ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಕಾಡುಗೊಲ್ಲರನ್ನೇ ಅಧ್ಯಕ್ಷ ಮಾಡಿ

125

Get real time updates directly on you device, subscribe now.

ತುಮಕೂರು: ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಕಾಡುಗೊಲ್ಲ ಅಭ್ಯರ್ಥಿಯನ್ನೇ ನೇಮಕ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಪರಿಶಿಷ್ಟ ಪಂಗಡ ಮೀಸಲು ಹೋರಾಟ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷ ಎಸ್‌.ಚಿಕ್ಕರಾಜು ನೇತೃತ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಎಸ್‌.ಚಿಕ್ಕರಾಜು, ಈ ಹಿಂದೆ ಶಿರಾ ಉಪಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡುತ್ತೇವೆ, ನೀವೆಲ್ಲರೂ ನಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡರು ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಶಿರಾ ಉಪ ಚುನಾವಣೆಯಲ್ಲಿ ಕಾಡುಗೊಲ್ಲರು ಇತರೆ ಪಕ್ಷಗಳನ್ನು ತಿರಸ್ಕರಿಸಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸಲಾಯಿತು ಎಂದರು.
ಆದ್ದರಿಂದ ಶಿರಾ ಉಪ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಯಥಾವತ್ತಾಗಿ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನೇ ಮಾಡಬೇಕು ಮತ್ತು ಕಾಡುಗೊಲ್ಲರನ್ನೇ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು, ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡರು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡದಿದ್ದರೆ ಅಥವಾ ನಿಗಮ ಮಾಡಿ, ನಿಗಮಕ್ಕೆ ಕಾಡುಗೊಲ್ಲ ಅಭ್ಯರ್ಥಿಯನ್ನು ನೇಮಿಸದಿದ್ದರೆ ನಾವೆಲ್ಲರೂ ಸೇರಿ ಬೇರೆ ರೀತಿಯಾಗಿ ಯೋಚನೆ ಮಾಡಬೇಕಾಗುತ್ತದೆ. ಆ ಯೋಚನೆ ಮಾಡುವುದು ಬೇಡ ಎಂದರೆ ಬಿಜೆಪಿ ಪಕ್ಷ, ಬಿ.ಎಸ್‌.ಯಡಿಯೂರಪ್ಪನವರು ಮತ್ತು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ ಗೌಡರು ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನೇ ಮಾಡಬೇಕು ಮತ್ತು ಯಾವುದೇ ಒತ್ತಡಕ್ಕೆ ಒಳಗಾಗಿ ಬೇರೆ ರೀತಿಯಾಗಿ ಯೋಚನೆ ಮಾಡಬಾರದು ಎಂದು ಹೇಳಿದರು.
ಹಿರಿಯೂರು ಶಾಸಕಿ ಪೂರ್ಣಿಮಾ ಅವರು ಸಮಗ್ರ ಗೊಲ್ಲ ಅಭಿವೃದ್ಧಿ ನಿಗಮ ಮಾಡುವುದಕ್ಕೆ ಹೊರಟಿದ್ದು, ಸಮಗ್ರ ಗೊಲ್ಲ ಅಭಿವೃದ್ಧಿ ನಿಮಗ ಮಾಡಿದರೆ ನಿಗಮಕ್ಕೆ ಸರ್ಕಾರ ಒಂದು ಕೋಟಿ ಅನುದಾನ ಬಿಡುಗಡೆ ಮಾಡಿದರೆ ಅದರಲ್ಲಿ 90 ಲಕ್ಷ ರೂ. ಗಳನ್ನು ರಾಜ್ಯ ಸಂಘಕ್ಕೆ ಬಳಸಿಕೊಳ್ಳುತ್ತಾರೆ. ಉಳಿದ ಕೇವಲ 10 ಲಕ್ಷ ರೂ. ಗಳನ್ನು ಗೊಲ್ಲರಹಟ್ಟಿಗಳಿಗೆ ಹಂಚಲು ಬರುತ್ತಾರೆ. ಇದರಿಂದ ಗೊಲ್ಲರಹಟ್ಟಿಗಳು ಅಭಿವೃದ್ಧಿ ಆಗುವುದೇ ಇಲ್ಲ, ಕಾಡುಗೊಲ್ಲರು ಅಭಿವೃದ್ಧಿ ಆಗುವುದೇ ಇಲ್ಲ, ಹಾಗಾಗಿ ಸಮಗ್ರ ಗೊಲ್ಲ ಅಭಿವೃದ್ಧಿ ನಿಗಮವನ್ನು ಮಾಡಲೇಬಾರದು, ಈಗಾಗಲೇ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಜಾರಿ ಮಾಡಿದ್ದಾರೆ ಅದನ್ನೇ ಅನುಷ್ಠಾನಗೊಳಿಸಿ, ಕಾಡುಗೊಲ್ಲರನ್ನೇ ನಿಗಮದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಬಿ.ಸುರೇಶ್ ಗೌಡರಿಗೆ ಎಸ್‌.ಚಿಕ್ಕರಾಜು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಪರಿಶಿಷ್ಟ ಪಂಗಡ ಮೀಸಲು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಕೆ.ಗಂಗಾಧರ್‌, ಸಂಚಾಲಕ ಜೆ.ರಮೇಶ್‌, ಸಂಘಟನಾ ಕಾರ್ಯದರ್ಶಿ ಇ.ಟಿ.ನಾಗರಾಜು, ಕಾರ್ಯದರ್ಶಿ ಎಸ್‌.ಮಂಜುನಾಥ್‌, ಉಪಾಧ್ಯಕ್ಷ ಕೆ.ದಿಲೀಪ್‌, ಖಜಾಂಚಿ ಟಿ.ಎನ್‌.ಮಂಜುನಾಥ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!