜನಾಂಗದ ಶೈಕ್ಷಣಿಕ ಅಭಿವೃದ್ಧಿಗಾಗಿ ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹಿಂದುಳಿದ ವರ್ಗದ ಮಕ್ಕಳು ಶಿಕ್ಷಿತರಾದರೆ ಸಮಾಜ ಏಳಿಗೆಯಾಗಲಿದೆ ಎಂದು ಹೇಳಿದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ, ಸರ್ಕಾರವು ವಸತಿ ಶಾಲೆಗಳನ್ನು ನಿರ್ಮಾಣ ಮಾಡುವ ಮೂಲಕ ಹಿಂದುಳಿದ ವರ್ಗದವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪಾವಗಡದಲ್ಲಿ ನಿರ್ಮಿಸಲಾಗಿರುವ ವಸತಿ ಶಾಲೆ ಸುಸಜ್ಜಿತವಾಗಿದ್ದು, ಅವಶ್ಯಕವಿರುವ ಎಲ್ಲಾ ಮೂಲಭೂತ ಸೌಕರ್ಯ ಒಳಗೊಂಡಿದೆ ಎಂದರು.
ನಂತರ ಪಾವಗಡದಲ್ಲಿ 1ಕೋಟಿ ರೂ.ವೆಚ್ಚದ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟಿಸಿ ಮಾತನಾಡಿ, ಪಾವಗಡದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ನಾನೇ ಪೂಜೆ ಸಲ್ಲಿಸಿ ಈಗ ನಾನೇ ಉದ್ಘಾಟನೆ ಮಾಡುತ್ತಿರುವುದು ಖುಷಿ ವಿಚಾರವಾಗಿದೆ. ರಾಜ್ಯದ ಉದ್ದಗಲಕ್ಕೂ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುತ್ತಿದೆ. ಸಮುದಾಯ ಒಗ್ಗಟ್ಟಾಗಿ ಸಮುದಾಯ ಭವನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರಲ್ಲದೆ ಈ ಭವನದಲ್ಲಿ ವಾರಕ್ಕೊಮ್ಮೆ ರಾಮಾಯಣ ಹಾಗೂ ವಾಲ್ಮೀಕಿ ಅವರ ವಿಚಾರಧಾರೆಗಳನ್ನು ಸಾರುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು.
ಪರಿಶಿಷ್ಟ ವರ್ಗಗಳ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಆಗಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಈಡೇರಿಸಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿ ನೀಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರದಲ್ಲಿಯೂ ಶೇ.7ರಷ್ಟು ಮೀಸಲಾತಿ ಕಲ್ಪಿಸುವ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪರಿಶಿಷ್ಟ ವರ್ಗಗಳ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕು. ಸಮುದಾಯದ ಬಡವರ ಅಭಿವೃದ್ಧಿಗಾಗಿ ಗಂಗಾ ಕಲ್ಯಾಣ ಯೋಜನೆ ಮೂಲಕ ಬೋರ್ ವೆಲ್ ಗಳನ್ನು ಕೊರೆಸಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ಹಾಗೂ ಸಮಾಜದ ಯುವಕರ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗದಂತಹ ವಿವಿಧ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ, ದಿ.ಡಿ.ನರಸಿಂಹಯ್ಯ ಅವರು ವಾಲ್ಮೀಕಿ ಭವನ ನಿರ್ಮಾಣಕ್ಕೆ ನಿವೇಶನವನ್ನು ದಾನವಾಗಿ ನೀಡಿದ್ದ ಫಲವಾಗಿ ಸುಸಜ್ಜಿತ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಸಾಂಸ್ಕೃತಿಕ ಚಟುವಟಿಕೆ, ಸಮಾರಂಭ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಸಮುದಾಯವರು ಈ ಭವನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನ ವೈ.ಎನ್.ಹೊಸಕೋಟೆಯಲ್ಲಿ ಪರಿಶಿಷ್ಟ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಪ್ರದೇಶದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕು. ಗ್ರಾಮೀಣ ಭಾಗದ ಜನರ ಅನುಕೂಲದ ದೃಷ್ಟಿಯಿಂದ ತಾಲೂಕಿನ ಎಲ್ಲಾ ಹೋಬಳಿಗೊಂದು ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ನಿವೇಶನವನ್ನು ದಾನ ನೀಡಿದ ದಿ.ನರಸಿಂಹಯ್ಯ ಮತ್ತು ದೇವಿರಮ್ಮ ಅವರ ಪುತ್ರ ಓಂಕಾರ್‌ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಶಿಡ್ಲೆಕೋಣದ ಸಂಜಯಕುಮಾರ ಸ್ವಾಮೀಜಿ ಆಶೀರ್ವಚನ ನೀಡಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸರ್ಕಾರ ಮತ್ತಷ್ಟು ಒತ್ತುಕೊಡಬೇಕು. ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ಸಮುದಾಯಕ್ಕೆ ರಾಜ್ಯ ಸರ್ಕಾರವು ಶೇ.7ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್. ಕಾಂತರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎನ್. ತ್ಯಾಗರಾಜು, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ, ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಇಲಾಖೆಯ ಅಧಿಕಾರಿಗಳಾದ ಎಚ್.ಶ್ರೀನಿವಾಸ್, ರಾಜ್‌ಕುಮಾರ್ ಇತರರಿದ್ದರು.
ಬಳಿಕ ಸಚಿವರು, ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಸೋದೇನಹಳ್ಳಿಯಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಅಂಬೇಡ್ಕರ್ ವಸತಿ ಶಾಲೆ ಹಾಗೂ ಶಿರಾ ನಗರದಲ್ಲಿ 3.95ಕೋಟಿ ರೂ. ವೆಚ್ಚದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.
53 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಕ್ರಮ ಲೋಕಾರ್ಪಣೆ: ಸಚಿವ ಶ್ರೀರಾಮುಲು
ಮಕ್ಕಳು ಶಿಕ್ಷಣ ಪಡೆದು ಸಂಸ್ಕಾರವಂತರಾಗಲಿ
Get real time updates directly on you device, subscribe now.
Prev Post
Next Post
Comments are closed.