ತುಮಕೂರು: ಎಡ, ಬಲದ ಹೆಸರಿನಲ್ಲಿ ತಮ್ಮೊಳಗೆ ಕಂದಕ ಸೃಷ್ಟಿಸಿಕೊಂಡಿದ್ದ ಪರಿಶಿಷ್ಟ ಜಾತಿಯ ಅಸ್ಪಷ್ಯ ಸಮುದಾಯಗಳು, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡಸಲು ಒಂದೇ ವೇದಿಕೆ ಅಡಿಯಲ್ಲಿ ಹೊರಟಿರುವುದು ಇತರೆ ಸಮುದಾಯಗಳಿಗೆ ಮಾದರಿಯಾಗಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಛಲವಾದಿ, ಆದಿಜಾಂಭವ ವಸತಿಹೀನ ಹಾಗೂ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ಧಿ ಸಂಘ ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪಂಗಡ, ಉಪ ಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದ, ಅವರನ್ನು ಒಂದು ಮಾಡುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಶತ ಶತಮಾನಳಿಂದ ಶೋಷಣೆಗೆ ಒಳಗಾಗಿದ್ದರೂ ಕೆಲವರು ಉರುಳಿಸಿದ ದಾಳಕ್ಕೆ ಬಲಿಯಾಗಿ, ಹಂತ ಹಂತವಾಗಿ ತಮ್ಮ ಎಲ್ಲಾ ಅಧಿಕಾರಗಳಿಂದ ವಂಚಿತವಾಗುತ್ತಿದ್ದ ಎಡ, ಬಲ ಸಮುದಾಯಗಳು ಒಂದಾಗಿರುವುದು ಇಡೀ ದೇಶಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಕೀಲಿ ಕೈ ಶಿಕ್ಷಣ ಎಂದಿದ್ದರು. ಜೊತೆಗೆ ಶಿಕ್ಷಣ ರಾಜಕೀಯ ಅಧಿಕಾರ ಪಡೆಯಲು ಅನುಕೂಲವಾಗಬೇಕೆಂಬ ಕನಸು ಹೊಂದಿದ್ದರು. ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‌ರಾಂ, ಪೊ.ಬಿ.ಕೃಷ್ಣಪ್ಪ ಇವರೆಲ್ಲರ ಕನಸು ನನಸಾಗಬೇಕೆಂದರೆ ಈ ರಾಜ್ಯಕ್ಕೆ ಡಾ.ಜಿ.ಪರಮೇಶ್ವರ್ ಸೇರಿದಂತೆ ದಲಿತರೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ನಿಮ್ಮಗಳ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್ ರಾಂ ಪುತ್ಥಳಿ ಅನಾವರಣಗೊಳ್ಳಬೇಕೆಂಬ ನಿಮ್ಮ ಬೇಡಿಕೆಗೆ ನನ್ನ ಸಂಪೂರ್ಣ ಸಹಮತವಿದೆ. 9 ತಿಂಗಳ ಹಿಂದೆಯೇ ನಮ್ಮ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ. ನಿಮ್ಮ ಜೊತೆಗೆ ನಾನು ಕುಳಿತು ಹೋರಾಟ ನಡಸುತ್ತೇನೆ, ಅಲ್ಲದೆ ಪುತ್ಥಳಿ ನಿರ್ಮಾಣಕ್ಕೆ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ದೂರವಾಣಿ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್, ಎಡ, ಬಲಗಳು ಒಂದು ವೇದಿಕೆಯಡಿ ಬರುವುದು ಇಂದಿನ ತುರ್ತು ಅಗತ್ಯವಾಗಿತ್ತು, ಈ ನಿಟ್ಟಿನಲ್ಲಿ ತುಮಕೂರಿನ ಯುವಜನರು ಹೆಜ್ಜೆ ಇರಿಸಿರುವುದು ಸ್ವಾಗರ್ತಾಹ ಬೆಳವಣಿಗೆ, ಶೋಷಿತರ ನಡುವೆಯೇ ಈ ರೀತಿಯ ವಿಭಾಗಗಳು ಏಕಾದವು ಎಂಬುದು ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ. ಇಂತಹ ಬೇಲಿಯನ್ನು ಕಿತ್ತೊಗೆಯಬೇಕಿದೆ.ಈ ನಿಟ್ಟಿನಲ್ಲಿ ನಿರಂತರ ನಿಮ್ಮ ಬೆಂಬಲಕ್ಕೆ ನಿಲ್ಲುವುದಲ್ಲದೆ, ನಿಮ್ಮ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ಶುಭ ಕೋರಿದರು.
ಶಾಸಕ ಜೋತಿಗಣೇಶ್ ಮಾತನಾಡಿ, ಇದೊಂದು ಜಾತ್ಯಾತೀತ, ಪಕ್ಷಾತೀತ ಕಾರ್ಯಕ್ರಮ ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಹೊರಟಿದ್ದಾರೆ.ವಸತಿ ಹೀನ, ಕೃಷಿ ಭೂಮಿ ರಹಿತ ಛಲವಾದಿ, ಆದಿಜಾಂಭವ ಸಮುದಾಯದ ಜನರಿಗೆ ನ್ಯಾಯ ಕೊಡಿಸಬೇಕೆಂಬ ನಿಮ್ಮ ಉದ್ದೇಶಕ್ಕೆ ನನ್ನ ಬೆಂಬಲವಿದೆ.ತುಮಕೂರು ನಗರದಲ್ಲಿ ವಸತಿಹೀನರಿಗೆ ಮನೆ ನಿರ್ಮಿಸಿ ಕೊಡಲು 17 ಎಕರೆ ಜಾಗ ಗುರುತಿಸಿದ್ದು, ಡಿಮೆಂಡ್ ಸರ್ವೆ ಕಾರ್ಯಕ್ಕೆ ಅರ್ಜಿ ಆಹ್ವಾನಿಸಲಾಗುವುದು. ಆಗ ನೀವುಗಳು ನಿಮ್ಮ ಅಕ್ಕಪಕ್ಕದ ಆರ್ಹರೊಂದಿಗೆ ಅರ್ಜಿ ಸಲ್ಲಿಸಿದರೆ ಸಮಿತಿಯ ಮುಂದಿಟ್ಟು ಮನೆ ಮಂಜೂರು ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಪುತ್ಥಳಿ ಅನಾವರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡು, ಮುಖ್ಯಮಂತ್ರಿಗಳಿಂದಲೇ ಶಂಕು ಸ್ಥಾಪನೆ ನೆರವೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ನಗರಪಾಲಿಕೆ 24.10 ರ ಅನುದಾನದಲ್ಲಿ ದಲಿತರ ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಯುಜಿಡಿ ಸಂರ್ಪಕ, ಮನೆ ನಿರ್ಮಾಣ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲು ಧನ ಸಹಾಯ ನೀಡಲಾಗುವುದು. ಅಲ್ಲದೆ ಉದ್ಯಮಶೀಲತಾ ಯೋಜನೆಯಡಿ ಹೆಣ್ಣು ಮಕ್ಕಳಿಗೂ ಹಲವಾರು ಸೌಲಭ್ಯಗಳಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು, ಹಾಗೆಯೇ ಸ್ಲಂಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಸಂಬಂಧ ಪ್ರಕ್ರಿಯೆ ಚಾಲನೆಯಲ್ಲಿ 94 ಸಿಸಿಯಲ್ಲಿ ಅರ್ಜಿ ಸಲ್ಲಿಸಿ, ಹಕ್ಕುಪತ್ರ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಛಲವಾದಿ, ಆದಿಜಾಂಬವ ವಸತಿಹೀನ ಮತ್ತು ಕೃಷಿಭೂಮಿ ರಹಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಂಗಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎನ್.ರಾಮಯ್ಯ, ಭಾನುಪ್ರಕಾಶ್, ಎಂ.ವಿ.ರಾಘವೇಂದ್ರ ಸ್ವಾಮಿ, ಕೋಡಿಯಾಲ ಮಹದೇವು, ಗೂಳರಿವೆ ನಾಗರಾಜು, ಮೆಳೆಕಲ್ಲಹಳ್ಳಿ ಯೋಗೀಶ್, ನರಸಿಂಹಮೂರ್ತಿ, ಶಿವರಾಜು ಕೌತುಮಾರ ನಹಳ್ಳಿ, ಜಗದೀಶ್, ಗೂಳೂರು ರಾಜಣ್ಣ ಇತರರು ಇದ್ದರು.
Get real time updates directly on you device, subscribe now.
Prev Post
Comments are closed.