ನಿಯಮಾನುಸಾರ ತಾರತಮ್ಯವಿಲ್ಲದೆ ರಸ್ತೆ ಮಾಡಿ

133

Get real time updates directly on you device, subscribe now.

ತುಮಕೂರು: ನಗರದ 22ನೇ ವಾರ್ಡ್ ನ ವಾಲ್ಮೀಕಿ ನಗರ ಬಿ.ಎಚ್‌.ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸರ್ವೀಸ್‌ ರಸ್ತೆಯನ್ನು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವತಿಯಿಂದ ಅಗಲೀಕರಣ ಮಾಡುತ್ತಿದ್ದು, ನಿಯಮಾನುಸಾರ ತಾರತಮ್ಯವಿಲ್ಲದೆ ಪಾದಚಾರಿ ರಸ್ತೆ ಮಾಡಬೇಕು ಎಂದು ವಾಲ್ಮೀಕಿನಗರ ನಾಗರೀಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಸೋಮವಾರ ಕಾಮಗಾರಿ ನಡೆಯುತ್ತಿರುವ ಎಸ್‌ಐಟಿ ಮುಂಭಾಗದ ಬಿ.ಎಚ್‌.ರಸ್ತೆಗೆ ಹೊಂದಿಕೊಂಡಿರುವ ಪಾದಚಾರಿ ರಸ್ತೆ ಅಗಲೀಕರಣ ಸ್ಥಳಕ್ಕೆ ಆಗಮಿಸಿದ ಸಮಿತಿಯ ಪದಾಧಿಕಾರಿಗಳು ಹಾಗೂ ನಾಗರಿಕರು, ನಗರದ 22ನೇ ವಾರ್ಡ್‌ನ ವಾಲ್ಮೀಕಿ ನಗರ ಸರ್ವೀಸ್‌ ರಸ್ತೆಯ ಅಗಲೀಕರಣ ಕಾರ್ಯ ನಡೆಯುತ್ತಿರುವುದು ಸ್ವಾಗತಾರ್ಹ, ಇಲ್ಲಿ ಕೈಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಕಾರ್ಯ ಈಗಾಗಲೇ ಒತ್ತುವರಿ ಮಾಡಿಕೊಂಡಿರುವುದು ಖಾಸಗಿ ಅತಿಕ್ರಮಣಕ್ಕೆ ಪೂರಕವಾಗಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ಸಿ.ದೊಡ್ಡಬಸಪ್ಪ ಮಾತನಾಡಿ, ಈ ರಸ್ತೆಯ ಅಗಲೀಕರಣ ಕಾರ್ಯ ಹಲವು ಕಡೆ ಮುಖ್ಯರಸ್ತೆಯ ಮಧ್ಯಭಾಗದಿಂದ ಆರಂಭ ಮಾಡುತ್ತಿದ್ದು, ಆರಂಭದಿಂದಲೂ ಸರ್ವೀಸ್‌ ರಸ್ತೆ ಅಗಲೀಕರಣವಾಗಬೇಕು, ಅದನ್ನು ಬಿಟ್ಟು ಅಲ್ಲಲ್ಲಿ ಮಧ್ಯಭಾಗದಲ್ಲಿ ಕಾಮಗಾರಿ ಆರಂಭಿಸುತ್ತಿದ್ದು, ಬಲಾಢ್ಯರಿಗೆ ಅನುಕೂಲ ಕಲ್ಪಿಸುವ ಉದ್ಧೇಶವಿಟ್ಟುಕೊಂಡು ತಾರತಮ್ಯವೆಸಗುತ್ತಿದ್ದಾರೆ ಎಂದರು.
ಸಿಡಿಪಿ ಅಳತೆಯ ಪ್ರಕಾರ ರಸ್ತೆ ಅಗಲೀಕರಣವಾಗಬೇಕು, ಆದರೆ ಸಿಡಿಪಿ ಅಳತೆಯಂತೆ ಸರ್ವೀಸ್‌ ರಸ್ತೆ ಅಗಲೀಕರಣವಾಗುತ್ತಿಲ್ಲ, ಸರ್ವೀಸ್‌ ರಸ್ತೆಯಲ್ಲಿ ಅಂಗಡಿ ಮಳಿಗೆಗಳು ರಸ್ತೆಗೆ ಒತ್ತುವರಿಯಾಗಿದ್ದು, ಇಂತಹ ಕಿರಿದಾದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಮತ್ತು ಬಡಾವಣೆಯ ನಾಗರಿಕರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಯಾವುದೇ ತಾರತಮ್ಯ ಮಾಡದೆ ನ್ಯಾಯಯುತವಾಗಿ ಕಾಮಗಾರಿ ಮಾಡಿ, ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎಂಬ ತಾರತಮ್ಯ ಮಾಡಬಾರದು, ನಮ್ಮ ಅಕ್ಕಪಕ್ಕದ ಅಂಗಡಿಗಳನ್ನೂ ಮೊದಲು ತೆರವುಗೊಳಿಸಿ ನಂತರ ನಮ್ಮ ಅಂಗಡಿಗಳನ್ನು ತೆರವುಗೊಳಿಸಿ ನಾವು ಬಿಟ್ಟುಕೊಡಲು ಸಿದ್ಧರಾಗಿದ್ದೇವೆ, ಅದನ್ನು ಬಿಟ್ಟು ಬಲಾಢ್ಯರಿಗೆ ಒಂದು ಸಣ್ಣಪುಟ್ಟವರಿಗೆ ಮತ್ತೊಂದು ಎಂಬಂತೆ ಕಾಮಗಾರಿ ನಡೆಸಿದರೆ ನಾವು ಬಿಟ್ಟುಕೊಡಲು ಸಿದ್ಧರಿಲ್ಲ ಎಂದು ಇಲ್ಲಿರುವ ಕೆಲವು ಅಂಗಡಿಗಳ ಮಾಲೀಕರು ತಿಳಿಸಿದರು.
ಈಗಾಗಲೇ ಸಂಸದರು, ನಗರ ಶಾಸಕರು, ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಆಯುಕ್ತರು, ಮಹಾನಗರಪಾಲಿಕೆ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೂ ಪತ್ರದ ಮುಖೇನ ಮನವಿ ಮಾಡಿದ್ದು, ಸರ್ವೀಸ್‌ ರಸ್ತೆಯನ್ನು ತಾರತಮ್ಯ ಮಾಡದೇ ಎಲ್ಲರಿಗೂ ಒಂದೇ ನ್ಯಾಯ ಎಂಬ ಭಾವನೆಯನ್ನಿಟ್ಟುಕೊಂಡು ಸಿಡಿಪಿ ಅಳತೆಯ ಪ್ರಕಾರ ಮಾಡಬೇಕು, ಇಲ್ಲವಾದಲ್ಲಿ ನಾವು ರಸ್ತೆ ಅಗಲೀಕರಣ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಾಗರಿಕ ಹಾಗೂ ಅಂಗಡಿ ಮಾಲೀಕರಾದ ಕೆಂಪನರಸಯ್ಯ ಮಾತನಾಡಿ, ಸರ್ಕಾರ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಿದೆ. ನಮ್ಮ ಬಿಲ್ಡಿಂಗ್‌ ಎಲ್ಲಾ ಹೋದರೂ ನಾವು ಬಿಟ್ಟುಕೊಡಲು ಸಿದ್ಧ ಆದರೆ ಆರಂಭದಿಂದಲೂ ಕಾಮಗಾರಿ ನಡೆಸಿ, ಮಧ್ಯದಲ್ಲಿ ಬಂದು ಯಾಕೆ ತೊಂದರೆ ಕೊಡುತ್ತಿದ್ದೀರಾ? 1ರಿಂದ 3ರವರೆಗೆ ಬಿಟ್ಟು, 4ನೇ ಪಾಯಿಂಟ್‌ಗೆ ಬಂದು ಕಾಮಗಾರಿ ನಡೆಸುತ್ತಿದ್ದೀರಾ, 1ರಿಂದ ಕಾಮಗಾರಿ ಮಾಡಿಕೊಂಡು ಬನ್ನಿ, ಸಿಡಿಪಿ ಅಳತೆ ಪ್ರಕಾರ ನಾವೇ ಬಿಲ್ಡಿಂಗ್‌ ಹೊಡೆದುಕೊಡುತ್ತೇವೆ. ನಮ್ಮ ಅಂಗಡಿಯನ್ನು ಮಾತ್ರ ಟಾರ್ಗೆಟ್‌ ಮಾಡುವುದು ಸರಿಯಲ್ಲ, ಆರಂಭದಿಂದಲೂ ಕಾಮಗಾರಿ ನಡೆಸಿಕೊಂಡು ಬಂದರೆ ನಮ್ಮ ಅಂಗಡಿಯನ್ನೂ ಸಹ ಬಿಟ್ಟುಕೊಡುತ್ತೇವೆ. ಇಲ್ಲದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ, ನಮ್ಮ ತಲೆ ಹೋದರೂ ಸರಿಯೇ ಜೆಸಿಬಿ ಮುಂದೆ ತಲೆಕೊಡುತ್ತೇನೆ, ತಪ್ಪು ಮಾಡಿದರೆ ಶಿಕ್ಷೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
22ನೇ ವಾರ್ಡ್ ನ ಪಾಲಿಕೆ ಸದಸ್ಯ ಶ್ರೀನಿವಾಸ್‌ ಮಾತನಾಡಿ, ಈ ಭಾಗದಲ್ಲಿ ಓಡಾಡಲು ಜನತೆಗೆ ಇರುವುದು ಒಂದೇ ರಸ್ತೆ, ಒತ್ತುವರಿಯಾಗಿರುವುದನ್ನು ಮಾತ್ರ ತೆರವುಗೊಳಿಸುತ್ತಿದ್ದೇವೆ, ಮಾರ್ಕ್‌ ಮಾಡಿ ಅಂಗಡಿಯವರಿಗೇ ಹೊಡೆದುಕೊಳ್ಳಿ ಎಂದು ಹೇಳುತ್ತಿದ್ದೇವೆ. ಆದರೆ ಹಿಂದೆ ಮುಂದೆ ಯೋಚನೆ ಮಾಡುತ್ತಿದ್ದಾರೆ, ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ಕೊಡಿ ಎಂದು ಕೇಳುತ್ತಿದ್ದಾರೆ, ಆದ್ದರಿಂದ ಇನ್ನೂ ಸ್ವಲ್ಪ ದಿನ ಕಾಲಾವಕಾಶ ಕೊಟ್ಟು ಒತ್ತುವರಿ ತೆರವುಗೊಳಿಸಿದ ಮೇಲೆ ಕಾಮಗಾರಿ ಆರಂಭವಾಗುತ್ತದೆ. ಯಾವುದೇ ಗೊಂದಲವಿಲ್ಲದೆ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಗರ ನಾಗರೀಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರಸನ್ನಕುಮಾರ್‌, ಸದಸ್ಯರಾದ ವೆಂಕಟೇಶ್‌, ಶಿವಕುಮಾರ್‌, ತೋಂಟಾರಾದ್ಯ, ವಿನಯ್‌, ಟಿ.ಸಿ.ಮಂಜುನಾಥ್‌, ಒಡೆಯರ್‌, ಲಕ್ಷ್ಮಣಗೌಡ್ರು, ರಾಜೇಶ್‌, ಮಂಜುನಾಥ್‌, ಗಿರೀಶ್‌, ಪ್ರಕಾಶ್‌ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!