ಮಠಕ್ಕೆ ಹೋಗುವ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ನಾಗರಿಕರ ಆಗ್ರಹ

ಸಿದ್ದಗಂಗಾ ಮಠದ ರೈಲ್ವೆ ಅಂಡರ್‌ಪಾಸ್‌ ಅಧ್ವಾನ

1,669

Get real time updates directly on you device, subscribe now.

ತುಮಕೂರು: ಕ್ಯಾತ್ಸಂದ್ರ ಮುಖ್ಯರಸ್ತೆಯಿಂದ ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠಕ್ಕೆ ಹೋಗುವ ರಸ್ತೆಯಲ್ಲಿ ನಿರ್ಮಿಸುತ್ತಿರುವ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ಸ್ಥಗಿತಗೊಂಡಿರುವುದನ್ನು ಖಂಡಿಸಿ, ಕೂಡಲೇ ರಸ್ತೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಅಂಬೇಡ್ಕರ್‌ ಯುವ ಸೇನೆ ನೇತೃತ್ವದಲ್ಲಿ ನಾಗರಿಕರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್‌ ಯುವ ಸೇನೆಯ ಜಿಲ್ಲಾಧ್ಯಕ್ಷ ಜಿ.ಗಣೇಶ್‌ ನೇತೃತ್ವದಲ್ಲಿ ಸಿದ್ದಗಂಗಾ ಮಠಕ್ಕೆ ಹೋಗುವ ರೈಲ್ವೆ ಅಂಡರ್ ಪಾಸ್ ನಿಂದ ಮುಖ್ಯರಸ್ತೆಯವರೆಗೆ ಮೆರವಣಿಗೆ ನಡೆಸಿದ ಕ್ಯಾತ್ಸಂದ್ರ ಗ್ರಾಮದ ಹಿರಿಯ ಮುಖಂಡರು, ಪಾಲಿಕೆ ಸದಸ್ಯರು, ಬಡಾವಣೆಯ ನಾಗರಿಕರು, ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಅಂಡರ್‌ ಪಾಸ್‌ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕಂದಾಯ, ಲೋಕೋಪಯೋಗಿ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಗಣೇಶ್, ಕಳೆದ ಒಂದುವರೆ ವರ್ಷದಿಂದ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ಕಂದಾಯ ಇಲಾಖೆಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ನೆನೆಗುದಿಗೆ ಬಿದ್ದಿದೆ. ಯಾರೇ ಮಠಕ್ಕೆ ಹೋಗಬೇಕೆಂದರೂ ರೈಲ್ವೆ ಲೈನ್ ಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಬೇಲಿ ದಾಟಿ ಹೋಗಬೇಕು. ಇಲ್ಲವೇ ಎಪಿಎಂಪಿಯವರೆಗೆ ಮುಖ್ಯರಸ್ತೆಯಲ್ಲಿ ಚಲಿಸಿ, ಇಸ್ರೋ ಜಾಗದ ಮುಂಭಾಗದಿಂದ ಬರಬೇಕಾಗಿದೆ, ಹೀಗೆ ಮಾಡುವುದರಿಂದ ಸುಮಾರು 6 ಕಿ.ಮೀ ಸುತ್ತಿ ಬರಬೇಕಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಭಕ್ತಾದಿಗಳಿಗೆ ಇದು ತೀವ್ರ ತೊಂದರೆಯಾಗಿದೆ, ಆದ್ದರಿಂದ ಕೂಡಲೇ ಸರಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಕಾಮಗಾರಿ ಮುಗಿಸಿ, ಸಿದ್ದಗಂಗಾ ಮಠಕ್ಕೆ ಸುಗಮ ಸಂಚಾರಕ್ಕೆ ಅನುವು ಮಾಡಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ. ಸರಕಾರ ಹೀಗೆಯೇ ನಿರ್ಲಕ್ಷ ಭಾವನೆ ತಾಳಿದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಜೆಡಿಎಸ್‌ ನಗರಾಧ್ಯಕ್ಷ ನರಸೇಗೌಡ ಮಾತನಾಡಿ, ಇದು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದು ಭಕ್ತರಿಂದ ಕರೆಸಿಕೊಂಡಿರುವ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಭೂಮಿ, ಇಲ್ಲಿಗೆ ಹೋಗಲು ಕಳೆದ ಒಂದುವರೆ ವರ್ಷದಿಂದ ರಸ್ತೆ ಇಲ್ಲ ಎಂದರೆ ಹೇಗೆ? ರೈಲ್ವೆ ಇಲಾಖೆಯವರು ಕೇವಲ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿ ಅಂಡರ್‌ ಪಾಸ್‌ ಕಾಮಗಾರಿ ಆರಂಭಿಸಿದ್ದರು. ಆದರೆ ಒಂದುವರೆ ವರ್ಷ ಕಳೆದರೂ ಮುಗಿದಿಲ್ಲ, ಭೂಮಿ ನೀಡಲು ಭೂ ಮಾಲೀಕರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ, ಹಾಗಾಗಿ ತೊಂದರೆಯಾಗಿದೆ ಎಂದು ಸಬೂಬು ಹೇಳಿ ಕೈಚೆಲ್ಲಿದ್ದಾರೆ, ಒಂದು ವೇಳೆ ಸರಕಾರಕ್ಕೆ ಪರಿಹಾರ ನೀಡಲು ಹಣವಿಲ್ಲವೆಂದು ಹೇಳಿಕೆ ನೀಡದರೆ ನಾವುಗಳೇ ಭಕ್ತರಿಂದ ಚಂದಾ ಎತ್ತಿ ಪರಿಹಾರ ನೀಡಲು ಸಿದ್ಧ, ಕಾಮಗಾರಿ ವಿಳಂಬ ಮಾಡುತ್ತಿರುವುದು ಸರಕಾರ ಸಿದ್ದಗಂಗಾ ಮಠಕ್ಕೆ ಮಾಡುತ್ತಿರುವ ಅಪಮಾನ ಎಂಬುದು ಭಕ್ತರ ಅನಿಸಿಕೆಯಾಗಿದೆ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತುಮಕೂರು ಉಪವಿಭಾಗಾಧಿಕಾರಿ ಅಜಯ್‌, ಸದರಿ ಅಂಡರ್‌ ಪಾಸ್‌ ಅಪ್ರೋಚ್‌ ರಸ್ತೆಗೆ ಅಗತ್ಯವಿರುವ ಭೂಮಿ ನೀಡಲು ರತ್ನಮ್ಮ ಎಂಬುವವರು ಒಪ್ಪುತ್ತಿಲ್ಲ, ಅವರ ಪ್ರಕಾರ ನಗರ ಪ್ರದೇಶದ ಎಸ್ ಆರ್‌ ರೇಟ್‌ ನೀಡಿ ಎಂಬುದಾಗಿದೆ, ಆದರೆ ಅವರ ಭೂಮಿ ಪರಿವರ್ತನೆಯಾಗಿಲ್ಲದ ಕಾರಣ, ಅಡಿ ಲೆಕ್ಕದಲ್ಲಿ ಪರಿಹಾರದ ಹಣ ನಿಗದಿ ಸಾಧ್ಯವಿಲ್ಲ, ಅವರಿಗೆ ಈಗಾಗಲೇ ಸಬ್‌ರಿಜಿಸ್ಟ್ರಾರ್‌ ದರದಂತೆ 27.35 ಲಕ್ಷ ರೂ. ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದೆ. ಅವರು ಒಪ್ಪಿಕೊಂಡರೆ ಇಂದು ಹಣ ನೀಡಿ ಭೂಮಿಯನ್ನು ನಮ್ಮ ವಶಕ್ಕೆ ಪಡೆಯುತ್ತವೆ. ಆದರೆ ಇದಕ್ಕೆ ಅವರು ಒಪ್ಪುತ್ತಿಲ್ಲ, ಹಾಗಾಗಿ ಕಾನೂನಿನ ರೀತಿ ಭೂ ಸ್ವಾಧೀನಕ್ಕೆ ಅಗತ್ಯವಿರುವ 11ಎ ನೋಟಿಪೀಕೇಷನ್‌ ಹೊರಡಿಸಲಾಗಿದೆ, ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಣ ಡೆಪಾಸಿಟ್‌ ಮಾಡಿ ಭೂಮಿ ವಶಪಡಿಸಿಕೊಂಡು ಕಾಮಗಾರಿ ಮುಂದುವರೆಸಲಾಗುವುದು, ಇದಕ್ಕೆ ಕೆಲ ತಿಂಗಳು ಬೇಕಾಗುತ್ತದೆ ಎಂದು ಪ್ರತಿಭಟನಾನಿರತರಿಗೆ ಸ್ಪಷ್ಟನೆ ನೀಡಿದರು.
ಈ ವೇಳೆ ಕೆಲವರು ಸಿದ್ದಗಂಗಾ ಮಠದ ಆವರಣದಲ್ಲಿರುವ ಶಾಲೆಯಲ್ಲಿ ಸುಮಾರು 5,000 ವಿದ್ಯಾರ್ಥಿಗಳು ಓದುತ್ತಿದ್ದು, ಬಹುತೇಕರು ಕ್ಯಾತ್ಸಂದ್ರದಿಂದ ಮಠಕ್ಕೆ ಹೋಗಬೇಕು, ರೈಲ್ವೆ ಇಲಾಖೆಯವರು ಗೇಟ್‌ ಮುಚ್ಚಿರುವ ಪರಿಣಾಮ ಮಕ್ಕಳಿಗೆ ಓಡಾಡಲು ತೊಂದರೆಯಾಗಿದೆ. ತಾತ್ಕಾಲಿಕವಾಗಿ ಗೇಟ್‌ ತೆರೆಯುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಇಲಾಖೆ ಎಇಇ ವಿನೋದ್ ಕುಮಾರ್‌ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರವಿಕುಮಾರ್‌, ಅರವಿಂದ್‌, ಅಂಬೇಡ್ಕರ್‌ ಯುವ ಸೇನೆಯ ಜಿಲ್ಲಾ ಉಪಾಧ್ಯಕ್ಷ ಡಾ.ಎನ್‌.ವಿಜಯ್‌, ಮುಬಾರಕ್‌ ಆಲಿ, ತಾಲೂಕು ಅಧ್ಯಕ್ಷರಾದ ಸುಮ, ಶಾಹಿದ್‌, ಬಟವಾಡಿ ಸ್ವಾಮಿ, ಪುನೀತ್‌, ಅಪ್ಸರ್‌, ಕ್ಯಾತ್ಸಂದ್ರ ಮೋಸಿನ್‌, ಯಶಸ್ವಿನಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಸ್ಥಳಕ್ಕೆ ತಹಶೀಲ್ದಾರ್‌ ಮೋಹನ್ ಕುಮಾರ್‌, ಕಂದಾಯ ನಿರೀಕ್ಷಕರಾದ ಶಿವಣ್ಣ, ಮಹೇಶ್‌ ಸೇರಿದಂತೆ ಕಂದಾಯ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ರೈಲ್ವೆ ಅಂಡರ್‌ ಪಾಸ್ ಕಾಮಗಾರಿ ವಿಳಂಬಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

Get real time updates directly on you device, subscribe now.

Comments are closed.

error: Content is protected !!