ಮಕ್ಕಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

310

Get real time updates directly on you device, subscribe now.

ಕುಣಿಗಲ್‌: ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದ್ದರೂ ಧ್ವನಿ ಎತ್ತದ ಹಿಂದೂ ಸಂಘಟನೆಗಳ ಕ್ರಮ ಖಂಡನೀಯ ಎಂದು ದಲಿತಮುಖಂಡ ದಲಿತ್‌ ನಾರಾಯಣ ಹೇಳಿದರು.
ಬುಧವಾರ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಕೋಲಾರ ಜಿಲ್ಲೆಯ ತಾಡಿಗೋಳ್ ಪ್ರಕರಣ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಮೈಸೂರು, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ಗೌರಿ ಹಬ್ಬ ಮುಂದಿರುವ ಸಮಯದಲ್ಲಿ ತಾಡಿಗೋಳ್‌ ಗ್ರಾಮದ ದಲಿತ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆ ಬಸ್ಸಿನಲ್ಲಿ ಹೋಗುವಾಗ ಪುಂಡರು ಚೇಡಿಸಿದ್ದು, ಇದನ್ನು ಪ್ರಶ್ನಿಸಿದ ಹೆಣ್ಣು ಮಕ್ಕಳ ಪೋಷಕರು, ಸಂಬಂಧಿಕರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಇದು ವ್ಯವಸ್ಥೆಯ ಅಣಕವಾಗಿದೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದ್ದರೂ ಇದರ ಬಗ್ಗೆ ಚಕಾರ ಎತ್ತದ ಹಿಂದೂ ಸಂಘಟನೆಗಳು, ದೂರದ ತಾಲಿಬಾನ್‌ ಬಗ್ಗೆ ಮಾತನಾಡುತ್ತಾರೆ ಹೊರತು ಹಿಂದೂ ಧರ್ಮದವರೆ ಆದ ದಲಿತ ಹೆಣ್ಣು ಮಕ್ಕಳ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ, ಇದು ಖಂಡನೀಯ. ಹೆಣ್ಣುಮಕ್ಕಳು ಯಾವುದೇ ವರ್ಗ, ಜಾತಿಯವರಾದರೂ ಅವರನ್ನು ಗೌರವಿಸಿ, ರಕ್ಷಿಸುವ ಕೆಲಸವಾಗಬೇಕು, ದೌರ್ಜನ್ಯ ನಡೆಸಿದವರ ಮೇಲೆ ಕಠಿಣ ಕ್ರಮವಾಗಬೇಕೆಂದು ಒತ್ತಾಯಿಸಿದರು.
ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಶಿವಶಂಕರ್‌ ಮಾತನಾಡಿ, ಸಂವಿಧಾನದ ಅಂಶದ ಪ್ರಕಾರ ಪ್ರತಿಯೊಬ್ಬರು ಗೌರವಯುತವಾಗಿ ಬದುಕುವ ಹಕ್ಕಿದೆ, ಆದರೆ ತಾಡಿಗೋಳ್‌ ಪ್ರಕರಣ ಸಂವಿಧಾನದ ಆಶಯಗಳನ್ನು ಮರೆಮಾಚುವಂತಾಗಿದೆ. ಈ ಸರ್ಕಾರ ಬಂದಾಗಿನಿಂದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಜನ ರೊಚ್ಚಿಗೇಳುವ ಮುನ್ನ ಎಚ್ಚೆತ್ತು ದೌರ್ಜನ್ಯ ತಡೆಗಟ್ಟಬೇಕು. ತಾಡಿಗೋಳ್‌ ಪ್ರಕರಣದಲ್ಲಿ ಪಾಲ್ಗೊಂಡ ಪುಂಡುಕೋರರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಕೃಷ್ಣರಾಜು, ನಾಗಣ್ಣ, ಕುಮಾರ್‌ ಮಾತನಾಡಿದರು. ಪುರಸಭೆ ಸದಸ್ಯರಾದ ದೇವರಾಜು, ಆನಂದಕುಮಾರ್‌, ಮಲ್ಲಿಪಾಳ್ಯ ಶ್ರೀನಿವಾಸ, ಮುಖಂಡರಾದ ಆನಂದ್‌, ನರಸಿಂಹ ಪ್ರಸಾದ್‌, ರಾಮಚಂದ್ರಯ್ಯ, ನರಸಿಂಹಮೂರ್ತಿ ಇತರರು ಇದ್ದರು. ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!