ಕ್ಯಾನ್ಸರ್‌ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರದ ಶಂಕುಸ್ಥಾಪನೆ

ಉತ್ತಮ ಆರೋಗ್ಯ ಸೇವೆ ನೀಡೋದು ಸರ್ಕಾರದ ಆದ್ಯತೆ: ಬೊಮ್ಮಾಯಿ

380

Get real time updates directly on you device, subscribe now.

ತುಮಕೂರು: ಜನರ ಆರೋಗ್ಯ ಸೇವೆಗೆ ಸರ್ಕಾರ ಬದ್ಧವಾಗಿದ್ದು, ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಹೆಚ್ಚು ಆರೋಗ್ಯ ಸೇವಾ ಕೇಂದ್ರಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ಕ್ಯಾನ್ಸರ್‌ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶೈಕ್ಷಣಿಕ, ಸಾಂಸ್ಕೃತಿಕ, ವಾಣಿಜ್ಯ ಹಾಗೂ ಕೈಗಾರಿಕಾ ವಲಯದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ ತುಮಕೂರಿನಲ್ಲಿ ಹೆಚ್ಚು ಆರೋಗ್ಯ ಸೌಲಭ್ಯ ಕಲ್ಪಿಸುವ ಮೂಲಕ ಬೆಂಗಳೂರು ಮೇಲಿರುವ ಒತ್ತಡ ತಗ್ಗಿಸುವ ಪ್ರಯತ್ನ ಮಾಡಲಾಗುವುದು. ತುಮಕೂರು ಜಿಲ್ಲೆಯ ಅಭಿವೃದ್ಧಿಯಿಂದಾಗಿ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂಬುದು ಹಿರಿಯರ ಚಿಂತನೆಯೂ ಆಗಿದ್ದು, ಈ ನಿಟ್ಟಿನಲ್ಲಿಯೇ ಕ್ಯಾನ್ಸರ್‌ ಆಸ್ಪತ್ರೆಯನ್ನು ತುಮಕೂರಿನಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನೂರು ಹಾಸಿಗೆಗಳುಳ್ಳ ಕ್ಯಾನ್ಸರ್‌ ಆಸ್ಪತ್ರೆಯನ್ನು ತುಮಕೂರಿನಲ್ಲಿ ಪ್ರಾರಂಭಿಸುತ್ತಿರುವುದು ಸಂತಷದ ವಿಷಯ, ಈ ಕ್ಯಾನ್ಸರ್‌ ಆಸ್ಪತ್ರೆಯಿಂದ ತುಮಕೂರು ಮಾತ್ರವಲ್ಲದೆ, ರಾಜ್ಯದ ದಕ್ಷಿಣ ಜಿಲ್ಲೆಗಳ ಕ್ಯಾನ್ಸರ್‌ ರೋಗಿಗಳಿಗೂ ಅನುಕೂಲವಾಗಲಿದೆ ಎಂದರು.
ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವುದು ಹಾಗೂ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ತಗ್ಗಿಸುವುದು ಸರ್ಕಾರದ ಮೊದಲಾದ್ಯತೆಯಾಗಿದೆ. ಅದಕ್ಕೆ ಪೂರಕವಾಗಿ ಗರ್ಭಿಣಿಯರ ಹಾಗೂ ನವ ಜಾತ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಪ್ರತ್ಯೇಕವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್‌ 3ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಕ್ಕಳ ತಪಾಸಣೆ ನಡೆಸಲಾಗುತ್ತಿದೆ, ಈ ತಪಾಸಣೆಯಲ್ಲಿ ಕಂಡುಬಂದ ಅಪೌಷ್ಟಿಕ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಳ ಸೇರಿದಂತೆ ಇತರೆ ರೋಗಗಳಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತುಮಕೂರಿನಲ್ಲಿಯೂ ಹತ್ತು ಹಾಸಿಗೆಗಳುಳ್ಳ ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್‌ ಅವರ ದೂರದೃಷ್ಟಿಯಿಂದ ಮತ್ತು ಅವರು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರಿಂದ 50 ವರ್ಷದಲ್ಲಿ ಆಗದ ಸಾಧನೆ ಒಂದೇ ವರ್ಷದಲ್ಲಾಗಿದೆ. ರಾಜ್ಯದಲ್ಲಿ 24 ಸಾವಿರ ವಿಶೇಷ ಹಾಸಿಗೆ ಹಾಗೂ 4 ಸಾವಿರ ಐಸಿಯು ಹಾಸಿಗೆಗಳ ವ್ಯವಸ್ಥೆ ಆಗಿರುವುದು ಆರೋಗ್ಯ ಕ್ಷೇತ್ರದ ಸಾಧನೆಯಾಗಿದೆ ಎಂದು ಖುಷಿ ವ್ಯಕ್ತಪಡಿಸಿದರು.
ಕೋವಿಡ್‌ ಮಹಾಮಾರಿಯಂತಹ ಸಂದರ್ಭದಲ್ಲಿ ಸಮುದಾಯ, ಸರ್ಕಾರ ಹಾಗೂ ಸಂಸ್ಥೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದ ಮುಖ್ಯಮಂತ್ರಿ, ಕೋವಿಡ್‌ ಅಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ವೈದ್ಯರು, ಸಿಬ್ಬಂದಿ, ಕಂದಾಯ, ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ರಾಜ್ಯದಲ್ಲಿ ಮೂರನೇ ಕೋವಿಡ್‌ ಅಲೆ ನಿಯಂತ್ರಣಕ್ಕೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಯಾವುದೇ ಆಕ್ಸಿಜನ್‌, ಐಸಿಯು ಮತ್ತು ಬೆಡ್ ಗಳ ಸಮಸ್ಯೆಯಾಗುವುದಿಲ್ಲ, ಆರೋಗ್ಯ ಸೇವೆಗೆ ಸರ್ಕಾರ ಹೆಚ್ಚು ಒತ್ತು ನೀಡಲಿದೆ ಎಂದು ಹೇಳಿದರು.
ಜಯದೇವ ಆಸ್ಪತ್ರೆಯನ್ನು ವಿಕೇಂದ್ರಿಕರಣಗೊಳಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಹೃದ್ರೋಗಕ್ಕೆ ಸಂಬಂಧಿಸಿದ ಆಸ್ಪತ್ರೆ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ತುಮಕೂರಿನಲ್ಲಿಯೂ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ತುಮಕೂರು ಜಿಲ್ಲಾಸ್ಪತ್ರೆ 400 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆಯಡಿ ನೂರು ಹಾಸಿಗೆಗಳುಳ್ಳ ಸಾಮರ್ಥ್ಯದ ಸುಮಾರು 20 ಕೋಟಿ ರೂ. ವೆಚ್ಚದ ಶೇ.60ರಷ್ಟು ಕೇಂದ್ರ ಹಾಗೂ ಶೇ.40ರಷ್ಟು ರಾಜ್ಯ ಸರ್ಕಾರದ ಅನುದಾನದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣವಾಗಲಿದ್ದು, ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೈಕೆಯ ಸೇವೆಯೂ ಉತ್ಕೃಷ್ಟವಾಗಲಿದೆ ಎಂದರು.
ದೇಶದ ಸರಾಸರಿಯಲ್ಲಿ ಒಂದು ಲಕ್ಷ ಹೆರಿಗೆಯಲ್ಲಿ 122 ತಾಯಂದಿರು ಮರಣ ಹೊಂದುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ 97 ತಾಯಂದಿರು ಮರಣ ಹೊಂದುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ 2022ನೇ ಸಾಲಿಗೆ ತಾಯಿಯ ಮರಣ ಪ್ರಮಾಣವನ್ನು 100ಕ್ಕೆ ತಗ್ಗಿಸುವ ಗುರಿ ಹೊಂದಿದೆ. ಆದರೆ, ಈಗಾಗಲೇ ನಮ್ಮ ರಾಜ್ಯದಲ್ಲಿ ತಾಯಿ ಮರಣ ಪ್ರಮಾಣ 97ಕ್ಕೆ ಇಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ತಾಯಿ ಮರಣ ಪ್ರಮಾಣವನ್ನು 70ಕ್ಕೆ ತರುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ಐದು ವರ್ಷದಲ್ಲಿ ಇಡೀ ರಾಜ್ಯದಲ್ಲಿ 125 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ನಿರ್ಮಿಸುವ ಮಹಾತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.
ದೇಶದಲ್ಲಿ ಜನಿಸುವ ಒಂದು ಸಾವಿರ ನವಜಾತ ಶಿಶುಗಳಲ್ಲಿ 35 ಮಕ್ಕಳು ಹಾಗೂ ರಾಜ್ಯದಲ್ಲಿ 24 ಮಕ್ಕಳು ಸಾವನ್ನಪ್ಪುತ್ತಿವೆ. ಹಾಗಾಗಿ ಈ ಪ್ರಮಾಣವನ್ನು 10ಕ್ಕೆ ತರುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ವೈದ್ಯರ ಕೊರತೆ ನೀಗಿಸಲು ವಿಶೇಷ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ತುಮಕೂರಿನಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದ್ದು, ಎರಡು ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಟ್ಟಡ ನಿರ್ಮಾಣಕ್ಕಾಗಿ ಬಿಡುಗಡೆಯಾಗಿರುವ 100 ಕೋಟಿ ಅನುದಾನದಲ್ಲಿ 36 ಕೋಟಿ ಅನುದಾನ ನಿರ್ಮಾಣ ಕಾರ್ಯಕ್ಕೆ ಹಾಗೂ ಉಳಿದ 64 ಕೋಟಿ ರೂ.ಗಳನ್ನು ಉಪಕರಣಗಳಿಗಾಗಿ ಬಳಸಲಾಗುವುದು ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕ್ಯಾನ್ಸರ್‌ ಮತ್ತು ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಉದಾರವಾಗಿ ಹಣ ಮಂಜೂರು ಮಾಡಿದ್ದಾರೆ. ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣವಾಗಲು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ. ರಾಮಚಂದ್ರ ಅವರು ಶ್ರಮಿಸಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಜಿಲ್ಲಾಸ್ಪತ್ರೆಗೆ ಒಂದು ಪಿಜಿ ಸೆಂಟರ್‌ ಹಾಗೂ ತಿಪಟೂರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು ಎಂದರಲ್ಲದೆ, ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಗಮನಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಎಪ್ಪತ್ತೈದು ವರ್ಷ ಪೂರೈಸಿರುವ ಜಿಲ್ಲಾಸ್ಪತ್ರೆ ಹಂತ ಹಂತವಾಗಿ ನಿರ್ಮಾಣವಾಗಿ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣವಾಗುವುದರಿಂದ ಕ್ಯಾನ್ಸರ್‌ ರೋಗಿಗಳಿಗೆ ಜಿಲ್ಲೆಯಲ್ಲಿಯೇ ಉತ್ತಮ ಚಿಕಿತ್ಸೆ ಸಿಗಲಿದೆ. ಇದರಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಅಲೆಯುವ ಅನಿವಾರ್ಯ ತಪ್ಪಲಿದೆ. ಅಂತೆಯೇ, ಪ್ರತ್ಯೇಕ ಮಕ್ಕಳ ಹಾಗೂ ತಾಯಿಯ ಆರೈಕೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಹಾಗೂ ಅಪೌಷ್ಟಿಕ ಪುನಶ್ಚೇತನ ಕೇಂದ್ರ ನಿರ್ಮಾಣವಾಗಲಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್‌, ಸಂಸದ ಜಿ.ಎಸ್‌.ಬಸವರಾಜು, ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ ಗೌಡ, ಶಾಸಕ ರಾಜೇಶ್‌ ಗೌಡ, ಮೇಯರ್‌ ಬಿ.ಜಿ.ಕೃಷ್ಣಪ್ಪ, ಐಜಿಪಿ ಚಂದ್ರಶೇಖರ್‌, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಜಿಲ್ಲಾಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿಗಳು ನಗರದ ಹೊಸ ಪ್ರವಾಸಿ ಮಂದಿರದ 495 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮೊದಲ ಅಂತಸ್ತು ಕಟ್ಟಡ ನಿರ್ಮಾಣ ಹಾಗೂ ಪೀಠೋಪಕರಣ ಅಳವಡಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ರಾಜ್ಯದಲ್ಲಿ 4 ಸಾವಿರ ವೈದ್ಯರ ನೇಮಕ
ಕಳೆದ 7 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 64 ವೈದ್ಯರು ಸೇರಿದಂತೆ ರಾಜ್ಯದಲ್ಲಿ 4 ಸಾವಿರ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇದರಿಂದ ಪ್ರತಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿಯೂ ವೈದ್ಯರು ಕಾರ್ಯನಿರ್ವಹಿಸುವಂತಾಗಿದೆ. ತುಮಕೂರು ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿ ಐದು ಜಿಲ್ಲೆಗೆ ಹೊಂದಿಕೊಂಡಿರುವ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಸಿದ್ಧಾರ್ಥ, ಶ್ರೀದೇವಿ ವೈದ್ಯಕೀಯ ಕಾಲೇಜುಗಳಿದ್ದು, ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಸ್ಥಾಪನೆಯ ಕಡತ ವಿಲೇವಾರಿ ಮಾಡಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಯಾವ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿರುತ್ತದೆಯೋ ಅಂತಹ ಜಿಲ್ಲೆಯಲ್ಲಿ ಉತ್ಕೃಷ್ಟ ಆರೋಗ್ಯ ಸೇವೆ ಸಿಗಲಿದೆ.
-ಡಾ.ಕೆ.ಸುಧಾಕರ್‌, ಆರೋಗ್ಯಸಚಿವ.

Get real time updates directly on you device, subscribe now.

Comments are closed.

error: Content is protected !!