ಅನುದಾನ ದುರುಪಯೋಗ- ಗ್ರಾಪಂ ಅಧ್ಯಕ್ಷ, ಪಿಡಿಒ ವಿರುದ್ಧ ಪ್ರಕರಣ

185

Get real time updates directly on you device, subscribe now.

ಕುಣಿಗಲ್‌: ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ಅನುದಾನ ದುರುಪಯೋಗವಾಗಿರುವ ಬಗ್ಗೆ ಗ್ರಾಮಸ್ಥರೊಬ್ಬರು ನೀಡಿದ ಖಾಸಗಿ ದೂರಿನ ಅಂಶ ಮಾನ್ಯಮಾಡಿದ ನ್ಯಾಯಾಲಯ ಗ್ರಾಮ ಪಂಚಾಯಿತಿ, ಅಧ್ಯಕ್ಷ, ಪಿಡಿಒ ಹಾಗೂ ಅಧ್ಯಕ್ಷರ ಮಗನ ಮೇಲೆ ಪ್ರಕರಣ ದಾಖಲು ಮಾಡಲು ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ನಾಗಸಂದ್ರ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್‌ ಪಾವತಿಯನ್ನು ಆನ್‌ಲೈನ್‌ ಮೂಲಕವೆ ಮಾಡಬೇಕಿದ್ದು, ಈ ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ 9.17 ಲಕ್ಷ ರೂ. ಗಳನ್ನು ನಕಲಿ ಬಿಲ್‌ ಸೃಷ್ಟಿಸಿ ಗ್ರಾಮ ಪಂಚಾಯಿತಿ ನಿಯಮ ಉಲ್ಲಂಘಿಸಿ, ಕಾನೂನು ಬಾಹಿರವಾಗಿ ಚೆಕ್‌ಗಳ ಮೂಲಕ ಹಣ ವರ್ಗಾವಣೆ ಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ವಿಷಯ ಗೊತ್ತಾಗುತ್ತದೆ ಎಂದು ಅಧ್ಯಕ್ಷರು ಅವರ ಮಗ ನಡಾವಳಿ ಪುಸ್ತಕದ ಹಾಳೆಗಳನ್ನು ಹರಿದು ಹಾಕಿ, ಸಾರ್ವಜನಿಕ ದಾಖಲೆ, ಸಾಕ್ಷಿಗಳನ್ನು ನಾಶಪಡಿಸಿರುತ್ತಾರೆ ಎಂದು ನಾಗಸಂದ್ರ ಗ್ರಾಮದ ತಿಮ್ಮಪ್ಪ ಎಂಬುವರು ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರ ಮೇರೆಗೆ ನ್ಯಾಯಾಲಯವೂ ದೂರಿನ ಅಂಶ ಪರಿಗಣಿಸಿ ಪೊಲೀಸರಿಗೆ ದೂರು ರವಾನಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಅಮೃತೂರು ಪೊಲೀಸ್‌ ಠಾಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಯ್ಯ, ಪಿಡಿಒ ರಾಜಣ್ಣ ಹಾಗೂ ಅಧ್ಯಕ್ಷರ ಮಗ ನಾಗರಾಜು ಮೇಲೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1860ರ ಸೆಕ್ಷನ್‌ 34 (ಅನೇಕ ವ್ಯಕ್ತಿಗಳು ಸೇರಿ ಒಂದೇ ಉದ್ದೇಶದಿಂದ ಕೃತ್ಯ ನಡೆಸಿದ್ದು) 204 (ದಸ್ತಾವೇಜನ್ನು ಸಾಕ್ಷ್ಯವಾಗಿ ಹಾಜರು ಪಡಿಸುವುದನ್ನು ತಪ್ಪಿಸಲು ನಾಶಪಡಿಸುವುದು), 406 (ಅಪರಾಧಿಕ ನಂಬಿಕೆ ದ್ರೋಹ) 408 (ಗುಮಾಸ್ತ ಅಥವಾ ಸೇವಕನಿಂದ ನಂಬಿಕೆದ್ರೋಹ), 409 (ಲೋಕನೌಕರನಿಂದ ಅಪರಾಧಿಕ ನಂಬಿಕೆದ್ರೋಹ), 420 (ವಂಚನೆ), 468 (ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸ್ಪಷ್ಟನೆ) 471 (ಸುಳ್ಳು ಸ್ಪಷ್ಟನೆಯ ದಸ್ತಾವೇಜನ್ನು ನಿಜವೆಂದು ನಂಬಿಸುವುದು) ಅಡಿಯಲ್ಲಿ ಪ್ರರಕಣ ದಾಖಲು ಮಾಡಲಾಗಿದೆ.

Get real time updates directly on you device, subscribe now.

Comments are closed.

error: Content is protected !!