ಕಂದಾಯ ಕಟ್ಟದ ಅಂಗಡಿಗಳಿಗೆ ಬೀಗ ಹಾಕಿ

578

Get real time updates directly on you device, subscribe now.

ಮಧುಗಿರಿ: ಪುರಸಭೆ ವ್ಯಾಪ್ತಿಯ 19ನೇ ವಾರ್ಡಿನಲ್ಲಿರುವ ಗುರುಭವನದ ಮೂವತ್ತು ವಾಣಿಜ್ಯ ಮಳಿಗೆಗಳ ನೆಲಗಂದಾಯ 4.5 ಲಕ್ಷ ರೂ. ಬಾಕಿ ಉಳಿಸಿದ್ದು, ಪುರಸಭಾ ವತಿಯಿಂದ ಪಾವತಿ ಮಾಡುವಂತೆ 3 ಬಾರಿ ನೋಟಿಸ್‌ ಜಾರಿ ಮಾಡಿದ್ದರು ಕಂದಾಯ ಪಾವತಿ ಮಾಡದ ಕಾರಣ ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿಯಿರಿ ಎಂದು ಪುರಸಭಾ ಸದಸ್ಯ ಎಂ.ಎಸ್‌.ಚಂದ್ರಶೇಖರ್‌ ಬಾಬು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪುರಸಭಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಸಸ್ಥಳ ದೃಢೀಕರಣ ಪತ್ರ ಮತ್ತು ಇತರೆ ದಾಖಲೆಗಳನ್ನು ಪಡೆಯಲು ಬರುವ ಸಾರ್ವಜನಿಕರಿಗೆ ಕಂದಾಯದ ರಸೀತಿ ಕಡ್ಡಾಯ ಮಾಡಿರುವ ಅಧಿಕಾರಿಗಳು ಮನೆಗಂದಾಯ ಒಂದು ಸಾವಿರ ರೂ. ಬಾಕಿ ಇದ್ದರೆ ಕಾನೂನನ್ನು ಅಡ್ಡ ತರುತ್ತಾರೆ, ಅದೇ ಲಕ್ಷಾಂತರ ರೂ. ಬಾಕಿ ಬಗ್ಗೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಈ ಬಗ್ಗೆ ಮುಖ್ಯಾಧಿಕಾರಿಗಳನ್ನು ಕೇಳಿದರೆ ಆರ್‌ಒ ಮೇಲೆ ಹೇಳುತ್ತಾರೆ, ಆರ್ ಒ ಅವರನ್ನು ಕೇಳಿದರೆ ನನಗೆ ನೋಟಿಸ್‌ ನೀಡಲಷ್ಟೇ ಅಧಿಕಾರವಿರುವುದು, ಬೀಗ ಜಡಿಯಲು ಅಧಿಕಾರ ಇಲ್ಲ ಎನ್ನುತ್ತಾರೆ. ಹೀಗಾದರೆ ಈ ಗುರುಭವನದ ವಾಣಿಜ್ಯ ಮಳಿಗೆಗಳು ಆರಂಭವಾಗಿ 3 ವರ್ಷ ಕಳೆದಿದ್ದು ವ್ಯಾಪಾರಸ್ಥರು ಗುರುಭವನ ಅಭಿವೃದ್ಧಿ ಸಮಿತಿಗೆ ಬಾಡಿಗೆಯನ್ನು ಪ್ರತಿ ತಿಂಗಳು ಪಾವತಿ ಮಾಡಿ ಇಲ್ಲಿಯವರೆಗೂ ಸುಮಾರು ಹದಿನೆಂಟು ಲಕ್ಷ ರೂ. ವರೆಗೂ ಬಾಡಿಗೆ ಸಂದಾಯ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಪುರಸಭೆ ಸದಸ್ಯರೇ ಕಂದಾಯ ವಸೂಲಿ ಮಾಡಿ ಎಂದು ಸೂಚಿಸಿದರು ಕೂಡ ಅಧಿಕಾರಿಗಳು ಮತ್ತು ನೌಕರರ ನಡುವೆ ಸಮನ್ವಯತೆಯ ಕೊರತೆಯಿಂದ ವಸೂಲಾತಿ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.
ಗುರುಭವನದ ವಾಣಿಜ್ಯ ಮಳಿಗೆಗಳ ಕಂದಾಯ ಪುರಸಭೆ 4.5 ಲಕ್ಷ ರೂ. ಸಂದಾಯವಾದರೆ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯುತ್ತವೆ. ಹೇಮಾವತಿ ನೀರು ಚರಂಡಿ ಪಾಲಾಗುತ್ತಿದೆ, ರಿಪೇರಿಯಾಗಿ ವರ್ಷವಾಗಿದ್ದು ಇಂತಹ ಕಾಮಗಾರಿಗಳಿಗೆ ಹಣ ಬಳಕೆ ಮಾಡಬಹುದು, ಮಧುಗಿರಿ ಪುರಸಭೆಯಲ್ಲಿ ಕಂದಾಯ ವಸೂಲಿ ಸರಿಯಾಗಿ ಆಗಿಲ್ಲವೆಂದು ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಸಭೆಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿರುವುದು ನಿದರ್ಶನವಾಗಿದೆ.
ಗುರು ಭವನದ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳ ಕಂದಾಯ ವಸೂಲಿ ಮಾಡಲು ಒಂದು ವಾರದ ಗಡುವು ನೀಡುತ್ತೇನೆ. ಇಲ್ಲವಾದರೆ ಪುರಸಭೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಎಂ.ಎಸ್‌.ಚಂದ್ರ ಶೇಖರ್‌ ಬಾಬು ಎಚ್ಚರಿಸಿದರು.
ಕರೆಂಟ್‌ ಕಟ್‌: ಕಂದಾಯ ಬಾಕಿ ಇರುವ ಕಾರಣ ವಿದ್ಯುತ್‌ ಸಂಪರ್ಕ ಕಡಿತ ಮಾಡಿಸಬಹುದಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಅದರ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!