ಮಹಾಜನ್‌ ಪರಿವಾರ ಸಮಿತಿಯಿಂದ ಪ್ರತಿಭಟನೆ

ರಸ್ತೆ ಒತ್ತುವರಿಗೆ ತೆರವಿಗೆ ಒತ್ತಾಯ

123

Get real time updates directly on you device, subscribe now.

ತುಮಕೂರು: ಭಾರತೀನಗರ ದಿಂದ ಎಸ್‌ಐಟಿ ಮುಂಭಾಗದ ಮುಖ್ಯರಸ್ತೆಗೆ ಬರಲು ಇರುವ 40 ಅಡಿ ಸಂಪರ್ಕ ರಸ್ತೆ ಒತ್ತುವರಿಯಾಗಿದ್ದು, ಸದರಿ ರಸ್ತೆಯ ಒತ್ತುವರಿ ತೆರವುಗೊಳಿಸುವಂತೆ ಕರ್ನಾಟಕ ಮಹಾಜನ್‌ ಪರಿವಾರ ಸಮಿತಿಯಿಂದ ಎಸ್‌ಐಟಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಾಜನ ಪರಿವಾರ ಸಮಿತಿ ರಾಜ್ಯಾಧ್ಯಕ್ಷ ಹಂಚಿಹಳ್ಳಿ ರಾಮುಸ್ವಾಮಿ ಮಾತನಾಡಿ, ನಗರದ ಎಸ್‌ಐಟಿ ಮುಂಭಾಗದಿಂದ ಹನುಮಂತಪುರ, ವಿದ್ಯಾನಗರ ಮತ್ತಿತರರ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ಮೂಲದಲ್ಲಿ ಹಾಗೂ ದಾಖಲೆಗಳ ಪ್ರಕಾರ 40 ಅಡಿ ರಸ್ತೆ ಇದೆ. ಆದರೆ ರಸ್ತೆಯ ಎರಡು ಬದಿ ಒತ್ತುವರಿಯಾಗಿ ಪ್ರಸ್ತುತ ಕೇವಲ 20 ಅಡಿ ಮಾತ್ರ ಇದೆ, ರಸ್ತೆ ಒತ್ತುವರಿ ತೆರವು ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ಏಕಾಎಕಿ 20 ಅಡಿ ರಸ್ತೆಯನ್ನೇ ಅಭಿವೃದ್ಧಿ ಪಡಿಸಲು ಕಾಮಗಾರಿ ಆರಂಭಿಸಲಾಗುತ್ತಿದೆ. ಆದ್ದರಿಂದ ಮೊದಲು ನಿಯಮಾನುಸಾರ 40 ಅಡಿ ರಸ್ತೆ ತೆರವುಗೊಳಿಸಿ, ನಂತರ ಕಾಮಗಾರಿ ಆರಂಭಿಸಲಿ ಎಂಬುದು ನಮ್ಮ ಹೋರಾಟವಾಗಿದೆ ಎಂದು ಒತ್ತಾಯಿಸಿದರು.
ಕರ್ನಾಟಕ ಮಹಾಜನ್‌ ಪರಿವಾರ ಸಮಿತಿಯ ರಾಜ್ಯ ಗೌರವಾಧ್ಯಕ್ಷ ಎಂ.ವಿ.ರಾಘವೇಂದ್ರ ಸ್ವಾಮಿ ಮಾತನಾಡಿ, ಭಾರತಿನಗರದಿಂದ ಬಿ.ಹೆಚ್‌.ರಸ್ತೆಗೆ ಸಂಪರ್ಕ ಕಲ್ಪಿಸುವ 40 ಅಡಿ ರಸ್ತೆಯನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡ ಪರಿಣಾಮ ರಸ್ತೆಯ ಅಗಲ ಕೇವಲ 20 ಅಡಿಗೆ ಕುಸಿದಿದೆ. ಹಲವಾರು ಬಾರಿ ಒತ್ತುವರಿ ತೆರವು ಮಾಡುವಂತೆ ನಗರಪಾಲಿಕೆಯ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒತ್ತುವರಿ ತೆರವು ಮಾಡುವವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಬೇಡ ಎಂದು ಈ ಭಾಗದ ಜನಸಾಮಾನ್ಯರು ಒತ್ತಾಯ ಮಾಡುತ್ತಾ ಬಂದಿದ್ದಾರೆ. ಇವುಗಳಿಗೆ ಬೆಲೆ ನೀಡದೆ ಪಾಲಿಕೆ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ. ಇದನ್ನು ವಿರೋಧಿಸಿ ನಾವು ಎಸ್‌ಐಟಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಒಂದು ವೇಳೆ ನಗರಪಾಲಿಕೆ ಒತ್ತುವರಿ ತೆರವು ಮಾಡದೆ ಕಾಮಗಾರಿ ನಡೆಸಲು ಮುಂದಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಕರ್ನಾಟಕ ಮಹಾಜನ್‌ ಪರಿವಾರದ ಮುಖಂಡ ಇ.ಟಿ.ನಾಗರಾಜು ಮಾತನಾಡಿ, ಭಾರತೀನಗರದಿಂದ ಎಸ್‌ಐಟಿಯವರೆಗೆ ಇರುವ ರಸ್ತೆ ಅತ್ಯಂತ ಕಿರಿದಾಗಿರುವ ಕಾರಣ ದೊಡ್ಡ ವಾಹನ ಬಂದರೆ ಮತ್ತೊಂದು ವಾಹನ ಓಡಾಡುವುದೇ ಕಷ್ಟವಾಗಿದೆ. ಓವರ್‌ ಟೇಕ್‌ ಮಾಡುವ ಸಂದರ್ಭದಲ್ಲಿ ಕೆಲವರು ಬಿದ್ದು ಗಾಯಗೊಂಡಿದ್ದಾರೆ. ಹೀಗಿದ್ದರೂ ಪಾಲಿಕೆಯವರು ಒತ್ತುವರಿ ತೆರವು ಮಾಡದೆ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಖಂಡನೀಯ. ಕೂಡಲೇ ರಸ್ತೆ ಒತ್ತುವರಿ ತೆರವು ಮಾಡಿ, ನಂತರ ಕಾಮಗಾರಿ ಆರಂಭಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಾಜನ್‌ ಪರಿವಾರ ಸಮಿತಿಯ ಮುಖಂಡರಾದ ಮಂಜುನಾಥ್‌, ಮಧುಸೂಧನ್‌, ಶಾರದಮ್ಮ, ಗಂಗಮ್ಮ, ನಾಗರತ್ನ, ಕಮಲಮ್ಮ, ದೇವಮ್ಮ, ಮಂಜು ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!