ತಿಪಟೂರು: ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಡಾ.ಯತೀಶ್ವರ ಶಿವಾಚಾರ್ಯ ಶ್ರೀಗಳು (48) ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ನಿಧನ ಹೊಂದಿದರು.
ಶ್ರೀಗಳು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ತಮ್ಮ ಕೊನೆಯ ಉಸಿರೆದರು.
ಶ್ರೀಮಠದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿ ರಾಜ್ಯದ ಗಣ್ಯವ್ಯಕ್ತಿಗಳಿಗೆ ಶ್ರೀಮಠದ ಅತ್ಯುತ್ತಮ ಪ್ರಶಸ್ತಿಯಾದ ಕುಪ್ಪೂರು ಶ್ರೀಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು. ವೀರಶೈವ ಲಿಂಗಾಯತ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಎಲ್ಲಾ ಸಮಾಜ ವರ್ಗದವರನ್ನು ಗೌರವಿಸುತ್ತಿದ್ದರು. ಶ್ರೀಮಠಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉದ್ಯಮಿ ಅಶೋಕ್ ಖೇಣಿ, ವಿಜಯ್ ಸಂಕೇಶ್ವರ್ ಮುಂತಾದ ಗಣ್ಯರು ಭೇಟಿ ನೀಡಿ ಪ್ರಶಸ್ತಿಗೆ ಭಾಜನರಾಗಿದ್ದರು. ಶ್ರೀಗಳ ನಿಧನಕ್ಕೆ ಶ್ರೀಕಾಡು ಸಿದ್ದೇಶ್ವರ ಮಠದ ಡಾ. ಕರಿವೃಷಭ ಶಿವಯೋಗೀಶ್ವರ ದೇಶಿಕೇಂದ್ರ ಸ್ವಾಮೀಜಿ, ಕಂಚಾಗಟ್ಟದ ರುದ್ರಮುನಿ ಸ್ವಾಮೀಜಿ, ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ತೀವ್ರ ಸಂತಾಪ ಸೂಚಿಸಿದ್ದಾರೆ.
ನಗರಸಭೆ ಅಧ್ಯಕ್ಷ ರಾಮಮೋಹನ್, ಮುಖಂಡ ಕೆ.ಟಿ.ಶಾಂತಕುಮಾರ್, ಟುಡಾ ಶಶಿಧರ್, ಎಪಿಎಂಸಿ ದಿವಾಕರ್, ತಾಲ್ಲೂಕು ವೀರಶೈವ-ಲಿಂಗಾಯತ ಮಂಡಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಗಳು ಸಮಾಜದ ಸೇವೆಗಾಗಿ ಅಪಾರ ಸೇವೆ ಸಲ್ಲಿಸಿದ್ದರು. ಯಾವುದೇ ಜಾತಿ ಮತ ನೋಡದೆ ಸರ್ವಧರ್ಮ ಸಹಿಷ್ಣುತೆಯನ್ನು ಪಾಲಿಸುತ್ತಿದ್ದರು ಯಾವುದೇ ವಿಚಾರವನ್ನು ನೇರವಾಗಿ ಚರ್ಚಿಸುತ್ತಿದ್ದರು, ಜಿಲ್ಲೆಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ
। ಬಿ.ಸಿ.ನಾಗೇಶ್, ಸಚಿವರು
ಶ್ರೀಗಳು ಮಠದ ಅಭಿವೃದ್ಧಿಗಾಗಿ ಜೀವನ ಸವೆಸಿದರು. ಅಭಿವೃದ್ಧಿಯ ವಿಚಾರವಾಗಿ ನನ್ನ ಸಲಹೆ ಪಡೆಯುತ್ತಿದ್ದರು, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ವತಃ ಬೀದಿಗಿಳಿದು ಹೋರಾಟ ಮಾಡಿದ್ದರು. ಶ್ರೀಗಳ ನಿಧನ ನನಗೆ ಆಘಾತ ಉಂಟು ಮಾಡಿದೆ. ಅವರಿಂದ ಇನ್ನಷ್ಟು ಸಮಾಜ ಸೇವೆ ನಡೆಯಬೇಕಿತ್ತು.
। ಕೆ.ಷಡಕ್ಷರಿ, ಮಾಜಿ ಶಾಸಕ
ಶ್ರೀಗಳ ಆಕಸ್ಮಿಕ ನಿಧನ ಇಡೀ ಜಿಲ್ಲೆಗೆ ಹಾಗೂ ಸಮಾಜಕ್ಕೆ ರೈತಾಪಿ ವರ್ಗಕ್ಕೆ ಅತೀವ ದುಃಖ ತರಿಸಿದೆ. ರಾಜ್ಯ ತೆಂಗು ಬೆಳೆಗಾರರ ಪರ ಹೋರಾಟ ಮಾಡಿ ರೈತರ ಪರವಾಗಿ ರಸ್ತೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನಸೆಳೆದಿದ್ದರು. ನಾಡಿನ ಅಭಿವೃದ್ಧಿಗಾಗಿ ಮಹತ್ವಾಕಾಂಕ್ಷೆ ಹೊಂದಿದ್ದರು. ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು.
। ಲೋಕೇಶ್ವರ್, ಸಮಾಜ ಮುಖಂಡ
ಶ್ರೀಗಳ ಅಂತಿಮ ದರ್ಶನದಲ್ಲಿ ಸಚಿವ ಜೆ.ಸಿಮಾಧುಸ್ವಾಮಿ, ಸೊಗಡು ಶಿವಣ್ಣ, ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್, ಕವಿತಾ ಕಿರಣಕುಮಾರ್, ಹುಳಿಯಾರು ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಗ್ರಾಪಂ ಸದಸ್ಯರಾದ ಸಿದ್ದರಾಮಯ್ಯ, ಜೈ ಕರ್ನಾಟಕ ವಾಹನ ಮಾಲೀಕರು ಮತ್ತು ಚಾಲಕರು ಸಂಘದ ತುಮಕೂರು ಜಿಲ್ಲಾಧ್ಯಕ್ಷ ಸುಬ್ಬು ಎನ್ ಮೂರ್ತಿ ಇದ್ದರು.
Comments are closed.