ಗ್ರಾಮೀಣ ವಸತಿ ಯೋಜನೆ ಅನುಷ್ಠಾನಗೊಳಿಸಿ: ಜಿ ಎಸ್ ಬಿ

186

Get real time updates directly on you device, subscribe now.

ತುಮಕೂರು: ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದರೊಂದಿಗೆ ಗ್ರಾಮೀಣ ವಸತಿ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಸದ ಜಿ.ಎಸ್.ಬಸವರಾಜು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಗ್ರಾಮೀಣ ವಸತಿ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ನಿಗದಿತ ಗುರಿ ಸಾಧಿಸದೇ ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಬಾರದು. ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಯೋಜನೆಯನ್ನು ನೂರರಷ್ಟು ಯಶಸ್ವಿಗೊಳಿಸಬೇಕು ಎಂದು ನಿರ್ದೇಶಿಸಿದರು.
ಗ್ರಾಮೀಣ ವಸತಿ ಯೋಜನೆಯಡಿ ಈಗಾಗಲೇ ಗುರುತಿಸಿರುವ ಅರ್ಹ ಫಲಾನುಭವಿಗಳಿಗೆ ನಿಗದಿತ ಕಾಲಮಿತಿಯೊಳಗೆ ನಿವೇಶನದ ಹಕ್ಕುಪತ್ರ ವಿತರಣೆ ಮಾಡಬೇಕು. ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಜಾಗ ಗುರುತಿಸಿ ವಸತಿ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ನಿಗಧಿಗೊಳಿಸಿರುವ ನಿವೇಶನ ಕಲ್ಪಿಸುವ ಸೌಲಭ್ಯದ ಗುರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಜೊತೆಗೆ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶಿಸಿದರು.
ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ಬಹುತೇಕ ಎಲ್ಲಾ ಇಲಾಖೆಗಳು ವಸತಿ ಯೋಜನೆಯಡಿ ನಿವೇಶನ ಕಲ್ಪಿಸುವ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಆಸಕ್ತಿ ವಹಿಸಿಲ್ಲ ಎಂದರಲ್ಲದೆ, 2016ರಿಂದಲೂ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ, ವಸತಿ ಯೋಜನೆಯಡಿ ಗುರುತಿಸಲ್ಪಟ್ಟ ಫಲಾನುಭವಿಗಳಿಗೆ ನಿವೇಶನ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಅಧಿಕಾರಿಗಳು ನಿಖರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಅಸಮರ್ಪಕ ಮಾಹಿತಿ ನೀಡಬಾರದು. ಇದರಿಂದ ಯೋಜನೆಯ ಅನುಷ್ಠಾನ ಯಶಸ್ವಿಯಾಗುವುದಿಲ್ಲ, ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿವೇಶನ ಕಲ್ಪಿಸಬೇಕು. ಆಯಾ ವರ್ಷದ ಗುರಿಯನ್ನು ಅದೇ ವರ್ಷವೇ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ವಸತಿ ಯೋಜನೆಯನ್ನು ಇಲಾಖೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು. ನೈಜ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಸಿಗಬೇಕು. ಅನರ್ಹರಿಗೆ ಈ ಯೋಜನೆ ಸೌಲಭ್ಯ ದೊರೆಯದಂತೆ ಎಚ್ಚರ ವಹಿಸಬೇಕು. ಸಂಸದರು ಸಭೆಯಲ್ಲಿ ನೀಡಿರುವ ಸೂಚನೆ ಪಾಲಿಸುವ ಮೂಲಕ ಯೋಜನೆ ಯಶಸ್ವಿಗೊಳಿಸಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ದಿಶಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!