ದೆಹಲಿ ರೈತರ ಹೋರಾಟ ಬೆಂಬಲಿಸಿ ಭಾರತ್‌ ಬಂದ್

120

Get real time updates directly on you device, subscribe now.

ತುಮಕೂರು: ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳ ರದ್ದು ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ಕಳೆದ 10 ತಿಂಗಳಿನಿಂದ ದೆಹಲಿ ಗಡಿಯಲ್ಲಿರುವ ನಡೆಯತ್ತಿರುವ ಅನ್ನದಾತರ ಹೋರಾಟ ಬೆಂಬಲಿಸಿ ಸೆಪ್ಟಂಬರ್‌ 27 ರಂದು ಕಿಸಾನ್‌ ಸಂಯುಕ್ತ ಹೋರಾಟ ಸಮಿತಿ ಕರೆ ನೀಡಿರುವ ಭಾರತ್‌ ಬಂದ್‌ ಬೆಂಬಲಿಸಿ, ಜಿಲ್ಲೆಯಾದ್ಯಂತ ಬಂದ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ನಗರದ ಜನಚಳವಳಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ತಿಂಗಳಿಂದ ದೆಹಲಿಯ ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಚಳವಳಿ ಹತ್ತಿಕ್ಕುವ ಕೆಲಸವನ್ನು ನರೇಂದ್ರಮೋದಿ ನೇತೃತ್ವದ ಒಕ್ಕೂಟ ಸರಕಾರ ಮಾಡುತ್ತಲೇ ಬಂದಿದೆ. ಇದನ್ನು ವಿರೋಧಿಸಿ, ಕಾರ್ಮಿಕರ 44 ಕಾಯ್ದೆಗಳನ್ನು ರದ್ದು ಪಡಿಸಿ, ಕಾರ್ಪೋರೇಟ್‌ ಪರವಾದ 4 ಸಂಹಿತೆ ಮಾಡಿ ಉದ್ಯೋಗ ಭದ್ರತೆಯಿಲ್ಲದಂತೆ ಮಾಡಿದ್ದು, ಇದನ್ನು ವಿರೋಧಿಸಿ ಸಹ ಕಾರ್ಮಿಕರ ಒಕ್ಕೂಟ ಸರಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಕಾರ್ಮಿಕರು, ರೈತರು ಒಟ್ಟಾಗಿ ಸೆಪ್ಟಂಬರ್‌ 27ರ ಭಾರತ್‌ ಬಂದ್ ಗೆ ಕರೆ ನೀಡಿದ್ದು, ಇದರಲ್ಲಿ ಎಲ್ಲಾ ಕಾರ್ಮಿಕರು, ರೈತರು, ಪ್ರಗತಿಪರ ಚಿಂತಕರು, ಜನಸಾಮಾನ್ಯರು ಭಾಗವಹಿಸುವಂತೆ ಮನವಿ ಮಾಡಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್‌ ಮಾತನಾಡಿ, ಕೇಂದ್ರ ಸರಕಾರ ಸುಗ್ರಿವಾಜ್ಞೆಯ ಮೂಲಕ ರೈತರಿಗೆ, ಕಾರ್ಮಿಕರಿಗೆ ಮಾರಕವಾದ, ಉದ್ದಿಮೆ ಪರವಾದ ಕೃಷಿ ಕಾಯ್ದೆಗಳ ರದ್ದು ಹಾಗೂ ಕಾರ್ಮಿಕರು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಸೆಪ್ಟಂಬರ್‌ 27 ರಂದು ಭಾರತ್‌ ಬಂದ್ ಗೆ ಕರೆ ನೀಡಲಾಗಿದೆ. ರೈತರು, ಕಾರ್ಮಿಕರು ತಾವು ಇರುವಲ್ಲಿಯೇ ಜಿಲ್ಲೆ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಬಂದ್ ನಲ್ಲಿ ಭಾಗವಹಿಸಲಿದ್ದಾರೆ. ಅಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕಾರ್ಮಿಕ ಮುಖಂಡರು ನೇತೃತ್ವದಲ್ಲಿ ಬಂದ್‌ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರದ ಜನವಿರೋಧಿ ನೀತಿಯಿಂದ ತೊಂದರೆಗೆ ಒಳಗಾಗಿರುವ ಎಲ್ಲರೂ ಭಾರತ ಬಂದ್ ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದರು.
ಸಿ.ಯತಿರಾಜು ಮಾತನಾಡಿ, ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ರಾಜ್ಯ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ, ಭೂ ಸುಧಾರಣೆಯ ಹೆಸರಿನಲ್ಲಿ ರೈತರ ಭೂಮಿಯನ್ನು ಕಾರ್ಪೋರೇಟ್‌ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಇದರಿಂದ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಕ ಕಾಯ್ದೆಯೇ ತನ್ನ ಅಸ್ಥಿತ್ವ ಕಳೆದುಕೊಳ್ಳಲಿದೆ. ರೈತರು, ಕಾರ್ಮಿಕರು, ಜನಸಾಮಾನ್ಯರ ವಿರುದ್ಧವಾದ ಕಾಯ್ದೆಗಳ ಮೂಲಕ ಕಾರ್ಪೋರೇಟ್‌ ಪರ ಧೋರಣೆ ಹೊಂದಿರುವ ಸರಕಾರದ ವಿರುದ್ಧ ಸೆಪ್ಟಂಬರ್‌ 27ರ ಭಾರತ್‌ ಬಂದ್‌ ಸಂಘಟಿತ ಹೋರಾಟವಾಗಿದೆ. ಹಾಗಾಗಿ ಎಲ್ಲಾ ಪ್ರಗತಿಪರರು, ಹೋರಾಟಗಾರರು ಈ ಬಂದ್‌ನಲ್ಲಿ ಭಾಗವಹಿಸಿ, ಕೇಂದ್ರ ಮತ್ತು ರಾಜ್ಯ ಸರಕಾರದ ನಡೆಯನ್ನು ಹಿಮ್ಮೆಟ್ಟಿಸೋಣ ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ಬಿ.ಉಮೇಶ್‌, ಕರಿಬಸವಯ್ಯ, ಎಸ್‌.ಎನ್‌.ಸ್ವಾಮಿ, ಚಿರತೆ ಚಿಕ್ಕಣ್ಣ, ಆರ್‌ಕೆಎಸ್‌ನ ಎಸ್‌.ಎನ್‌.ಸ್ವಾಮಿ, ದಸಂಸದ ಪಿ.ಎನ್‌.ರಾಮಯ್ಯ ಇದ್ದರು.

Get real time updates directly on you device, subscribe now.

Comments are closed.

error: Content is protected !!