ಕುಣಿಗಲ್: ಆರು ಮಂದಿ ಮುಖ್ಯಮಂತ್ರಿಗಳಾದರೂ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ ಎಂದು ಕರವೇ ವಕ್ತಾರ ಮಾರುತಿ ತಿಳಿಸಿದರು.
ಶನಿವಾರ ಪಟ್ಟಣದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಸರ್ಕಲ್ ನಲ್ಲಿ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ನೆನೆಪು ನಮ್ಮ ಮನದಲ್ಲಿ ಉಳಿದಿದೆ. ಚಿತ್ರನಟನಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳನ್ನು ನೀಡಿದ್ದರು. ಇದರಿಂದ ಸಾಕಷ್ಟು ಗ್ರಾಮ, ಪಟ್ಟಣದ ಯುವಕರು ಪ್ರೇರಿಪಿತರಾಗಿ ತಮ್ಮ ಬದುಕನ್ನು ಸುಧಾರಿಸಿಕೊಂಡ ಸಾಕಷ್ಟು ನಿದರ್ಶನಗಳಿವೆ. ಕನ್ನಡ ಭಾಷೆಯೆ ಏಳಿಗೆ ನಿಟ್ಟಿನಲ್ಲಿ ವಿಷ್ಣುರವರ ಕೊಡುಗೆ ಸಾಕಷ್ಟಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಡಾ.ವಿಷ್ಣುವರ್ಧನ್ ಈ ನಾಡಿಗೆ ನೀಡಿರುವ ಸೇವೆ ಗುರುತಿಸಿ ಗೌರವ ಸಲ್ಲಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮನೋಭಾವನೆ ತಳೆದಿದೆ. ರಾಜ್ಯ ಆರು ಮಂದಿ ಮುಖ್ಯಮಂತ್ರಿಗಳನ್ನು ಕಂಡರೂ ಅವರಿಗೆ ಸರಿಯಾದ ಗೌರವ ಸಮರ್ಪಣೆ ನಿಟ್ಟಿನಲ್ಲಿ ಸ್ಮಾರಕ ವಿಷಯ ಬಗೆಹರಿಸದೆ ಇರುವುದು ರಾಜ್ಯ ಸರ್ಕಾರ ಮೇರು ನಟನಿಗೆ ಮಾಡಿದ ಅನ್ಯಾಯ, ತೋರಿದ ಅಗೌರವ ಎಂದರು.
ಪುರಸಭೆ ಅಧ್ಯಕ್ಷ ನಾಗೇಂದ್ರ, ಸದಸ್ಯ ಕೋಟೆನಾಗಣ್ಣ, ಗೋಪಿ ಅರಸ್, ಕರವೇ ಅಧ್ಯಕ್ಷ ಮಂಜುನಾಥ, ವಿಷ್ಣು ಅಭಿಮಾನಿಗಳಾದ ನಾರಾಯಣ, ಶಿವಣ್ಣ, ಸುರೇಶ, ಪ್ರಕಾಶ, ಚೇತನ್, ರಾಜಣ್ಣ ಇತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸುವ ನಿಟ್ಟಿನಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್‌ಬಾಬು ಅವರಿಗೆ ನೀಡಿದರು.
Get real time updates directly on you device, subscribe now.
Comments are closed.