ಸ್ಕೌಟ್ಸ್, ಗೈಡ್ಸ್ ಸೇವಾ ಮನೋಭಾವ ಬೆಳೆಸುತ್ತೆ: ಸಿಂಧ್ಯಾ

104

Get real time updates directly on you device, subscribe now.

ತುಮಕೂರು: ವಿದ್ಯಾರ್ಥಿಗಳನ್ನು ವಿಶ್ವ ಮಾನವರನ್ನಾಗಿ ಸಜ್ಜುಗೊಳಿಸಲು, ಅವರಲ್ಲಿ ಸೇವಾ ಮನೋಭಾವ ಜಾಗೃತಿಗೊಳಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಪಾತ್ರ ಬಹಳ ಮುಖ್ಯ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್‌.ಸಿಂಧ್ಯಾ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಸ್ಪತ್ರೆ ಆಡಿಟೋರಿಯಂ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ತುಮಕೂರು ವತಿಯಿಂದ ಶನಿವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಾನವ ನಿರ್ಮಾಣದ ಕೆಲಸದಲ್ಲಿ ಯಶಸ್ವಿಯಾಗುತ್ತಿದೆ, ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಿದೆ, ಜೊತೆಗೆ ಉತ್ತಮ ಶಿಕ್ಷಕರನ್ನು ಸಹ ಕೊಟ್ಟಿದೆ, ಇದೊಂದು ಪ್ರತೀಕ ಎಂದರು.
ಶಿಸ್ತು ಹಾಗೂ ಸಹನೆ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆಯಾಗಿದೆ, ವಿದ್ಯಾರ್ಥಿಗಳನ್ನು ವಿಶ್ವ ಮಾನವರನ್ನಾಗಿ ಸಜ್ಜುಗೊಳಿಸಲು, ಅವರಲ್ಲಿ ಸೇವಾ ಮನೋಭಾವ ಜಾಗೃತಿಗೊಳಿಸುವ ಸಂಸ್ಥೆ ಇದಾಗಿದ್ದು, ಇಂತಹ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಶಿಕ್ಷಕರು ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕೋವಿಡ್‌ನಂತಹ ಕಷ್ಟದ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು, ಕೋವಿಡ್‌ ಮೊದಲನೇ ಅಲೆ ಮತ್ತು ಎರಡನೇ ಅಲೆಯಲ್ಲಿಯೂ ಕೂಡ ಉತ್ತಮವಾಗಿ ಕೆಲಸ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಉತ್ತಮ ಶಿಕ್ಷಕರನ್ನು ಈ ಭಾರಿ ಆಯ್ಕೆಮಾಡಿದ್ದು, ಇದರಲ್ಲಿ ಸುಮಾರು 86 ಶಿಕ್ಷಕರು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ಎಲ್ಲಾ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಸ್ಕೌಟ್ಸ್ ಮತ್ತು ಗೈಡ್ಸ್ ನೊಂದಿಗೆ ಗುರುತಿಸಿಕೊಂಡಿರುವ ಎಲ್ಲಾ ಶಿಕ್ಷಕರನ್ನು ಒಂದೆಡೆ ಸೇರಿಸಿ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಬೃಹತ್‌ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬೆಳ್ಳಿ ಲೋಕೇಶ್‌ ಅವರು ತುಮಕೂರು ಜಿಲ್ಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಮತ್ತು ಕೋವಿಡ್‌ ವಾರಿಯರ್ಸ್ ಗಳಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ಅವರ ಜವಬ್ದಾರಿ ಇನ್ನೂ ಹೆಚ್ಚಿದೆ ಎಂದು ಹೇಳಿದರು.
ಕೋವಿಡ್‌ ಸಂದರ್ಭದಲ್ಲಿ ಸುಮಾರು 1 ಕೋಟಿ ಮಾಸ್ಕ್ ಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ವಿತರಿಸಿದ್ದು, ಕಳೆದ 7 ವರ್ಷಗಳಲ್ಲಿ ವಿದೇಶಗಳಿಂದ ಸಂಸ್ಥೆಗೆ 75 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಇದರಿಂದ ಸಾಮಾಜಿಕ ಸೇವೆಗೆ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತುಮಕೂರಿನಲ್ಲಿ ನೇತ್ರದಾನ ಮಾಡುವುದಾಗಿ ಪಿ.ಜಿ.ಆರ್‌.ಸಿಂಧ್ಯಾ ಅವರು ನೇತ್ರದಾನದ ಪತ್ರಕ್ಕೆ ಸಹಿ ಹಾಕಿ ಎನ್‌.ಎಸ್‌.ಶ್ರೀಧರ್‌ ಅವರಿಗೆ ನೀಡಿದರು. ಸೆ.19ರಿಂದ ಫುಡ್‌ ಫಾರ್‌ ಫೂಚರ್‌ ಎಂಬ ವಿನೂತನ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟಿದ್ದು, ವ್ಯರ್ಥವಾಗುವ ಆಹಾರ ಸಂಗ್ರಹಣೆ ಮಾಡಿ ಬಡವರಿಗೆ ಹಂಚುವ ಕೆಲಸ ಮಾಡಲಾಗುವುದು. ಜೊತೆಗೆ ಆಹಾರ ವ್ಯರ್ಥ ಮಾಡದಂತೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ತುಮಕೂರು ಸ್ಥಳೀಯ ಸಂಸ್ಥೆ ಅಧ್ಯಕ್ಷ ಬೆಳ್ಳಿ ಲೋಕೇಶ್‌ ಮಾತನಾಡಿ, ಸಂಸ್ಥೆಯ ರಾಜ್ಯ ಕಮಿಟಿ ನಿರ್ದೇಶನದಂತೆ ಜಿಲ್ಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಮತ್ತು ಕೊರೊನ ವಾರಿಯರ್ಸ್ ಗಳನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಿಗೆ ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ನೀಡಿದ್ದಲ್ಲಿ ಸುಸಂಸ್ಕೃತ ನಾಗರಿಕರಾಗುತ್ತಾರೆ. ಇಂಥ ಶಿಸ್ತಿನ ಶಿಕ್ಷಣ ನೀಡುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು ಮತ್ತು ಕೋವಿಡ್‌ ವಾರಿಯರ್ಸ್ ಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್‌ ಸಭಾಪತಿ ಎಸ್‌.ನಾಗಣ್ಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಶಾ ಪ್ರಸನ್ನಕುಮಾರ್‌, ತಿಪಟೂರು ಕುಮಾರ್‌ ಆಸ್ಪತ್ರೆಯ ಡಾ.ಶ್ರೀಧರ್‌, ಡಾ.ಮೀರಾ ಶ್ರೀಧರ್‌, ಎಸ್‌ಎನ್‌ಐ ಕೇರ್‌ ಫೌಂಡೇಷನ್‌ನ ಡಾ.ಎನ್‌.ಎನ್‌.ಶ್ರೀಧರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತ ಬಿ.ಆರ್‌.ವೇಣುಗೋಪಾಲಕೃಷ್ಣ, ಜಿಲ್ಲಾ ಆಯುಕ್ತರಾದ ಸುಭಾಷಿಣಿ ಆರ್‌.ಕುಮಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಈಶ್ವರಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಉಪ್ಪಾರಹಳ್ಳಿ ಕುಮಾರ್‌, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಎ ಷಾ, ಗುರುನಾಥ್‌ ಪಿ.ನಾಯ್‌್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!