ಗುಬ್ಬಿ: ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗಲವಾಡಿ ಕೆರೆಗೆ ನೀರು ಹರಿಸಲು ಸಾಧ್ಯವಾಗದೆ ಇರುವುದು ನಮ್ಮ ರೈತರ ದುರಂತ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಕೆರೆಗೆ ನೀರು ಹರಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ರೈತ ಸಂಘ ಹಾಗೂ ಗ್ರಾಮಸ್ಥರು ಸಭೆ ಸೇರಿ ಮುಂದಿನ ಯೋಜನೆಗಳ ಬಗ್ಗೆ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿ, ಸರಕಾರ ಈ ಕೆಲಸ ಮಾಡುವುದಕ್ಕೆ ಯಾವುದೇ ದೊಡ್ಡ ವಿಚಾರವಲ್ಲ, ಆದರೆ ನಾವು ಆರಿಸಿ ಕಳಿಸಿರುವ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಇನ್ನಿತರ ಎಲ್ಲಾ ಜನಪ್ರತಿನಿಧಿಗಳು ಈ ಭಾಗದ ಕೆರೆ ತುಂಬಿಸಿದಲ್ಲಿ ಸುಮಾರು 30 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರಾವರಿಯ ವ್ಯವಸ್ಥೆ ಆಗುತ್ತದೆ ಮತ್ತು ಅಂತರ್ಜಲದ ಮಟ್ಟ ಹೆಚ್ಚಳವಾಗುತ್ತದೆ ಎಂದರು.
ಗುಬ್ಬಿ ತಾಲ್ಲೂಕಿನಲ್ಲಿ 1,200 ಅಡಿಗಿಂತ ಹೆಚ್ಚು ತಳಭಾಗದಲ್ಲಿ ಅಂತರ್ಜಲ ಕುಸಿತ ಕಂಡಿರುವುದರಿಂದ ಫ್ಲೋರೈಡ್ ನೀರು ಕುಡಿಯುವ ಸ್ಥಿತಿಗೆ ನಾವೆಲ್ಲ ತಲುಪಿದ್ದೇವೆ, ಬಹುತೇಕ ಈ ಭಾಗದ ಜನರ ಆರೋಗ್ಯವೂ ಸಾಕಷ್ಟು ಹದಗೆಡುತ್ತಿದೆ, ರೈತರು ಉಳಿಯಬೇಕು ನಮ್ಮ ಭೂಮಿ ಉಳಿಯಬೇಕು ಎಂದರೆ ಈ ಭಾಗದ ಕೆರೆಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಜನ ಪ್ರತಿನಿಧಿಗಳು ಮಾಡಲೇಬೇಕು, ಇಲ್ಲದೆ ಹೋದರೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಹೇಮಾವತಿ ನೀರಿನ ವಿಚಾರದಲ್ಲಿ ಸಾಕಷ್ಟು ಹೋರಾಟ ಪ್ರತಿನಿತ್ಯ ಮಾಡುತ್ತಲೇ ಬಂದಿದ್ದೇವೆ. ಹಾಗಲವಾಡಿ ಯೋಜನೆಯು 2014 ರಲ್ಲಿಯೇ ತಾಂತ್ರಿಕ ಮಂಜೂರಾತಿ ಪಡೆದು 2016 ರಲ್ಲಿ ಈ ಕೆರೆಗೆ ನೀರು ಹರಿಯಬೇಕಿತ್ತು, ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ ಎಂದರು.
11 ಕೋಟಿ 75 ಲಕ್ಷ ಹಣಕಾಸಿನ ಅನುಮೋದನೆ ಸಿಕ್ಕಿದ್ದು ಆ ಯೋಜನೆಯಂತೆ ಕೆರೆಗೆ ನಿರಂತರವಾಗಿ 65 ದಿನ ನೀರು ಹರಿದು 37.5 ಎಂಸಿಎಫ್‌ಟಿ ನೀರು ನಿಲ್ಲಬೇಕಾಗಿತ್ತು, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಪ್ರತಿನಿಧಿಗಳ ಬೇಜವಾಬ್ದಾರಿತನ ದಿಂದ ಈ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ, ಈ ಗ್ರಾಮ ಬಹಳ ದೊಡ್ಡದಾಗಿರುವುದರಿಂದ ಹೋರಾಟ ಮಾಡಿದರೆ ಖಂಡಿತವಾಗಿಯೂ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ನಾವೇನು ವಿಧಾನಸಭೆ, ಸಂಸತ್ ಬರೆದುಕೊಡಿ ಅಂತ ಕೇಳುತ್ತಿಲ್ಲ, ಕುಡಿಯುವ ನೀರು ಕೊಡಿ ಎಂದು ಆಗ್ರಹ ಮಾಡುತ್ತಿದ್ದೇವೆ, ಅದನ್ನು ಕೂಡ ನಮ್ಮ ಸರ್ಕಾರಗಳು ನೀಡುತ್ತಿಲ್ಲ ಎಂದರೆ ನಮ್ಮ ಮೂಲಭೂತ ಸೌಲಭ್ಯ ಕಿತ್ತುಕೊಳ್ಳುತ್ತಿವೆ ಎಂದ ಮೇಲೆ ನಾವು ಹೋರಾಟದ ಹಾದಿ ಹಿಡಿಯಬೇಕಾಗಿದೆ, ನೀರನ್ನು ಇಲ್ಲಿಗೆ ತರಲೇಬೇಕಾಗಿದೆ ಮತವನ್ನು ಹಾಕಿಸಿಕೊಳ್ಳುವಾಗ ಹೆಚ್ಚು ಭರವಸೆ ಕೊಡುವ ನಾಯಕರು ಈಗ ಯತ್ತ ಹೋಗಿದ್ದಾರೋ ಗೊತ್ತಿಲ್ಲ, ನೀವೆಲ್ಲರೂ ಒಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ, ಇಲ್ಲದೆ ಹೋದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ, ರೈತ ಸಂಘ ನಿಮ್ಮ ಜೊತೆಯಲ್ಲಿದ್ದು, ನಿಮ್ಮ ಹೋರಾಟಕ್ಕೆ ಹೆಚ್ಚಿನ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ಹಾಗಲವಾಡಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಿಂಗರಾಜು, ಹಾಗಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಹಾಗೂ ಪ್ರಾಂತ ರೈತ ಸಂಘದ ಅಜ್ಜಪ್ಪ, ಲೋಕೇಶ್, ಕೃಷ್ಣ ಜೆಟ್ಟಿ, ನಿಂಗರಾಜು, ಶಂಕರ್, ಯೋಗೀಶ್, ಕರಿಬಸಣ್ಣ, ನೀಲಕಂಠಪ್ಪ, ದಯಾನಂದ್, ಮಂಜುನಾಥ್ ಇತರರು ಇದ್ದರು.
ಹಾಗಲವಾಡಿ ಕೆರೆಗೆ ನೀರು ಹರಿಸಲು ರೈತರ ಒತ್ತಾಯ
Get real time updates directly on you device, subscribe now.
Next Post
Comments are closed.