ಕುಣಿಗಲ್: ಹಲವು ಗೊಂದಲ, ವಾಗ್ವಾದದ ನಡುವೆ ಪೊಲೀಸ್ ಬಂದೋಬಸ್ತ್ ನಲ್ಲಿ ಬಿಳೇದೇವಾಲಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಶನಿವಾರ ನಡೆಯಿತು.
ಕಸಬಾ ಹೋಬಳಿಯ ಬಿಳೆದೇವಾಲಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಮೇಲ್ನೋಟಕ್ಕೆ ಸಹಕಾರ ಸಂಘದ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷ ಇಲ್ಲದೆ ಹೋದರೂ ಆಯ್ಕೆಯಾದ ನಿರ್ದೇಶಕರು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಕಾರಣ ಬಿಜೆಪಿ, ಜೆಡಿಎಸ್ ಗೆ ಪ್ರತಿಷ್ಠೆ ವಿಷಯವಾಗಿತ್ತು. 12 ಮಂದಿ ನಿರ್ದೇಶಕರ ಪೈಕಿ ಬಿಜೆಪಿ ಜೊತೆ ಗುರುತಿಸಿಕೊಂಡ ಆರು, ಜೆಡಿಎಸ್ ಜೊತೆ ಗುರುತಿಸಿಕೊಂಡ ನಾಲ್ವರು, ಕಾಂಗ್ರೆಸ್ ಜೊತೆ ಗುರುತಿಸಿಕೊಂಡ ಇಬ್ಬರು ಇದ್ದರು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು, ಬಿಜೆಪಿ ಮಣಿಸಲು ಯತ್ನಿಸಿದ್ದರ ಪರಿಣಾಮ ಎರಡು ಕಡೆ ಸಮಬಲ ಏರ್ಪಟ್ಟಿತು, ಈ ಮಧ್ಯೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಒಬ್ಬರನ್ನು ತಮ್ಮತ್ತ ಸೆಳೆದುಕೊಂಡ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದ ಅಧಿಕಾರ ಗದ್ದುಗೆ ಹಿಡಿಯಲು ಮುಂದಾಯಿತು.
ಶನಿವಾರ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಸಹಕಾರ ವಿಸ್ತರಣೆ ಅಧಿಕಾರಿ ಲತಾ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಿಜೆಪಿ ಬೆಂಬಲಿತರು ಅಧ್ಯಕ್ಷ ಸ್ಥಾನದ ನಾಮಪತ್ರ ಅಪೂರ್ಣ ಸಲ್ಲಿಸಿದ್ದರಿಂದ ಇದನ್ನು ಚುನವಣಾಧಿಕಾರಿ ಪ್ರಶ್ನಿಸಿದರು. ಸದಸ್ಯರೊಬ್ಬರು ನಾಮಪತ್ರ, ಠರಾವು ಪುಸ್ತಕ ಹರಿಯಲು ಯತ್ನಿಸಿದ್ದರಿಂದ ಎರಡೂ ಕಡೆಯವರಿಗೂ ವಾಗ್ವಾದ ನಡೆದು, ಕೈ ಕೈಮಿಲಾಯಿಸುವ ಸ್ಥಿತಿ ಉಂಟಾಗಿ ಸಭೆ ಗೊಂದಲ ಗೂಡಾಯಿತು. ಪೊಲೀಸರು ಸಭಾಂಗಣದೊಳಗೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಧ್ಯಕ್ಷ ಸ್ಥಾನಕ್ಕೆ ರಾಮಚಂದ್ರಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜು ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು. ಬಿಜೆಪಿ ಬೆಂಬಲಿತರು ಅಧ್ಯಕ್ಷ ಸ್ಥಾನಕ್ಕೆ ಕಾಳಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಮಯ್ಯ ಎಂಬುವರು ಅರ್ಜಿ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನದ ನಾಮಪತ್ರಲ್ಲಿ ಸದಸ್ಯತ್ವ ಕ್ರಮ ಸಂಖ್ಯೆ ಸರಿಯಾಗಿ ನಮೂದು ಮಾಡದ ಕಾರಣ ಉಪಾಧ್ಯಕ್ಷ ಸ್ಥಾನದ ನಾಮಪತ್ರದಲ್ಲಿ ಸೂಚಕರು ಸಹಿ ಹಾಕದ ಕಾರಣ ಅರ್ಜಿ ತಿರಸ್ಕಾರಗೊಂಡಿದ್ದು ಪ್ರತಿಸ್ಪರ್ಧಿ ಬಣದವರು ಹಾಕಿದ್ದ ಅರ್ಜಿ ಮಾನ್ಯಗೊಂಡು ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು. ಸಂಘದ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.
ಚುನಾವಣೆ ಪ್ರಕ್ರಿಯೆಯನ್ನು ಖಂಡಿಸಿ ಬಿಜೆಪಿ ಬೆಂಬಲಿತ ನಿರ್ದೇಶಕ ಅನಂದಸ್ವಾಮಿ, ಚುನಾವಣೆ ಪ್ರಕ್ರಿಯೆ ನಿಯಮಾನುಸಾರ 11ಗಂಟೆಗೆ ಅರಂಭವಾಗಬೇಕಿದ್ದು ಸರಿಯಾದ ಸಮಯಕ್ಕೆ ನಡೆದಿಲ್ಲ. 12ಗಂಟೆಗೆ ಅರಂಭವಾಗಿದೆ ಇದು ಅಸಿಂದು ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಚುನಾವಣಾಧಿಕಾರಿ ತಾವು ತುಮಕೂರಿನಿಂದ ಬಸ್ಸಿನಲ್ಲಿ ಅಗಮಿಸಿದ್ದು ನಿಯಮಾನುಸಾರ ಸಮಯದೊಳಗೆ ನಾಮಪತ್ರ ಸ್ವೀಕರಿಸಿ ಚುನಾವಣೆ ನಡೆಸಿದ್ದು ಯಾವುದೇ ಲೋಪವಾಗಿಲ್ಲ ಎಂದಿದ್ದಾರೆ.
Get real time updates directly on you device, subscribe now.
Next Post
Comments are closed.