ತುಮಕೂರು: ಪ್ರಸ್ತುತ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ, ಒಳ ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಹಾಗೂ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾದಿಗ ದಂಡೋರ, ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರು, ಸರಕಾರದ ನಡೆಯನ್ನು ಖಂಡಿಸಿದರಲ್ಲದೆ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಅವರ ವಿರುದ್ಧ ಅವಹೇಳನಕಾರಿಯಾದ ರೀತಿ ಮಾತನಾಡಿರುವ ರಾಜ್ಯ ಸರಕಾರದ ಸಚಿವ ಪ್ರಭು ಚವ್ಹಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮಾದಿದ ದಂಡೋರ ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರ ಸ್ವಾಮಿ, ಕಳೆದ 20 ವರ್ಷಗಳಿಂದ ಮಾದಿಗ ದಂಡೋರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಲಭ್ಯವಿರುವ ಶೇ.15 ರ ಮೀಸಲಾತಿ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಜಾರಿಯಾಗಬೇಕು. ಒಳಮೀಸಲಾತಿ ವರ್ಗೀಕರಣವಾದರೆ ಮಾತ್ರ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ನ್ಯಾಯ ದೊರೆಯುತ್ತದೆ, ನ್ಯಾ.ಎ.ಜೆ.ಸದಾಶಿವ ಅವರು ಅತ್ಯಂತ ವೈಜ್ಞಾನಿಕವಾಗಿ ಸರಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಬಳಸಿಕೊಂಡು ವರದಿ ತಯಾರಿಸಿದ್ದಾರೆ. ವರದಿ ನೀಡಿ 11 ವರ್ಷ ಕಳೆದರೂ ಇದುವರೆಗೂ ಕನಿಷ್ಠ ಚರ್ಚೆಗು ಅವಕಾಶ ನೀಡಿಲ್ಲ. ಹಲವಾರು ರೀತಿಯ ಹೋರಾಟಗಳನ್ನು ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ನಡೆಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ತರಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಮಾದಿಗ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೋಡಿಯಾಲ ಮಹದೇವ್ ಮಾತನಾಡಿ, ಕಳೆದ ಶಿರಾ ಉಪಚುನಾವಣೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಹಿರಿಯ ನಾಯಕರು ಒಳಮೀಸಲಾತಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಈ ಮಾತು ನಂಬಿ ಮಾದಿಗರು ಬಿಜೆಪಿಗೆ ಮತ ನೀಡಿದ್ದರ ಪರಿಣಾಮ ಗೆಲುವು ಸಾಧ್ಯವಾಯಿತು. ಆದರೆ ಚುನಾವಣೆ ಮುಗಿದು 9 ತಿಂಗಳು ಕಳೆದರೂ ಈ ಬಗ್ಗೆ ಚಕಾರವೆತ್ತಿಲ್ಲ, ಒಂದು ವೇಳೆ ಸರಕಾರದ ಇದೇ ಧೋರಣೆ ಮುಂದುವರೆದರೆ ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಗತಿಯೇ ಬಿಜೆಪಿಗೂ ಆಗಲಿದೆ. ಹಾಗಾಗಿ ಕೂಡಲೇ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಮುಂದಾಗುವಂತೆ ಒತ್ತಾಯಿಸಿದರು.
ಈ ಸಂಬಂಧ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ತುಮಕೂರು ಉಪವಿಭಾಗಾಧಿಕಾರಿ ಅಜಯ್‌ಕುಮಾರ್ ಅವರಿಗೆ ಸಲ್ಲಿಸಲಾಯಿತು. ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಡಿ.ಸಿ.ರಾಜಣ್ಣ, ಮಧುಗಿರಿ ತಾಲೂಕು ಅಧ್ಯಕ್ಷ ಸಿದ್ದಾಪುರ ರಂಗಸ್ವಾಮಣ್ಣ, ಗೂಳರಿಮೆ ನಾಗರಾಜು, ಯೋಗಾನಂದ್, ಸತೀಶ್, ರಾಮಮೂರ್ತಿ, ಮಹದೇವ್, ರಂಗಸ್ವಾಮಿ, ರಾಮಸ್ವಾಮಿ, ನಾಗೇಶ್, ಮಹಾಲಿಂಗಯ್ಯ, ಶಿವಕುಮಾರ್, ಬಂಡೆ ಕುಮಾರ್, ಬೆಟ್ಟದೂರು ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
Get real time updates directly on you device, subscribe now.
Prev Post
Next Post
Comments are closed.