ಕುಣಿಗಲ್: ದೇಶದ ಬಡಜನತೆ, ಕಾರ್ಮಿಕರು, ಮಧ್ಯಮ ವರ್ಗದವರು, ದಲಿತರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಜನತೆಯನ್ನು ಸಂಪೂರ್ಣ ಗುಲಾಮಗಿರಿಗೆ ತಳ್ಳುವಂತಹ ಕೇಂದ್ರಸರ್ಕಾರದ ಕಾಯಿದೆಗಳ ವಿರೋಧಿಸಿ ಸೆ.27 ರಂದು ನಡೆಯುವ ಕುಣಿಗಲ್ ತಾಲೂಕು ಬಂದ್ ಗೆ ಎಲ್ಲರೂ ಸಹಕಾರ ನೀಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮನವಿ ಮಾಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕೊವಿಡ್ ಲಾಕ್ ಡೌನ್ ಅವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟಕು ಮಾಡಿ ಸಂಸತ್ತಿನಲ್ಲಿ ಚರ್ಚೆ ಮಾಡದೆ ಸುಗ್ರಿವಾಜ್ಞೆ ಮೂಲಕ ಕೃಷಿ ತಿದ್ದುಪಡಿ ಕಾಯಿದೆ ಜಾರಿ ತಂದಿದೆ. ಇದನ್ನು ವಿರೋಧಿಸಿ ಅಖಿಲ ಭಾರತ ರೈತ ಸಂಘಟನೆಗಳು ಒಂದು ವರ್ಷದಿಂದ ಮುಷ್ಕರ ನಡೆಸುತ್ತಿದ್ದರೂ ದೇಶದ ಅನ್ನದಾತನ ಕೂಗು ಕೇಂದ್ರ ಸರ್ಕಾರ ಆಲಿಸಲಿಲ್ಲ. ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಸೆ.27ರ ಸೋಮವಾರ ಅಖಿಲ ಭಾರತ ಬಂದ್ ಅಂಗವಾಗಿ ಕುಣಿಗಲ್ ತಾಲೂಕು ಬಂದ್ ಕರೆ ನೀಡಿದ್ದು ಆಟೋ ಚಾಲಕರು, ಹೋಟೆಲ್ ಮಾಲೀಕರು, ವರ್ತಕರು ಸೇರಿದಂತೆ ಎಲ್ಲಾ ವರ್ಗದ ಜನತೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಕೃಷಿ ತಿದ್ದುಪಡಿ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆ, ಕಾರ್ಮಿಕ ತಿದ್ದುಪಡಿ ಕಾಯಿದೆ, ಗ್ರಾಹಕ ತಿದ್ದುಪಡಿ ಕಾಯಿದೆ, ವಿದ್ಯುತ್‌ತಿದ್ದುಪಡಿ ಕಾಯಿದೆ, ಭೂಸುಧಾರಣೆ ತಿದ್ದುಪಡಿ ಕಾಯಿದೆಗಳ ವಿರುದ್ಧ ಸ್ಪಷ್ಟ ಸಂದೇಶ ನೀಡಬೇಕು.
ಕೇಂದ್ರ ಸರ್ಕಾರದ ಕಾಯಿದೆಗಳು ಜಾರಿಗೆ ಬಂದಲ್ಲಿ ರೈತರು ತಮ್ಮ ಜಮೀನು ತೊರೆಯಬೇಕಾಗುತ್ತೆ, ಎಪಿಎಂಸಿ ಕಾಯಿದೆಯಿಂದ ರೈತನ ಬೆಳೆಗೆ ಬೆಲೆ ಸಿಗದು, ಗ್ರಾಹಕ ತಿದ್ದುಪಡಿ ಕಾಯಿದೆಯಿಂದ ಕಾಳಸಂತೆ ಹೆಚ್ಚಾಗಿ ಗ್ರಾಹಕರು ಬೆಲೆ ಏರಿಗೆ ಬಿಸಿ ಅನುಭವಿಸ ಬೇಕಾಗುತ್ತದೆ. ವಿದ್ಯುತ್ ಖಾಸಗಿಕರಣಗೊಂಡು ಎಲ್ಲವೂ ಖಾಸಗಿ ವ್ಯವಸ್ಥೆಯಡಿಯಲ್ಲೆ ಇದ್ದು, ಜನರ ಜೀವನವನ್ನು ನಾಳೆ ಕೆಲವೆ ಕೆಲ ಖಾಸಗಿ ಕಂಪನಿಗಳು ನಿರ್ವಹಣೆ ಮಾಡುವ ಹಂತಕ್ಕೆ ಹೋಗಲಿದೆ. ಜನತೆ ಈ ಬಗ್ಗೆ ಜಾಗೃತಿ ವಹಿಸಬೇಕು. ವಿರೋಧ ಪಕ್ಷ ಕಾಂಗ್ರೆಸ್ ಸಹ ಖಾಸಗಿಕರಣಕ್ಕೆ ಪರೋಕ್ಷ ಬೆಂಬಲಿಸುವ ಮೂಲಕ ರಾಷ್ಟ್ರದ ಜನತೆಗೆ ಮೋಸ ಮಾಡಿದೆ. ಜನತೆ ಪ್ರಜ್ಞಾವಂತರಾಗದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜನ ಜೀವನ ಕಷ್ಟಕರವಾಗುತ್ತದೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ತಾಲೂಕು ಬಂದ್ ಜೊತೆ ಹೋಬಳಿ ಕೇಂದ್ರಗಳ ಬಂದ್‌ಗೆ ಜನತೆ ಸಹಕರಿಸಬೇಕು, ನಮ್ಮ ಸಂಘಟನೆಯೊಂದಿಗೆ ದಲಿತಪರ, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಪ್ರತಿಭಟನೆಗೆ ಸಹಕಾರ ನೀಡಲಿವೆ, ಜನರೂ ಸಹಕಾರ ನೀಡಬೇಕೆಂದರು.
ರೈತ ಸಂಘದ ಲಕ್ಷ್ಮಣ, ಗಿರೀಶ, ಚನ್ನಪ್ಪ, ಬೋರೇಗೌಡ, ರಂಗಸ್ವಾಮಿ, ವೆಂಕಟೇಶ, ಪ್ರಕಾಶ, ಕೃಷ್ಣ, ದಲಿತ ಮುಖಂಡ ರಾಜು, ಅಂಗನವಾಡಿ ನೌಕರರ ಸಂಘದ ಗೌರಮ್ಮ, ಸಬೀನಾಬಾನು, ಸುಮತಿ, ಗೀತಾ ಇತರರು ಇದ್ದರು.
Get real time updates directly on you device, subscribe now.
Prev Post
Comments are closed.