ಪ್ರಧಾನಿ ಮೋದಿ ಹುಟ್ಟು ಹಬ್ಬ ನಿರುದ್ಯೋಗಿಗಳ ದಿನವಾಗಿ ಆಚರಣೆ

ಪಕೋಡ ಮಾರಾಟ ಮಾಡಿ ಕಾಂಗ್ರೆಸ್‌ ಪ್ರತಿಭಟನೆ

350

Get real time updates directly on you device, subscribe now.

ತುಮಕೂರು: ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಹಾಗೂ ಎನ್‌ಎಸ್‌ಯುಐ ಮುಖಂಡ ಸುಮುಖ ಕೊಂಡವಾಡಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಜನ್ಮ ದಿನವನ್ನು ನಗರದ ಟೌನ್‌ ಹಾಲ್‌ ವೃತ್ತದಲ್ಲಿ ಪಕೋಡ ಕರಿದು ಮಾರಾಟ ಮಾಡುವ ಮೂಲಕ ರಾಷ್ಟ್ರೀಯ ನಿರುದ್ಯೋಗಿಗಳ ದಿನವನ್ನಾಗಿ ಆಚರಿಸಿದರು.
ಯುವ ಕಾಂಗ್ರೆಸ್‌ ಮುಖಂಡ ಸುಮುಖ ಕೊಂಡವಾಡಿ ಅವರ ನೇತೃತ್ವದಲ್ಲಿ ನಗರಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್‌ ಹಾಗೂ ಇನ್ನಿತರ ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡು, ಪಕೋಡ ಮಾರಾಟ ಮಾಡುವುದು ಒಂದು ವೃತ್ತಿ ಎಂದು ನಿರುದ್ಯೋಗಿಗಳನ್ನು ಹೀಯಾಳಿಸಿದ್ದ ಪ್ರಧಾನಿಯವರ ಹೇಳಿಕೆ ಖಂಡಿಸಿ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾರ್ವಜನಿಕರಿಗೆ ಪಕೋಡ ಹಂಚಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಿಜಿಎಸ್‌ ವೃತ್ತದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ನಿರುದ್ಯೋಗಿಗಳ ದಿನದ ಕುರಿತು ಎನ್‌ಎಸ್‌ಯುಐ ಅಧ್ಯಕ್ಷ ಹಾಗು ಯುವ ಕಾಂಗ್ರೆಸ್‌ ಮುಖಂಡ ಸುಮುಖ ಕೊಂಡವಾಡಿ ಮಾತನಾಡಿ, ಹಲವಾರು ಆಶ್ವಾಸನೆಗಳನ್ನು ನೀಡಿ ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬಂದ ಏಳು ವರ್ಷ ಕಳೆದರೂ ಅವರು ಯುವಕರಿಗೆ ನೀಡಿದ್ದ ಆಶ್ವಾಸನೆ ಈಡೇರಿಸಲು ಸಾಧ್ಯವಾಗಿಲ್ಲ. ಅಧಿಕಾರ ಸಿಕ್ಕ ನೂರು ದಿನದಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತಂದು ಎಲ್ಲರ ಖಾತೆ ತಲಾ 15 ಲಕ್ಷ ರೂ. ಹಾಕುವ ಭರವಸೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಇವುಗಳು ಇಂದಿಗೂ ಮರೀಚಿಕೆಯಾಗಿವೆ. ಕನಿಷ್ಠ ಕೊರೊನ ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಯುವ ಜನರಿಗೆ ಉದ್ಯೋಗ ಒದಗಿಸುವ ಕೆಲಸವನ್ನು ಮಾಡಲಿಲ್ಲ, ಇದರ ಜೊತೆಗೆ ಬೆಲೆ ಹೆಚ್ಚಳದಿಂದ ಜನರು ತತ್ತರಿಸುವಂತಾಗಿದೆ. ಈ ಬಗ್ಗೆಯೂ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಪ್ರಧಾನಿ ಸಿದ್ಧರಿಲ್ಲ, ನಿರುದ್ಯೋಗ ನಿವಾರಿಸುವಲ್ಲಿ ಕೇಂದ್ರದ ನಿರ್ಲಕ್ಷ ಮತ್ತು ಬೆಲೆ ಹೆಚ್ಚಳ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರಕಾರದ ಕ್ರಮ ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್‌ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಯುವಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಸರಕಾರ, ಉದ್ಯೋಗ ಸೃಷ್ಟಿಸುವುದು ಹಾಗಿರಲಿ, ತಮ್ಮ ಕೆಟ್ಟ ನಿರ್ಧಾರಗಳಾದ ಅವೈಜ್ಞಾನಿಕ ಜಿಎಸ್‌ಟಿ, ನೋಟು ಅಮಾನೀಕರಣದಿಂದ ಲಕ್ಷಾಂತರ ಸಣ್ಣ, ಮಧ್ಯಮ ಕಂಪನಿಗಳು ಮುಚ್ಚಿ ಹೋಗಿ, ಕೋಟ್ಯಾಂತರ ಜನರು ಬೀದಿಗೆ ಬರುವಂತಾಯಿತು. ಆದರೆ ಪ್ರಧಾನಿಯವರು ಮಾತ್ರ ಪಕೋಡ ಮಾರಾಟ ಮಾಡುವುದು ಉದ್ಯೋಗವೇ ಎಂದು ಹೇಳುವ ಮೂಲಕ ವಿದ್ಯಾವಂತ ಯುವ ಜನತೆಯನ್ನು ನಿರ್ಲಕ್ಷ ಮಾಡಿದರು, ಇದರ ವಿರುದ್ಧ ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಇಂದು ಪ್ರಧಾನಿ ನರೇಂದ್ರಮೋದಿ ಅವರ ಹುಟ್ಟು ಹಬ್ಬದ ದಿನವನ್ನು ರಾಷ್ಟ್ರೀಯ ನಿರುದ್ಯೋಗಿಗಳ ದಿನವನ್ನಾಗಿ ಆಚರಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ನೂರ್‌ ಮಹಮದ್‌, ಮಹಮದ್‌ ಹರ್ಷದ್‌, ಎನ್‌ಎಸ್‌ಯುಐ ಮುಖಂಡರಾದ ಸಲ್ಮಾನ್‌ ಖಾನ್‌, ಮನೋರಂಜನ್‌, ಅಜಯಗೌಡ, ಜಾಕೀರ್‌ ಪಾಷ, ಖತೀಬ್‌, ರುಮಾಲ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!