ತುಮಕೂರು: ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ಸೇರಿದಂತೆ ಪಟ್ಟಣ ಪಂಚಾಯತಿಗಳಲ್ಲಿಯೂ ಕೋಟ್ಯಂತರ ರೂ. ಕರ ವಸೂಲಿ ಬಾಕಿಯಿದೆ. ನಿರೀಕ್ಷೆಯಂತೆ ತೆರಿಗೆ ಸಂಗ್ರಹವಾಗಿಲ್ಲ, ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಮಾಡಿ ಡಿಮ್ಯಾಂಡ್ ನೋಟೀಸ್ ನೀಡದಿದ್ದರೆ ವಸೂಲಿ ಹೇಗೆ ಸಾಧ್ಯ. ತೆರಿಗೆ ವಸೂಲಿ ಮಾಡದೆ ನಿರ್ಲಕ್ಷ್ಯ ತೋರುವುದು ಅಧಿಕಾರಿಗಳ ಕರ್ತವ್ಯವಲ್ಲ. ಮುಂದಿನ ಸಭೆಯೊಳಗೆ ಶೇ.50ರಷ್ಟು ಕರ ವಸೂಲಿ ಆಗಲೇಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಗಳ ಸಭಾಂಗಣದಲ್ಲಿ ನಡೆದ ತೆರಿಗೆ ವಸೂಲಿ ಸಂಗ್ರಹ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಒಟ್ಟು ಶೇ.56.34 ರಷ್ಟು ಆಸ್ತಿ, ಶೇ.19.83 ರಷ್ಟು ಅಂಗಡಿ ಮಳಿಗೆಗಳ ಬಾಡಿಗೆ, ಶೇ.22.26 ರಷ್ಟು ನೀರಿನ ಶುಲ್ಕ ಹಾಗೂ ಶೇ.34.13 ರಷ್ಟು ಜಾಹಿರಾತು ತೆರಿಗೆ ಮಾತ್ರ ವಸೂಲಿಯಾಗಿದೆ. ನಿರೀಕ್ಷೆಯಂತೆ ಯಾವ ಅಧಿಕಾರಿಯೂ ತೆರಿಗೆ ವಸೂಲಿ ಮಾಡಿಲ್ಲ. ಸಂಬಂಧಿಸಿದ ಎಲ್ಲಾ ಅಧಿಕಾರಿಗಳೂ ನೂರರಷ್ಟು ಕರ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕರ ವಸೂಲಿ ಸಮರ್ಪಕವಾಗಿ ಮಾಡುವುದರ ಜೊತೆಗೆ ನೆನೆಗುದ್ದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು. ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ವಿವರವನ್ನು ತಂತ್ರಾಂಶದಲ್ಲಿ ಕಾಲ ಕಾಲಕ್ಕೆ ಅಪ್‌ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.
ಅನಧಿಕೃತ ಫ್ಲೆಕ್ಸ್ ತೆರವಿಗೆ ಕ್ರಮ: ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳು ತಲೆ ಎತ್ತುತ್ತಿದ್ದು, ಇವುಗಳ ತೆರವಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಮುಖ್ಯವಾಗಿ ಜನ್ಮ ದಿನದ ಶುಭಾಶಯಗಳ ಫ್ಲೆಕ್ಸ್ ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅಧಿಕಾರಿಗಳು ಯಾರ ಮುಲಾಜಿಗೂ ಮನ್ನಣೆ ನೀಡದೆ ತೆರವುಗೊಳಿಸಿ ವಿಲೇವಾರಿ ಮಾಡಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭ ಸೇರಿದಂತೆ ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ಮುಖ್ಯಾಧಿಕಾರಿ ಇದ್ದರು.
Comments are closed.