ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗೆ ಒತ್ತಾಯ

303

Get real time updates directly on you device, subscribe now.

ತುಮಕೂರು: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗೆ ಬದಲಾಗಿ, ಲಾಭದಾಯಕ ಬೆಲೆ ನೀಡಬೇಕು, ಹಾಲಿಗೆ ವೈಜ್ಞಾನಿಕ ಬೆಲೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಎಪಿಎಂಸಿಗಳ ಒಳಗೆ ಮತ್ತು ಹೊರಗೆ ನಿಗಧಿಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡದಂತೆ ಕಾನೂನು ತರುವಂತೆ ಆಗ್ರಹಿಸಿ,ಭಾರತೀಯ ಕಿಸಾನ್‌ ಸಂಘ, ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ಶಂಕರಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಕೃಷಿ ಪರಿಕರಗಳ ದರ ಹೆಚ್ಚಳ, ಮಾನವ ಸಂಪನ್ಮೂಲದ ಕೊರತೆ ಸೇರಿದಂತೆ ಹಲವಾರು ನೂನ್ಯತೆಗಳಿಂದ ಕೃಷಿ ಇಂದು ಲಾಭದಾಯಕ ವೃತ್ತಿಯಾಗಿಲ್ಲ. ಇದರ ಪರಿಣಾಮ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.ಹಾಗಾಗಿ ಇತರೆ ಕೈಗಾರಿಕೆಗಳಲ್ಲಿ ಉತ್ಪಾಧನೆಯಾಗುವ ವಸ್ತುಗಳಿಗೆ ಬೆಲೆ ನಿಗದಿ ಮಾಡುವ ಅಧಿಕಾರವನ್ನು ಅವರಿಗೆ ನೀಡಿರುವಂತೆ ಕೃಷಿ ಉತ್ಪನ್ನಗಳ ಬೆಲೆಯನ್ನು ರೈತರೇ ನಿಗದಿ ಮಾಡುವ ಕಾಯ್ದೆ ಜಾರಿಗೆ ಬರಬೇಕೆಂದರು.
ರೈತರಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬುದು ರೈತರ ಹಲವಾರು ವರ್ಷಗಳ ಬೇಡಿಕೆಯಾಗಿದೆ, ಪ್ರಧಾನ ಮಂತ್ರಿಗಳು ಈ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ರೈತರ ಮತ್ತಷ್ಟು ಆತ್ಮಹತ್ಯೆ ಪ್ರಕರಣ ವರದಿಯಾಗಲಿವೆ ಎಂದ ಶಂಕರಪ್ಪ, ಸರಕಾರಿ ಅಧಿಕಾರಿಗಳಿಗೆ ಒಂದು ನಿಶ್ಚಿತ ಆದಾಯವಿರುವ ರೀತಿ ರೈತರಿಗೆ ನಿಗದಿತ ಆದಾಯ ಸಿಗುವಂತಹ ರೀತಿಯಲ್ಲಿ ವೈಜ್ಞಾನಿಕ ರೀತಿಯ ಬೆಲೆ ನಿಗದಿ ಮಾಡುವತ್ತ ಸರಕಾರ ಮುಂದಾಗುವಂತೆ ಆಗ್ರಹಿಸಿದರು.
ಭಾರತೀಯ ಕಿಸಾನ್‌ ಸಂಘದ ದಕ್ಷಿಣ ಪ್ರಾಂತ್ಯಕಾರ್ಯದರ್ಶಿ ಸುರೇಶ್‌ ಮಾತನಾಡಿ, ನಾವು ಇತರೆ ಸಂಘಟನೆಗಳ ರೀತಿ ಸಂಘರ್ಷದ ಹಾದಿ ತುಳಿಯದೆ, ಸೌಹಾರ್ದಯುತವಾಗಿಯೇ ರೈತರಿಗೆ ಲಾಭದಾಯಕ ಬೆಲೆ ಕಲ್ಪಿಸಲು ನಿರಂತರ ಹೋರಾಟ ನಡೆಸಲಾಗುತ್ತಿದೆ. ಸರಕಾರ ನಮ್ಮ ಮನವಿಗೆ ಸ್ಪಂದಿಸಲಿದೆ ಎಂಬ ನಂಬಿಕೆ ಇದೆ ಎಂದರು.
ಭಾರತೀಯ ಕಿಸಾನ್‌ ಸಂಘದ ತುಮಕೂರು ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಹಾರೋನಹಳ್ಳಿ ಮಾತನಾಡಿ, ಪಂಜಾಬ್‌ ಸರಕಾರದ ರೀತಿ, ಎಪಿಎಪಿಯವರು ಒಂದು ಕೃಷಿ ಉತ್ಪನ್ನಕ್ಕೆ ನಿಗದಿ ಮಾಡುವ ಬೆಲೆಯಲ್ಲಿ ಮಾರುಕಟ್ಟೆಯ ಹೊರಗೆ ಅಥವಾ ಒಳಗೆ ಖರೀದಿಸಬೇಕು, ಖರೀದಿಸದ ವರ್ತಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತಹ ಕಾಯ್ದೆ ಜಾರಿಗೆ ತರಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪ್ರತಿವರ್ಷ ಹಣದುಬ್ಬರ ಪ್ರಮಾಣ ಏರಿಳಿತ ಕಾಣುತ್ತಿದೆ. ಇದರಿಂದ ಕೃಷಿ ವಲಯದ ಮೇಲೆ ದೊಡ್ಡ ಹೊಡೆತ ಬೀಳುತ್ತಿದೆ. ಹಾಗಾಗಿ ಹಣದುಬ್ಬರ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿವರ್ಷ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಪಡಿಸಬೇಕು, ಹಾಗಾದರೆ ಮಾತ್ರ ಯುವಕರು ಕೃಷಿ ಕಾಯಕದತ್ತ ಮುಖ ಮಾಡಲು ಸಾಧ್ಯ, ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಸಂತೋಷ್‌ ಹಾರೋನಹಳ್ಳಿ ತಿಳಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್‌ ಸಂಘದ ದಕ್ಷಿಣ ಪ್ರಾಂತೀಯ ಕಾರ್ಯಕಾರಿ ಮಂಡಳಿ ಸದಸ್ಯ ಸತೀಶ್‌, ತುಮಕೂರು ತಾಲೂಕು ಅಧ್ಯಕ್ಷ ವಿಜಯಕುಮಾರ್‌ ಹೊನ್ನೇನಹಳ್ಳಿ, ಕಾರ್ಯದರ್ಶಿ ನರಸೇಗೌಡ ಭಾಗವಹಿಸಿದ್ದರು. ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!