ತುಮಕೂರು: ಹಿಂದಿ ದಿವಸ್ ಆಚರಣೆ ವಿರೋಧಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ, ಸೆಪ್ಟೆಂಬರ್ 14 ರಂದು ಭಾರತದಾದ್ಯಂತ ಹಿಂದಿ ದಿವಸ್ ಎಂದು ಕೇಂದ್ರ ಒಕ್ಕೂಟ ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ, ಭಾರತದ ನೂರಾರು ಭಾಷೆ ಕಡೆಗಣಿಸಿ ಹಿಂದಿ ಭಾಷೆ ಮೆರೆಸುತ್ತಿರುವುದು ಖಂಡನೀಯ ಎಂದರು.
ಕೇಂದ್ರ ಸರ್ಕಾರ ಕರ್ನಾಟಕದ ಮಾತೃಭಾಷೆ ಕನ್ನಡ ಭಾಷೆಯನ್ನು ಕಗ್ಗೊಲೆ ಮಾಡುತ್ತಿದ್ದಾರೆ. ನಮ್ಮ ತಾಯಿ ನಮಗೆ ಮುಖ್ಯ, ನಮ್ಮ ಮಾತೃಭಾಷೆ ನಮಗೆ ಮುಖ್ಯ, ಕನ್ನಡ ನಮಗೆ ಮುಖ್ಯ, ಈಗಿನ ಕೇಂದ್ರ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಪಕ್ಷೀಯವಾಗಿ ಒಕ್ಕೂಟದ ವ್ಯವಸ್ಥೆ ಇದೆ ಎಂಬುದನ್ನೂ ಮರೆತು, ಕರ್ನಾಟಕ ರಾಜ್ಯದಲ್ಲಿ ಮತ್ತು ಇಡೀ ದೇಶಾದ್ಯಂತ ಹಿಂದಿ ದಿವಸ್ ಎಂದು ಆಚರಣೆ ಮಾಡುವಂತಹದ್ದು, ನಮ್ಮ ಕರ್ನಾಟಕ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ವಿರೋಧಿಸಿ ಇಂದು ಇಡೀ ರಾಜ್ಯಾದ್ಯಂತ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ್ರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿಯವರ ಆದೇಶದ ಮೇರೆಗೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೇವಲ ಹಿಂದಿ ಭಾಷೆ ಮಾತನಾಡುವ ರಾಜ್ಯಗಳು ಸೇರಿ ಭಾರತ ದೇಶವಾಗಿಲ್ಲ, ಇಲ್ಲಿ ಕನ್ನಡ, ತೆಲುಗು, ಮಲಯಾಳಿ, ಒಡಿಸ್ಸಾ ಸೇರಿದಂತೆ ಎಲ್ಲಾ ಅವರವರ ಮಾತೃಭಾಷೆಯಾದ ಒಕ್ಕೂಟದ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳನ್ನು ಕಸಿದುಕೊಂಡು ಇಂದು ಹಿಂದಿ ಭಾಷೆಗೆ ಪ್ರಾಧಾನ್ಯತೆ ಕೊಟ್ಟು ನಮ್ಮನ್ನೆಲ್ಲಾ ಕತ್ತಲಲ್ಲಿಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ, ಇದಕ್ಕೆ ಸಂಪೂರ್ಣ ವಿರೋಧಿಸುತ್ತೇವೆ, ಇದನ್ನು ಕೂಡಲೇ ವಾಪಸ್ ಪಡೆಯಬೇಕು, ನಮ್ಮ ಕನ್ನಡ ಭಾಷೆಗೆ ಮೊದಲ ಆದ್ಯತೆ ಕೊಡಬೇಕು ಎಂಬುದು ನಮ್ಮ ಜೆಡಿಎಸ್ ಪಕ್ಷದ ಸ್ಪಷ್ಟ ನಿಲುವಾಗಿದೆ. ಆದ್ದರಿಂದ ಹಿಂದಿ ಏರಿಕೆ ವಾಪಸ್ ಪಡೆಯದಿದ್ದರೆ 2023ಕ್ಕೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಆಡಳಿತಕ್ಕೆ ಬರುತ್ತದೆ, ಅಂದು ನಮ್ಮ ಭಾಷೆ, ನಮ್ಮ ಜಲ, ನೆಲ ಕಾಪಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ನಗರಾಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ, ಅಖಂಡ ಭಾರತವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಬೇಕೆಂಬ ಒಂದೇ ಒಂದು ದೃಷ್ಟಿಯಿಂದ ಬಿಜೆಪಿ ಈ ದೇಶವನ್ನು ಒಕ್ಕೂಟದ ವ್ಯವಸ್ಥೆ ಒಡೆದು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಬೇಕೆಂಬ ಹುನ್ನಾರ ಮಾಡುತ್ತಿರುವುದಕ್ಕೆ ಜೆಡಿಎಸ್ ವಿರೋಧಿಸುತ್ತದೆ ಎಂದರು.
ಭಾರತದ ದೇಶ ತನ್ನದೇ ಆದ ಪ್ರಾದೇಶಿಕ ಒಕ್ಕೂಟ ರಚಿಸಿಕೊಂಡಿದ್ದೇವೆ. 2,500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಇಂದು ತೇಜೋವಧೆ ಮಾಡಿ ಯಾವುದೇ ರಾಜ್ಯದಲ್ಲಿ ತನ್ನ ಪ್ರಾದೇಶಿಕ ಭಾಷೆಯಾದ ಹಿಂದಿಯನ್ನು ಉಳಿಸಿಕೊಳ್ಳದೇ ಇರುವಂತಹ ಹಿಂದಿಯನ್ನು ತಂದು ತನ್ನ ಸ್ವಾರ್ಥಕ್ಕೋಸ್ಕರ ತನ್ನ ಆಡಳಿತದಲ್ಲಿ ತಂದೆ ಎಂದು ಬೀಗುವುದಕ್ಕೋಸ್ಕರ ಪ್ರಾದೇಶಿಕತೆಯನ್ನು ಮರೆಮಾಚಿಸಿ ಸರ್ವಾಧಿಕಾರ ಮೆರೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ್ರು ಕಾವೇರಿ ನೀರನ್ನು ಉಳಿಸುವುದ ವಿಚಾರವನ್ನಿಟ್ಟುಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ನೀರನ್ನು ಹೆಚ್ಚಿಸುವುದರ ಮೂಲಕ ನಮ್ಮ ರಾಜ್ಯದ ನೀರನ್ನು ಹೊರ ಹೋಗುವುದನ್ನು ತಪ್ಪಿಸುವ ಮೂಲಕ ನಮ್ಮ ರಾಜ್ಯದ ರೈತರಿಗೆ ಅನುಕೂಲವಾಗುವಂತಹ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ನಮ್ಮ ಮಾತೃಭಾಷೆಯಾದ ಕನ್ನಡ ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಹಿಂದಿ ಭಾಷೆ ಏರಿಕೆ ತಡೆಯಬೇಕು, ಇಲ್ಲದಿದ್ದರೆ ನೀವು ನೀಚರು ಎಂದು ಒಪ್ಪಿಕೊಳ್ಳಿ, ಕನ್ನಡ ಬಿಟ್ಟು ಬೇರೆ ಏನಾದರೂ ಪ್ರೀತಿಸುತ್ತೇನೆ ಎಂದರೆ ನಿಮ್ಮ ವಿರೋಧ ಪಕ್ಷದವರನ್ನು ಒಮ್ಮತದಿಂದ ಕರೆದುಕೊಂಡು ಕೇಂದ್ರ ಸರ್ಕಾರದ ಇಬ್ಬಗೆಯ ನೀತಿ ವಿರೋಧಿಸಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು ಮಾತನಾಡಿ, ರಾಜ್ಯದಲ್ಲಿ ಅನಾವಶ್ಯಕವಾಗಿ ಹಿಂದಿ ಏರಿಕೆ ಆಗುತ್ತಿರುವುದು ಖಂಡನೀಯ, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುತ್ತೇವೆ ಎಂದರು.
ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ಬದಲು ಹಿಂದಿ ಭಾಷೆಗೆ ಒಲವು ತೋರಿಸುತ್ತಾ ರಾಜ್ಯದಲ್ಲೂ ಹಿಂದಿ ಭಾಷೆ ಏರಿಕೆ ಮಾಡುತ್ತಿರುವುದು ಖಂಡನೀಯ, ಕೂಡಲೇ ಇದನ್ನು ವಾಪಸ್ ಪಡೆಯದಿದ್ದರೆ ತೀವ್ರ ರೀತಿಯ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ನಂತರ ಕಚೇರಿ ಸಹಾಯಕರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಾಲನೂರು ಅನಂತಕುಮಾರ್, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಸೋಲಾರ್ ಕೃಷ್ಣಮೂರ್ತಿ, ರಾಮಚಂದ್ರಪ್ಪ, ಪಾಲಿಕೆ ಸದಸ್ಯ ಮಂಜುನಾಥ್, ಚಲುವರಾಜು, ರಾಮಾಂಜಿನಪ್ಪ, ಸುಲ್ತಾನ್ ಮೊಹಮ್ಮದ್, ಪ್ರಸನ್ನಕುಮಾರ್, ಉಮಾಶಂಕರ್, ಕೆಂಪರಾಜು, ಉಪ್ಪಾರಹಳ್ಳಿ ಕುಮಾರ್, ಸೊಗಡು ವೆಂಕಟೇಶ್, ಜಯಶ್ರೀ, ಲೀಲಾವತಿ, ಲಕ್ಷ್ಮಮ್ಮ ವೀರಣ್ಣಗೌಡ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ತುಮಕೂರಿನಲ್ಲಿ ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ
ಹಿಂದಿ ಭಾಷೆ ಮೆರೆಸುತ್ತಿರುವುದು ಖಂಡನೀಯ
Get real time updates directly on you device, subscribe now.
Prev Post
Comments are closed.