ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ

516

Get real time updates directly on you device, subscribe now.

ತುಮಕೂರು: ಇಲ್ಲಿನ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಿಂದ 46ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಬುಧವಾರ ಅತ್ಯಂತ ಸರಳವಾಗಿ ಜರುಗಿತು.
ವಿನಾಯಕ ನಗರದ ಸಿದ್ದಿವಿನಾಯಕ ಸೇವಾ ಮಂಡಳಿಯ ಆವರಣದಲ್ಲಿ ಗಣೇಶಮೂರ್ತಿಯ ವಿಸರ್ಜನೋತ್ಸವಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ಶ್ರೀಸಿದ್ದಿವಿನಾಯಕ ಸೇವಾ ಮಂಡಳಿಯ 46ನೇ ವರ್ಷದ ಗಣೇಶೋತ್ಸವ ಇದಾಗಿದ್ದು, ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುತ್ತಿತ್ತು, ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಮಹಾಮಾರಿಯ ಆರ್ಭಟದಿಂದಾಗಿ ಬಹಳ ಸರಳವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ ಎಂದರು.
ಕೋವಿಡ್‌ ಆರ್ಭಟಕ್ಕೂ ಮುನ್ನ ಸಿದ್ದಿವಿನಾಯಕ ಸೇವಾ ಮಂಡಳಿಯವರು ಗಣೇಶೋತ್ಸವವನ್ನು 1 ತಿಂಗಳ ಪರ್ಯಂತ ವಿವಿಧ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ನಡೆಸುವ ಮೂಲಕ ಅತ್ಯಂತ ವೈಭವೋಪೇತವಾಗಿ ಆಚರಿಸುತ್ತಿದ್ದರು, ನಗರದಲ್ಲಿ ಒಂದು ರೀತಿಯ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತಿತ್ತು, ಅಲ್ಲದೆ ಗಣಪತಿ ಮೂರ್ತಿ ವಿಸರ್ಜನೆ ಮಾಡುವ ಕೊನೆ ದಿನವೂ ಅಷ್ಟೇ ವೈಭವಯುತವಾಗಿ ಕಾರ್ಯಕ್ರಮ ಜರುಗುತ್ತಿದ್ದವು ಎಂದರು.
ಈ ಬಾರಿ ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ವಯ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ವಿನಾಯಕ ನಗರದಿಂದ ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಳಿಸಲಾಗಿದ್ದ ಟ್ರ್ಯಾಕ್ಟರ್ ನಲ್ಲಿ ಸಿದ್ದಿವಿನಾಯಕ ಮೂರ್ತಿಯನ್ನು ಕೂರಿಸಿ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಅತ್ಯಂತ ಸರಳವಾಗಿ ಬಿ.ಹೆಚ್‌.ರಸ್ತೆ ಮುಖೇನ ಮೆರವಣಿಗೆ ಸಾಗಿತು. ಮೆರವಣಿಗೆಯುದ್ದಕ್ಕೂ ನಾದಸ್ವರ ನಡೆದು, ಸಾರ್ವಜನಿಕರು ಪೂಜೆ ನೆರವೇರಿಸಿದರು. ಮಧ್ಯಾಹ್ನ 1 ಗಂಟೆಗೆ ವಿದ್ಯಾನಗರದ ವಾಟರ್‌ ಟ್ಯಾಂಕ್ ನಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಸಂಸದ ಜಿ.ಎಸ್‌.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ರೆಡ್ ಕ್ರಾಸ್ ನ ಎಸ್‌.ನಾಗಣ್ಣ, ಮಂಡಳಿಯ ಅಧ್ಯಕ್ಷರಾದ ಜಿ.ಹೆಚ್‌.ಪರಮಶಿವಯ್ಯ, ಉಪಾಧ್ಯಕ್ಷ ನಾಗೇಶ್‌, ಕಾರ್ಯದರ್ಶಿ ರಾಘವೇಂದ್ರರಾವ್‌, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಪ್ರಭು, ನಿರ್ದೇಶಕರಾದ ನಿಂಗಪ್ಪ, ಮಹದೇವಪ್ಪ, ಪ್ರಸನ್ನಕುಮಾರ್‌, ಸಿದ್ದರಾಜು, ನರಸಿಂಹಮೂರ್ತಿ, ನಾಗರಾಜು, ನಟರಾಜು, ಮಹೇಶ್‌, ವಿರೂಪಾಕ್ಷ, ವೆಂಕಟೇಶ್‌, ಹೇಮರಾಜು ಸಿಂಚ, ವಿಜಯಕುಮಾರ್‌, ವೆಂಕಟೇಶಬಾಬು, ಪದ್ಮರಾಜು, ಉಮಾಶಂಕರ್‌, ರಮೇಶ್‌ಬಾಬು, ಅನುಸೂಯ, ರೇಣುಕಾ ಪರಮೇಶ್‌, ಇಂದ್ರಾಣಿ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!