ಅಜ್ಜಗೊಂಡನಹಳ್ಳಿ ಮಹಾನಗರ ಪಾಲಿಕೆ ಸದಸ್ಯರ ಭೇಟಿ

ಕಸ ವಿಲೇವಾರಿ ಘಟಕ ಪರಿಶೀಲನೆ

459

Get real time updates directly on you device, subscribe now.

ತುಮಕೂರು: ಮಹಾನಗರ ಪಾಲಿಕೆಯ ಮಹಾಪೌರ ಬಿ ಜಿ.ಕೃಷ್ಣಪ್ಪ, ವಿರೋಧ ಪಕ್ಷದ ನಾಯಕ ಜೆ.ಕುಮಾರ್‌, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್‌ ಮಹಮದ್‌, ಪಾಲಿಕೆಯ ಕಾರ್ಪೋರೇಟರ್‌ಗಳು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಆಯುಕ್ತರಾದ ರೇಣುಕಾ ಅವರ ಅಜ್ಜಗೊಂಡನಹಳ್ಳಿ ತಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಘಟಕಕ್ಕೆ ಸಂಬಂಧಿಸಿದಂತೆ, ಕಸವಿಂಗಡನೆ, ತ್ಯಾಜ್ಯ ಸಂಸ್ಕರಣೆ ಹಾಗೂ ಘಟಕಕ್ಕೆ ಸಂಬಂಧಿಸಿದಂತೆ ಇರುವ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸಿದರು.
ಈ ವೇಳೆ ಪಾಲಿಕೆ ಸದಸ್ಯ ಮಂಜುನಾಥ್‌ ಮಾತನಾಡಿ, ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನೂತನವಾಗಿ ಹೊಸ ಯಂತ್ರಗಳನ್ನು ಅಳವಡಿಸಿದ್ದು ಅದರ ಮೂಲಕ ಕಸ ವಿಂಗಡನೆ ಮಾಡಲಾಗುತ್ತಿದೆ, ಹಾಗಾಗಿ ಇದುವರೆಗೂ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ಹಾಗೂ ಇಲ್ಲಿ ವಿಂಗಡನೆ ಮಾಡುತ್ತಿರುವ ವಿಧಾನ ಹಾಗೂ ಗೊಬ್ಬರ ಉತ್ಪಾದನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದರು.
ನಮ್ಮ ಭೇಟಿ ವೇಳೆ ಸಾಕಷ್ಟು ಲೋಪದೋಷ ಕಂಡು ಬಂದಿದ್ದು ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೆ ಇರುವುದು ಕಂಡುಬಂದಿದೆ, ಇಲ್ಲಿ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್, ನಗರದಲ್ಲಿ ಪಾಲಿಕೆ ವತಿಯಿಂದ ಸೀಜ್ ಮಾಡಲಾದ ಪ್ಲಾಸ್ಟಿಕ್‌, ವೇಬ್ರಿಡ್ಜ್, ಸಿಸಿ ಕ್ಯಾಮೆರಾ ಹಾಗೂ ಕಸ ವಿಂಗಡಣೆ ಮಾಡುವ ಯಂತ್ರ ಖರೀದಿಯಲ್ಲಿ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ, ಶೀಘ್ರವೇ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಲು ಕೋರಿದೆ, ದಾಖಲೆ ನೀಡಲು ಹಿಂಜರಿದರೆ ನಮ್ಮ ಪಾಲಿಕೆ ಸದಸ್ಯರು ಸೇರಿ ಲೋಕಾಯುಕ್ತದಲ್ಲಿ ಕೇಸ್‌ ದಾಖಲಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆಯ ಕಮಿಷನರ್‌ ರೇಣುಕಾ ಮಾತನಾಡಿ, ಅಜ್ಜಗುಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನೂತನವಾಗಿ ಪಾಲಿಕೆ ವತಿಯಿಂದ ಯಂತ್ರಗಳನ್ನು ಅಳವಡಿಸಲಾಗಿದೆ, ಹಾಗಾಗಿ ಪಾಲಿಕೆ ಸದಸ್ಯರ ನಿಯೋಗ ಭೇಟಿ ನೀಡಿದೆ, ಈಗ ಅಳವಡಿಸಿರುವ ಯಂತ್ರವು ರಾಜ್ಯದಲ್ಲೇ ಮಾದರಿಯಾಗಿದೆ, ಇದರ ಮೂಲಕ ತುಮಕೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡನೆ ಮಾಡಲಾಗುವುದು, ಈಗ ಅಳವಡಿಸಿರುವ ಯಂತ್ರವು ಪ್ರತಿ ದಿನಕ್ಕೆ 100 ಟನ್‌ ಕಸ ವಿಂಗಡನೆ ಹಾಗೂ ಗೊಬ್ಬರ ಉತ್ಪತ್ತಿ ಮಾಡಲು ಸಹಕಾರಿಯಾಗುತ್ತದೆ, 2018ರಲ್ಲಿ ಒಂದು ಯಂತ್ರ ಖರೀದಿ ಮಾಡಿದ್ದು, ಈಗ ನೂತನವಾಗಿ 15ನೇ ಹಣಕಾಸಿನಲ್ಲಿ ಮತ್ತೆ ಎರಡು ಹೊಸ ಯಂತ್ರಗಳನ್ನು ಟೆಂಡರ್‌ ಮೂಲಕ 2.32 ಲಕ್ಷದ ಯಂತ್ರ ಖರೀದಿ ಮಾಡಲಾಗಿದೆ. ನೂತನವಾಗಿ ಅಳವಡಿಸಿರುವ ಯಂತ್ರ ಕಾರ್ಯಕ್ಷಮತೆ ಪರೀಕ್ಷಿಸಲಾಗುತ್ತಿದೆ ಎಂದರು.
ಎಂಜಿಟಿ ಕೋರ್ಟ್‌ ಅಪ್ರುವಲ್‌ ಮೂಲಕ ಇಂಡಸ್ಟ್ರೀಸ್‌ ಹಣದಲ್ಲಿ ಪ್ಲಾಸ್ಟಿಕ್‌ ಬೈಲ್‌ ಮಿಷಿನ್‌ನ್ನು 8 ಲಕ್ಷದಲ್ಲಿ ಖರೀದಿ ಮಾಡಲಾಗಿದೆ, ಯಂತ್ರವು 200 ಟನ್‌ ಪ್ಲಾಸ್ಟಿಕ್‌ ಬೇಲ್‌ ಮಾಡುವ ಕಾರ್ಯ ಕ್ಷಮತೆ ಹೊಂದಿದೆ. ಸುಮಾರು 2 ಕೋಟಿ ವೆಚ್ಚದಲ್ಲಿ ನೂತನ ಶೆಡ್‌ ನಿರ್ಮಾಣ ಮಾಡಲಾಗಿದೆ, ಇದರ ಮೂಲಕ ಕಸವಿಂಗಡನೆ ಹಾಗೂ ಗೊಬ್ಬರ ಉತ್ಪತ್ತಿ ಮಾಡಲು ಶೆಡ್‌ ಬಳಸಿಕೊಳ್ಳಲಾಗುತ್ತಿದೆ. ಇನ್ನು ತುಮಕೂರು ನಗರದಲ್ಲಿ ಪ್ರತಿ ದಿನಕ್ಕೆ 100 ರಿಂದ 120 ಟನ್‌ ಕಸ ಉತ್ಪತ್ತಿಯಾಗುತ್ತಿದ್ದು, 40 ಟನ್‌ ಒಣಕಸ, ಹಸಿ ಕಸ 80 ಟನ್‌, ಪ್ಲಾಸ್ಟಿಕ್‌ 10 ಟನ್‌ ಹಾಗೂ ಮರುಬಳಕೆಯ ಪ್ಲಾಸ್ಟಿಕ್‌ ಹತ್ತು ಟನ್‌ನಷ್ಟು ಉತ್ಪತ್ತಿಯಾಗುತ್ತಿದೆ ಎಂದರು.
ಇಲ್ಲಿ ಉತ್ಪತ್ತಿಯಾಗುವ ಕಸವನ್ನು ಟೆಂಡರ್ ದಾರರು ಪ್ರತಿ ಕೆಜಿಗೆ ಒಂದುವರೆ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನಕ್ಕೆ 100 ಟನ್‌ ನಷ್ಟು ಗೊಬ್ಬರ ಉತ್ಪತ್ತಿ ಮಾಡುವ ಯಂತ್ರವನ್ನು ಅಳವಡಿಸಲಾಗಿದೆ. ಇನ್ನು ಸ್ಮಾರ್ಟ್ ಸಿಟಿ ವತಿಯಿಂದ ಒಂದು ಬೋರ್ ವೆಲ್‌, ತಾತ್ಕಾಲಿಕ ರಸ್ತೆ, ಅರವತ್ತು ಬೀದಿದೀಪಗಳು ಹಾಗೂ 6 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಇನ್ನು ಕೆಟ್ಟು ಹೋಗಿರುವ ಯಂತ್ರಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಹಾಗೂ ವೇ ಬ್ರಿಡ್ಜ್ ಮಳೆ ಕಾರಣದಿಂದ ಕುಸಿದಿದ್ದು ಶೀಘ್ರದಲ್ಲೇ ಸರಿಪಡಿಸಲಾಗುವುದು, ಒಟ್ಟಾರೆಯಾಗಿ ಪಾಲಿಕೆ ಕಸ ವಿಲೇವಾರಿ ಘಟಕದಿಂದ ಟೆಂಡರ್‌ ಮೂಲಕ 65 ಲಕ್ಷದಷ್ಟು ಹಣ ಪಾಲಿಕೆಗೆ ಆದಾಯ ಲಭ್ಯವಾಗುತ್ತಿದೆ ಎಂದು ಮಾಹಿತಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!