ಎ.ಜೆ.ಸದಾಶಿವ ಆಯೋಗದ ವರದಿ ಮಂಡಿಸಲು ಆಗ್ರಹಿಸಿ ಪ್ರತಿಭಟನೆ

ಮಾದಿಗರಿಗೆ ಒಳಮೀಸಲಾತಿ ಕಲ್ಪಿಸಲು ಒತ್ತಾಯ

231

Get real time updates directly on you device, subscribe now.

ತುಮಕೂರು: ಪ್ರಸ್ತುತ ಸೋಮವಾರದಿಂದ ಆರಂಭವಾಗಿರುವ ವಿಧಾನಸಭೆಯ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಮಂಡಿಸಿ, ಒಳಮೀಸಲಾತಿ ವರ್ಗೀಕರಣ ಜಾರಿಗೆ ತರುವಂತೆ ಒತ್ತಾಯಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್‌, ಜಿಲ್ಲಾಧ್ಯಕ್ಷ ಆಟೋ ಶಿವರಾಜು ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅನೇಕ ಜಾತಿಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರ ಕೂಡಲೇ ಒಳ ಮೀಸಲಾತಿ ಶಿಫಾರಸ್ಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಈ ವೇಳೆ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್‌ ಮಾತನಾಡಿ, ಮಾದಿಗರಿಗೆ ಒಳಮೀಸಲಾತಿ ಕಲ್ಪಿಸಬೇಕೆಂದು 2003ರಲ್ಲಿ ಮಾರ್ಕೇಂಡೇಯ ಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ಹಿನ್ನೆಲೆಯಲ್ಲಿ 2004ರಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ನ್ಯಾ.ಹನುಮಂತಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. ಆದರೆ ಅವರ ರಾಜೀನಾಮೆಯ ನಂತರ ವಿ.ಎಸ್‌.ಮಳಿಮಠ್‌, ಹೆಚ್.ಸಿ.ಬಾಲಕೃಷ್ಣ ನಂತರ ನ್ಯಾ.ಎ.ಜೆ. ಸದಾಶಿವ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಬಿ.ಎಸ್‌.ಯಡಿಯೂರಪ್ಪ 11 ಕೋಟಿ ಹಣ ನೀಡಿದ್ದರು. ಆಯೋಗ 2011ರಲ್ಲಿಯೇ ವೈಜ್ಞಾನಿಕ ವರದಿ ನೀಡಿದ್ದರೂ ಇದುವರೆಗೂ ವರದಿಯನ್ನು ಸದನದಲ್ಲಿ ಚರ್ಚಿಸದೆ ನಿರ್ಲಕ್ಷ ಮಾಡಲಾಗಿದೆ. ಸರಕಾರ ಕೂಡಲೇ ಪ್ರಸ್ತುತ ಅಧಿವೇಶನದಲ್ಲಿ ಆಯೋಗದ ವರದಿಯನ್ನು ಚರ್ಚಿಸಿ ಜಾರಿಗೆ ತರಬೇಕೆಂಬುದು ನಮ್ಮ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದರು.
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಕಡೆಗಣಿಸಿದ ಕಾಂಗ್ರೆಸ್‌ ಪಕ್ಷವನ್ನು ಮಾದಿಗ ಸಮುದಾಯ ಕೈಬಿಟ್ಟ ಹಿನ್ನೆಲೆಯಲ್ಲಿ ಇಂದು ಅಧಿಕಾರ ಕಳೆದುಕೊಂಡಿದೆ, ಬಿಜೆಪಿ ಸರಕಾರವೂ ನಿರ್ಲಕ್ಷ ಮುಂದುವರೆಸಿದರೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. 2 ದಶಕಗಳ ಈ ಹೋರಾಟ ಪರಿಗಣಿಸಿ ಸರಕಾರ ಕೂಡಲೇ ಜಾರಿಗೆ ತರಬೇಕೆಂಬುದು ನಮ್ಮ ಆಗ್ರಹವಾಗಿದೆ, ಒಳಮೀಸಲಾತಿ ಜಾರಿಯಿಂದ ಪರಿಶಿಷ್ಟ ಜಾತಿಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಪಾವಗಡ ಶ್ರೀರಾಮ್‌ ತಿಳಿಸಿದರು.
ಮುಖಂಡ ವೈ.ಹೆಚ್‌.ಹುಚ್ಚಯ್ಯ ಮಾತನಾಡಿ, ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಹಲವಾರು ರೀತಿಯ ಹೋರಾಟ ನಡೆಸಿದ್ದರೂ ಕೇವಲ ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡಲಾಗುತ್ತಿದೆ, ನಮ್ಮ ಹೋರಾಟಕ್ಕೂ ಒಂದು ತಾಳ್ಮೆ ಇದೆ, ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ತವಕಿಸುತ್ತಿರುವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯೊಂದೇ ಪರಿಹಾರವಾಗಿದೆ ಎಂದರು.
ಪಾವಗಡ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗುಡು ವೆಂಕಟೇಶ್‌ ಮಾತನಾಡಿ, ಒಳ ಮೀಸಲಾತಿಯಿಂದ ಮಾತ್ರ ಪರಿಶಿಷ್ಟ ಜಾತಿಪಟ್ಟಿಯಲ್ಲಿ ಸಣ್ಣಪುಟ್ಟ ಜಾತಿಗಳಿಗೆ ನ್ಯಾಯ ಒದಗಿಸಲು ಸಾಧ್ಯ, ಹಾಗಾಗಿ ಸರಕಾರ ಕೂಡಲೇ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ತರುವ ಮೂಲ ಸಣ್ಣ ಸಮುದಾಯಗಳು ಸರಕಾರದ ಸವಲತ್ತು ಬಳಸಿಕೊಳ್ಳುವಂತೆ ಮಾಡಬೇಕೆಂದರು.
ಪ್ರತಿಭಟನೆಯಲ್ಲಿ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಆಟೋ ಶಿವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಸಾಗರ್‌, ರಾಜ್ಯ ಮಹಿಳಾಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಗೌರವಾಧ್ಯಕ್ಷ ಚಿಕ್ಕಹಳ್ಳಿ ಮಂಜುನಾಥ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋರೆಕುಂಟೆ ಯೋಗೀಶ್‌, ಮಹಿಳಾಧ್ಯಕ್ಷೆ ಗುಬ್ಬಿ ವಿಜಯಮ್ಮ, ಮಹಾಲಕ್ಷ್ಮಮ್ಮ, ಗಂಗರಾಜು, ಕುರಿಪಾಳ್ಯ ಕೆಂಪರಾಜು ಮತ್ತು ಬುಗುಡನಹಳ್ಳಿ ಶಿವರಾಜ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!