ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ವಿರೋಧ

103

Get real time updates directly on you device, subscribe now.


ತುಮಕೂರು: ಕಟ್ಟಡ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಎಲ್ಲಾ ರೀತಿಯ ನೆರವು ನೀಡಿದ್ದರೂ ಕೆಲ ಸಂಘಟನೆಗಳು ಕೊಂಕು ತೆಗೆದು ಸೆಪ್ಟಂಬರ್‌ 20 ರಂದು ಮುಷ್ಕರ ನಡೆಸಲು ಮುಂದಾಗಿದ್ದು, ಈ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡದಿರಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜ್‌ ತಿಳಿಸಿದ್ದಾರೆ.
ನಗರದ ಬಿ.ಹೆಚ್‌.ರಸ್ತೆಯಲ್ಲಿರುವ ಕಟ್ಟಡ ಕಾರ್ಮಿಕರ ಸಂಘದ ಕಚೇರಿಯಲ್ಲಿಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾರ್ಮಿಕರಿಗಾಗಿ ದಿನಸಿ ಕಿಟ್‌, ಟೂಲ್‌ ಕಿಟ್‌, ಹೆಲ್ತ್ ಕಿಟ್‌ ಸೇರಿದಂತೆ ಹಲವು ಸವಲತ್ತು ನೀಡಲಾಗಿದೆ. ಅವುಗಳನ್ನು ಪಡೆದುಕೊಂಡು ಉಪಯೋಗಿಸಿದ ನಂತರ ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಮುಷ್ಕರ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡಿಲ್ಲ, ಕಾರ್ಮಿಕ ಇಲಾಖೆ ಸೌಲಭ್ಯದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ರಾಜ್ಯ ನೋಂದಣಿಯಾಗಿರುವ ಹತ್ತಕ್ಕೂ ಸಂಘಟನೆಗಳಿದ್ದು, ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿದ್ದರು ಸಹ ರಾಷ್ಟ್ರೀಯ ಸಂಘಟನೆ ಹೆಸರಲ್ಲಿ ಕಾರ್ಮಿಕ ದಿಕ್ಕು ತಪ್ಪಿಸಲಾಗುತ್ತಿದೆ. ಇಂತಹ ದೊಡ್ಡ ಮುಷ್ಕರಕ್ಕೆ ಕರೆ ನೀಡುವ ಮುನ್ನ ಇತರೆ ಸಂಘಟನೆಗಳೊಂದಿಗೆ ಕನಿಷ್ಠ ಸೌಜನ್ಯಕ್ಕೂ ಚರ್ಚೆ ನಡೆಸಿಲ್ಲ, ಹಾಗಾಗಿ ಮುಷ್ಕರದಿಂದ ದೂರ ಉಳಿಯಲು ತೀರ್ಮಾನಿಸಲಾಗಿದೆ ಎಂದು ಬಿ.ದೇವರಾಜು ಸ್ಪಷ್ಟಪಡಿಸಿದರು.
ಸೆ.20 ರಂದು ರಾಷ್ಟ್ರವ್ಯಾಪಿ ನಡೆಯುವ ಮುಷ್ಕರಕ್ಕೆ ಈ ಕೊರೊನ ಸಂಕಷ್ಟದಲ್ಲಿಯೂ ಪ್ರತಿ ಕಾರ್ಮಿಕರಿಂದ ತಲಾ 500 ರೂ. ವಸೂಲಿ ಮಾಡಲಾಗುತ್ತಿದೆ, ಕೊರೊನ ಸಂಕಷ್ಟದಲ್ಲಿ ಕೆಲಸವಿಲ್ಲದೆ, ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವಾಗ ಕಾರ್ಮಿಕರಿಂದ ಮುಷ್ಕರದ ಹೆಸರಿನಲ್ಲಿ ವಸೂಲಿಗೆ ಇಳಿಯುವ ಮೂಲಕ ಕೆಲ ಸಂಘಟಗಳು ಹಗಲು ದರೋಡೆಗೆ ಇಳಿದಿವೆ, ಇದರ ವಿರುದ್ಧ ಮೊದಲು ತನಿಖೆಯಾಗಬೇಕೆಂಬುದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಒತ್ತಾಯವಾಗಿದೆ ಎಂದರು.
ರಾಜ್ಯದಲ್ಲಿ ಕಾರ್ಮಿಕ ಸಚಿವರು, ಅರ್ಹ ಫಲಾನುಭವಿಗಳನ್ನು ಗುರುತಿಸಿ 80 ಸಾವಿರ ಕಿಟ್ ಗಳನ್ನು ನೀಡಿದ್ದಾರೆ. ಕಿಟ್‌ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗಮನಕ್ಕೆ ಬಂದ ತಕ್ಷಣವೇ ಅದನ್ನು ಬದಲಾಯಿಸಿ ಕೊಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿರುವ ಬಗ್ಗೆ ನಮಗೆ ಅನುಮಾನವಿಲ್ಲ. ಕಚೇರಿಗೆ ಅಗತ್ಯವಿರುವ ವಾಹನ ಖರೀದಿ ಮಾಡಲಾಗಿದೆ. ಇವುಗಳಲ್ಲಿ ತಪ್ಪು ಹುಡುಕುವುದರಿಂದ ಅಭಿವೃದ್ಧಿ ಕೆಲಸಗಳನ್ನು ನಾವುಗಳೇ ಕುಂಠಿತಗೊಳಿಸಿದಂತಾಗುತ್ತದೆ ಎಂದು ಬಿ.ದೇವರಾಜು ತಿಳಿಸಿದ್ದಾರೆ.
ಕೆಲವು ಕಾರ್ಮಿಕರಿಗೆ ಸರಕಾರ ಘೋಷಿಸಿದ 3,000 ರೂ. ಪರಿಹಾರದ ಹಣ ಜಮಾ ಆಗದಿರುವುದಕ್ಕೆ ಕಾರ್ಮಿಕರು ಆಧಾರ್‌ ಲಿಂಕ್‌ ಮಾಡಿಸದಿರುವುದೆ ಕಾರಣ. ಈ ಬಗ್ಗೆ ಸಚಿವರು ಸ್ಪಷ್ಟಪಡಿಸಿದ್ದರೂ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಪ್ರತಿಭಟನೆಗೆ ಮುಂದಾಗುವ ಮೂಲಕ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಸೆಪ್ಟಂಬರ್‌ 20 ರಂದು ನಡೆಯುವ ಕಾರ್ಮಿಕರ ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ, ಬಿಎಂಎಸ್, ಕರುನಾಡ ಕಾರ್ಮಿಕರ ವೇದಿಕೆ ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳು ಮುಷ್ಕರದಿಂದ ದೂರ ಸರಿದಿವೆ ಎಂದು ಬಿ.ಎಸ್‌.ದೇವರಾಜು ನುಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಕಾರ್ಯಾಧ್ಯಕ್ಷ ಶ್ರೀನಿವಾಸ್‌, ಜಿಲ್ಲಾಧ್ಯಕ್ಷ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್‌, ಪ್ರಧಾನ ಕಾರ್ಯದರ್ಶಿ ನೃಪಾಲ್‌, ಖಜಾಂಚಿ ಶ್ರೀನಿವಾಸ್‌, ಮಹಿಳಾ ಕಾರ್ಯದರ್ಶಿ ಕಾಮಾಕ್ಷಿ ಮೇರಿ ಪ್ರಿಯಾ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!