ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಲು ಆಗ್ರಹ

93

Get real time updates directly on you device, subscribe now.

ತುಮಕೂರು: ನಗರದ ಘೋಷಿತ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ, ಅಘೋಷಿತ ಕೊಳಚೆ ಪ್ರದೇಶಗಳ ಘೋಷಣೆಗೆ ಪ್ರಸ್ತಾವನೆ ಹಾಗೂ ನಿವೇಶನ ರಹಿತ 398 ಕುಟುಂಬಗಳಿಗೆ ಭೂಮಿ ಮಂಜೂರಾತಿಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲು ಆಗ್ರಹಿಸಿ ಶಿರಾಗೇಟ್‌ ಹತ್ತಿರವಿರುವ ಕರ್ನಾಟಕ ಕೊಳಗೇರಿ ಅಭೀವೃದ್ಧಿ ಮಂಡಳಿ ಮುಂದೆ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಸ್ಲಂ ಬೋರ್ಡ್‌ ಸಹಾಯಕ ಕಾರ್ಯಪಾಲಕ ಅಭಿಯಂತರರು ತುಮಕೂರು ನಗರದಲ್ಲಿರುವ 398 ನಿವೇಶನ ರಹಿತರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ಕಲಂ 18(ಎ) ಅಡಿಯಲ್ಲಿ ಸರ್ಕಾರಿ ಭೂಮಿ ಗುರುತಿಸಲು ಜಿಲ್ಲಾಡಳಿತಕ್ಕೆ ಅಗತ್ಯವಿರುವ ಭೂಮಿ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲು ದಿನಾಂಕ:5-3-2021 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ 15 ದಿನಗಳೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು, ಇದುವರೆಗೂ ಪ್ರಸ್ತಾವನೆ ಸಲ್ಲಿಸಿಲ್ಲ, ಹಾಗಾಗಿ ಕೂಡಲೇ ಅಗತ್ಯವಿರುವ ಸರ್ಕಾರಿ ಭೂಮಿ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು, ಮಂಡಳಿ ಅಧಿಕಾರಿಗಳು ಸ್ಲಂ ಜನರ ಹಿತಕಾಯುವ ಬದಲು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಘೋಷಿತ ಕೊಳಚೆ ಪ್ರದೇಶಗಳಾದ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆಗಳಾದ ಕ್ರಮವಾಗಿ 16ರ ಸಂಪಾಧನೆ ಮಠ, 18ರ ಇಸ್ಮಾಯಿಲ್ ನಗರ, 21ರ ಭಾರತಿನಗರ ಭಾಗ-2, 23ರ ಸತ್ಯಮಂಗಲ ಜನತಾ ಕಾಲೋನಿ, ಎ.ಕೆ. ಕಾಲೋನಿ ಮತ್ತು 35ರ ಎಳ್ಳರಬಂಡೆ ಕೊಳಚೆ ಪ್ರದೇಶಗಳನ್ನು ಸ್ಲಂ ಕಾಯಿದೆ 1973ರ ಕಲಂ 3 ಮತ್ತು 11 ರಲ್ಲಿ ಅಧಿಸೂಚನೆ ಹೊರಡಿಸಲು ಅಗತ್ಯವಿರುವ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳುವುದು ಹಾಗೂ 2016ರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಸಮಗ್ರ ನೀತಿಯ ಮಾನದಂಡಗಳಂತೆ ಜಿಲ್ಲಾಡಳಿತಕ್ಕೆ ಅಧಿಸೂಚನೆಗೆ ಅಗತ್ಯವಿರುವ ಪ್ರಸ್ತಾವನೆಯನ್ನು ನಿಗದಿತ ಕಾಲಮಿತಿಯೊಳಗಾಗಿ ಸಲ್ಲಿಸಬೇಕು. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 17 ಸರ್ಕಾರಿ ಒಡೆತನದ ಕೊಳಚೆ ಪ್ರದೇಶಗಳಿಗೆ 90 ದಿನಗಳೊಳಗಾಗಿ ಹಕ್ಕುಪತ್ರ ನೀಡಬೇಕು. ತಪ್ಪಿದಲ್ಲಿ ಸ್ಲಂ ಬೋರ್ಡ್‌ ಮುತ್ತಿಗೆ ಮಾಡಲಾಗುವುದೆಂದು ಎಚ್ಚರಿಸಿದರು.
ಕೊಳಗೇರಿ ಸಮಿತಿಯ ಗೌರವಧ್ಯಕ್ಷೆ ದೀಪಿಕಾ ಮಾತನಾಡಿ, ವಾರ್ಡ್‌ ನಂ.6 ರಲ್ಲಿರುವ ದಿಬ್ಬೂರಿನ ದೇವರಾಜ್‌ ಅರಸು ಬಡಾವಣೆಯ 1,200 ವಸತಿ ಸಮುಚ್ಛಯಗಳ ಫಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ಮತ್ತು ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಲು ಮಂಡಳಿ ಮುಂದಾಗಬೇಕೆಂದು ಹಾಗೂ ಅಗತ್ಯವಿರುವ ಸಮನ್ವಯತೆ ಸಾಧಿಸಬೇಕೆಂದು ಹೇಳಿದರು.
ಕಾರ್ಯದರ್ಶಿ ಅರುಣ್‌ ಮಾತನಾಡಿ, ತುಮಕೂರು ನಗರದಲ್ಲಿ 28 ಘೋಷಿತ ಕೊಳಚೆ ಪ್ರದೇಶಗಳ ಪೈಕಿ 11 ಖಾಸಗಿ ಹಾಗೂ ಇನ್ನಿತರೆ ಸರ್ಕಾರಿ ಒಡೆತನದ ಕೊಳಚೆ ಪ್ರದೇಶಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಕಾಯಿದೆ- 1975ರ ಕಲಂ 4/2ನಲ್ಲಿ ನೋಂದಣಿ ಪ್ರಮಾಣ ಪತ್ರ ನೀಡಬೇಕು ಹಾಗೂ ಪ್ರಾಥಮಿಕ ಅಧಿಸೂಚನೆಯಾಗಿರುವ ಸ್ಲಂಗಳನ್ನು ಅಂತಿಮ ಹಂತದ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದರು.
ಶಿರಾ ನಗರಸಭೆ ವ್ಯಾಪ್ತಿಯ ವಾರ್ಡ್‌ ನಂ.4 ಅಂಬೇಡ್ಕರ್‌ ನಗರ, ವಾರ್ಡ್‌ ನಂ.15 ಟಿಪ್ಪುನಗರ ಕೋಟೆ, ವಾರ್ಡ್‌ 16 ರಬ್‌ನಗರ, ವಾರ್ಡ್‌ ನಂ.31 ಶಿವಾಜಿ ನಗರ ಭಾಗ- 2 ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಲು ಸಹಕಾರ್ಯದರ್ಶಿ ತಿರುಮಲಯ್ಯ ಆಗ್ರಹಿಸಿದರು.
ಪ್ರತಿಭಟನೆ ಬೆಂಬಲಿಸಿ ಬೀದಿ ವ್ಯಾಪಾರಿಗಳ ಸಂಘದ ಬಾಬಾ ಮಾತನಾಡಿದರು. ಪದಾಧಿಕಾರಿಗಳಾದ ಶಂಕರಯ್ಯ, ಹಯಾತ್‌, ರಂಗನಾಥ್‌, ಮೋಹನ್‌, ಗುಲ್ನಾಜ್‌, ಚಕ್ರಪಾಣಿ, ಕಣ್ಣನ್‌, ಮಾರಿಮುತ್ತು, ಸುಬ್ಬ, ಮಂಗಳಮ್ಮ, ಹನುಮಕ್ಕ, ಸುಧಾ, ತಿಮ್ಮಕ್ಕ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!