ಕುಣಿಗಲ್: ನಿರ್ಗತಿಕ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಪುರಸಭೆ ಅಧ್ಯಕ್ಷರು, ಕೆಲ ಸದಸ್ಯರು ಸೇರಿಕೊಂಡು ಮಂಗಳವಾರ ರಾತ್ರಿ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ 17ನೇ ವಾರ್ಡ್ ನಲ್ಲಿ ಖಾಸಗಿ ಸಮುದಾಯ ಭವನದ ಸಮೀಪ ಗಂಗಣ್ಣ (58) ಎಂಬ ವ್ಯಕ್ತಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ, ಇತ್ತೀಚೆಗೆ ಆತನ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಸಮುದಾಯ ಭವನದ ಸಮೀಪ ಆಶ್ರಯ ಪಡೆದಿದ್ದ, ಈತನ ಪರಿಸ್ಥಿತಿ ಕಂಡ ನೆರೆಹೊರೆಯ ಮನೆಯವರು ಆಹಾರ, ನೀರು ನೀಡಿ ಆರೈಕೆ ಮಾಡಿದ್ದರು. ಆದರೆ ಆರೋಗ್ಯದಲ್ಲಿ ವ್ಯತ್ಯಯವಾದ ಕಾರಣ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದ, ತಾಲೂಕಿನ ಚಿಕ್ಕಮಾವತ್ತೂರು ಗ್ರಾಮದಲ್ಲಿನ ಗಂಗಣ್ಣನ ಪರಿಚಯಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಯಾರು ಮುಂದೆ ಬರಲಿಲ್ಲ.
ರಾತ್ರಿಯಾದ ಕಾರಣ ಸ್ಥಳೀಯರು 16ನೇ ವಾರ್ಡ್ ಸದಸ್ಯೆ ಅಂಜುಂ ಅರಾ ಅವರ ಪತಿ ಅಜಾಂಪಾಶ ಗಮನಕ್ಕೆ ತಂದ ಮೇರೆಗೆ ಅಜಾಂಪಾಶ, ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್ ಹಾಗೂ ಪುರಸಭೆ ಅಧ್ಯಕ್ಷ ನಾಗೇಂದ್ರಅವರ ಗಮನಕ್ಕೆ ತಂದರು. ತಡರಾತ್ರಿಯಾದ ಕಾರಣ ಪುರಸಭೆ ಸಿಬ್ಬಂದಿ ಲಭ್ಯವಿಲ್ಲದ ಪರಿಣಾಮ ಅಧ್ಯಕ್ಷರೆ ಖಾಸಗಿ ಜೆಸಿಬಿ ತರಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿ ಕೋಟೆ ಪ್ರದೇಶದ ಕೊರೊನ ವಾರಿಯರ್ ಸ್ವಯಂ ಸೇವಕರಾದ ನಿಸ್ಸಾರ್ ಅಹಮದ್, ತೌಫಿಕುಲ್ಲಾ, ರಿಜ್ವಾನ್ ಪಾಶ, ರಾಜೇಶ್ ಸಹಕಾರದಿಂದ ಅಂತ್ಯಕ್ರಿಯೆ ನೆರವೇರಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಅಧಿಕಾರ ಇರುತ್ತೆ ಹೋಗುತ್ತೆ, ಆದರೆ ಮಾನವೀಯತೆ ಮುಖ್ಯ, ಮನುಷ್ಯರಾದವರಿಗೆ ಸಾವು ನಿಶ್ಚಿತ, ಸತ್ತ ವ್ಯಕ್ತಿಗೆ ಗೌರವ ಸಲ್ಲಿಸಬೇಕು, ಇದು ಮನುಷ್ಯರಾದವರ ಕರ್ತವ್ಯ, ಈ ಕರ್ತವ್ಯವನ್ನು ನಾನು ಮಾಡಿದ್ದೇನೆ, ಮುಂದೆಯೂ ಅಗತ್ಯ ಬಿದ್ದಲ್ಲಿ ಮಾಡುತ್ತೇನೆ ಎಂದಿದ್ದಾರೆ.
ಅಪರಿಚಿತ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ
Get real time updates directly on you device, subscribe now.
Prev Post
Comments are closed.