ಹಿಂದೂ ಧರ್ಮಕ್ಕೆ ವಿಶ್ವಕರ್ಮರು ನೀಡಿದ ಕೊಡುಗೆ ಅಪಾರ: ನೀಲಕಂಠಾಚಾರ್ಯಶ್ರೀ

ವಿಶ್ವಕರ್ಮ ಸಮುದಾಯದ ಅಭಿವೃದ್ಧಿತ್ತಯ ಸಾಗಲಿ

102

Get real time updates directly on you device, subscribe now.

ತುಮಕೂರು: ವಿಶ್ವಕರ್ಮ ಸಮುದಾಯದ ಅಭಿವೃದ್ಧಿಯ ಚಿಂತನೆಗಳು ನಡೆಯಬೇಕು ಎಂದು ಅಭಯಹಸ್ತ ಆದಿಲಕ್ಷ್ಮೀ ಸಂಸ್ಥಾನದ ಪೀಠಾಧ್ಯಕ್ಷ ನೀಲಕಂಠಾಚಾರ್ಯ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಸೇವಾ ಸಮಿತಿಯ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ನಗರದ ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ ವಿಶ್ವಕರ್ಮ ಸಮುದಾಯವು ಹಿಂದೂ ಧರ್ಮಕ್ಕೆ ನೀಡಿರುವ ಕೊಡುಗೆ ಅಪಾರವಾದದು, ಸನಾತನ ಕಾಲದಿಂದಲೂ ಶಿಲ್ಪಿಗಳು, ಸ್ವರ್ಣಕಾರರು ಸೇರಿದಂತೆ ವಿಶ್ವಕರ್ಮ ಸಮುದಾಯದವರು ಪಂಚ ಕಸುಬುಗಳ ನೈಪುಣ್ಯತೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಸಾವಿರಾರು ವರ್ಷಗಳ ಇತಿಹಾಸವಿರುವ ವಿಶ್ವಕರ್ಮ ಪೂಜಾ ಮಹೋತ್ಸವವೆಂದರೆ ವಿಶೇಷವಾಗಿ ತುಮಕೂರು ಭಾಗದ ಸಮುದಾಯಕ್ಕೆ ದಸರಾ ಹಬ್ಬವಿದ್ದಂತೆ, ದಾಸ ಸಂತತಿಯ ಶ್ರೇಷ್ಠರು, ಸನಾತನ ಧರ್ಮದ ಹಲವಾರು ಸಂತರು, ಶರಣ ಶ್ರೇಷ್ಠರಾದ ಬಸವಣ್ಣ, ಕಲ್ಲಯ್ಯ ಸೇರಿದಂತೆ ಹಲವಾರು ಮಂದಿ ಮಹಾನುಭಾವರು ವಿಶ್ವಕರ್ಮ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಅವರ ಸಂದೇಶಗಳು, ಮಾರ್ಗದರ್ಶನಗಳು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಸ್ಮರಿಸಿದರು.
ವಿಶ್ವಕರ್ಮ ಸಮಾಜದ ಮುಖಂಡ ನಿವೃತ್ತ ಉಪನ್ಯಾಸಕ ಕೆ.ವಿ.ಕೃಷ್ಣಮೂರ್ತಿ ಮಾತನಾಡಿ ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಎಲ್ಲರೂ ಒಂದೇ ಎಂಬ ಭಾವದೊಂದಿಗೆ ಪಂಚ ಕರ್ಮಗಳನ್ನು ಅನುಸರಿಕೊಂಡು ವಿಶ್ವಕರ್ಮ ಸಮುದಾಯವು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಸರ್ಕಾರ ಸಮುದಾಯಗಳಿಗೆ ನೀಡಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಹನೀಯರ ಉದ್ದೇಶಗಳನ್ನು ನಾವೆಲ್ಲರೂ ಸಾಕಾರಗೊಳಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯದ ಉಪಜಾತಿಗಳ ಹಿಂದುಳಿದ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಆಧುನಿಕತೆಗೆ ತಕ್ಕಂತೆ ತಾಂತ್ರಿಕವಾಗಿ ಮುಂದುವರೆಯಲು ದಾರಿ ಮಾಡಿಕೊಡಬೇಕು ಎಂದರು.
ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ನಾಗರಾಜಾಚಾರ್‌ ಮಾತನಾಡಿ ಪ್ರತೀವರ್ಷ ಹಬ್ಬದಂತೆ ನಡೆಯುತ್ತಿದ್ದ ವಿಶ್ವಕರ್ಮ ಯಜ್ಞ ಮಹೋತ್ಸವವನ್ನು ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ವಿಶ್ವಕರ್ಮ ಸಮುದಾಯವು ಸರ್ಕಾರ ನೀಡುವ ಎಲ್ಲಾ ಸವಲತ್ತು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಎಸ್‌.ಎಲ್‌.ನರಸಿಂಹ ಸ್ವಾಮಿ, ಮಹಾನಗರ ಪಾಲಿಕೆ ಸದಸ್ಯ ಮಹೇಶ್‌, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರಿ ಶಿವಾನಂದ, ಜಿಲ್ಲಾ ಪತ್ರಕತ್ರರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್‌, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗಾಧರಾಚಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್‌ ಕುಮಾರ್‌, ಭಾಗ್ಯ, ಬಿ.ವಿ.ಲಕ್ಷ್ಮಣಾಚಾರ್‌, ಶಂಕರಾಚಾರ್‌ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

Get real time updates directly on you device, subscribe now.

Comments are closed.

error: Content is protected !!