ಕುಣಿಗಲ್ ನಲ್ಲಿ ಭಾರತ್‌ ಬಂದ್‌ ಭಾಗಶಃ ಯಶಸ್ವಿ- ರೈತ ವಿರೋಧಿ ಕಾಯ್ದೆ ವಾಪಸ್ ಗೆ ಆಗ್ರಹ

ಮೋದಿ ಅಣಕು ಶವಯಾತ್ರೆ ಮಾಡಿ ರೈತರ ಆಕ್ರೋಶ

491

Get real time updates directly on you device, subscribe now.

ಕುಣಿಗಲ್‌: ಅಖಿಲ ಭಾರತದ ರೈತಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಕರೆ ನೀಡಲಾಗಿದ್ದ ಭಾರತ್ ಬಂದ್‌ ಅಂಗವಾಗಿ ಕುಣಿಗಲ್‌ ಬಂದ್‌ ಭಾಗಶಃ ಯಶಸ್ವಿಯಾಯಿತು.
ಸೋಮವಾರ ಬೆಳಗ್ಗೆಯೆ ರೈತ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್‌ ನೇತೃತ್ವದಲ್ಲಿ ಬೈಕ್‌ ಜಾಥ ನಡೆಸಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕೆಲ ವರ್ತಕರು ಸಹಕರಿಸಿ ಸ್ವಯಂ ಪ್ರೇರಣೆಯಿಂದ ಬಂದ್‌ ಮಾಡಿದರು. ಸರ್ಕಾರಿ, ಖಾಸಗಿ ಬಸ್‌, ಆಟೋ ಸಂಚಾರ, ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು, ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಬಳಿ ರೈತ ಸಂಘದ ನೇತೃತ್ವದಲ್ಲಿ ಸಂಘಟಿತರಾದ ವಿವಿಧ ಸಂಘಟನೆಯ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಪ್ರಧಾನ ಮಂತ್ರಿ, ಕೇಂದ್ರ ಕೃಷಿ ಸಚಿವರ ಅಣುಕು ಶವಯಾತ್ರೆ ಕೂಳು ಮಡಿಕೆಯೊಂದಿಗೆ ಹುಚ್ಚಮಾಸ್ತಿಗೌಡ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಸಿದರು. ಸಿಪಿಐಗಳಾದ ರಾಜು, ಗುರುಪ್ರಸಾದ್‌ ಸಿಬ್ಬಂದಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಗುಲ್ಜಾರ್‌ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ದಬ್ಬಾಳಿಕೆ ಸರ್ಕಾರ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಇಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಗೆ ಮಾಡುವ ಮೂಲಕ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಿದೆ. ಬರೀ ಭರವಸೆಗಳಲ್ಲೆ ಜನರನ್ನು ತಪ್ಪು ದಾರಿಗೆ ಎಳೆದು ಇಂದು ದೇಶದ ಜನರು ಪರದಾಡುವಂತಾಗಿದ್ದಾರೆ. ಸೇವೆ ನೀಡುವ ಸಂಸ್ಥೆಗಳನ್ನು ಸಹ ಬಂಡವಾಳಶಾಹಿಗಳಿಗೆ ವಹಿಸಿ ಸೇವಾ ಸಂಸ್ಥೆಗಳಲ್ಲಿರುವ ಲಕ್ಷಾಂತರ ಮಂದಿಯನ್ನು ಬೀದಿ ಪಾಲು ಮಾಡಲು ಹುನ್ನಾರ ನಡೆಸಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸರಿಯಾದ ಭತ್ಯೆ ನೀಡದೆ ಜೀತದಾಳುಗಳಂತೆ ದುಡಿಸಿಕೊಂಡು ಶೋಷಣೆ ಮಾಡುತ್ತಿದ್ದಾರೆ. ರೈತರು, ಕಾರ್ಮಿಕರು, ಜನಸಾಮಾನ್ಯರ ವಿರೋಧಿಯಾದ ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳ ಪರವಾದ ಸರ್ಕಾರ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್‌ ಮಾತನಾಡಿ, ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವವ್ಯವಸ್ಥೆಯನ್ನು ಬುಡಮೇಲು ಮಾಡಿ, ರೈತರೊಂದಿಗೆ ಚರ್ಚಿಸದೆ ಕೆಲವೆ ಮಂದಿ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಸುಗ್ರೀವಾಜ್ಞೆ ಮೂಲಕ ರೈತವಿರೋಧಿ, ಕಾರ್ಮಿಕ ವಿರೋಧಿ ಕಾಯಿದೆ ಜಾರಿಗೆ ತಂದಿದೆ. ಈ ಕಾಯಿದೆಗಳು ರೈತರನ್ನು ಕೃಷಿಯಿಂದೆ ಒಕ್ಕಲೆಬ್ಬಿಸಿ ಕೃಷಿಯನ್ನು ಬಂಡವಾಳಶಾಹಿಗಳ ನಿಯಂತ್ರಣಕ್ಕೆ ಒಳಪಡಿಸಲು ಎಲ್ಲಾ ಶಕ್ತಿ ನೀಡುತ್ತದೆ. ರೈತರು, ಕಾರ್ಮಿಕರು, ಸಾಮಾನ್ಯ ಜನರನ್ನು ಬೀದಿಗೆ ತಂದಿದ್ದೆ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ, ಕಾಂಗ್ರೆಸ್‌, ಜೆಡಿಎಸ್‌ ಎರಡೂ ಪಕ್ಷಗಳು ಆಡಳಿತ ಪಕ್ಷಗಳ ಪರವಾಗಿದ್ದು ದೇಶದ ಜನರನ್ನು, ರೈತರನ್ನು, ಕಾರ್ಮಿಕರನ್ನು ಅತಂತ್ರರನ್ನಾಗಿಸಲು ಸಹಕಾರ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕ್ರಮಗಳು ಸಾಮಾನ್ಯ ಜನರನ್ನೂ ಸಹ ಬಹುರೂಪವಾಗಿ ಕಾಡಲಿದ್ದು, ಈಗಲೇ ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜನತೆ ಕಷ್ಟಕ್ಕೆ ಸಿಲುಕುವ ದಿನಗಳು ದೂರ ಇಲ್ಲ, ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸರ್ಕಲ್ ನಲ್ಲಿ ಪ್ರಧಾನಿ, ಕೇಂದ್ರ ಕೃಷಿ ಸಚಿವರ ಅಣುಕು ಶವಗಳಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತರ ಸಂಘ, ಕೆಆರ್‌ಎಸ್‌ ಪಕ್ಷ, ಕಟ್ಟಡ ಕಾರ್ಮಿಕರ ಸಂಘ, ದಲಿತ ಹಕ್ಕುಗಳ ಹೋರಾಟ ಸಮಿತಿ, ಸಿಐಟಿಯು, ಕಾಡುಗೊಲ್ಲರ ಅಸ್ಮಿತೆ ಸಮಿತಿ, ಕರ್ನಾಟಕ ರೈತ ಸೇನೆ, ವಕೀಲ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ರಸ್ತೆ ತಡೆ ಪ್ರತಿಭಟನೆ ವೇಳೆ ಬಂದ ಆ್ಯಂಬುಲೆನ್ಸ್ ಗೆ ಪ್ರತಿಭಟನಾಕಾರರೆ ಸ್ವಯಂ ಪ್ರೇರಿತರಾಗಿ ರಸ್ತೆಬಿಟ್ಟು ಕೊಟ್ಟು ನಂತರ ಪ್ರತಿಭಟನೆ ಮುಂದುವರೆಸಿದರು.

Get real time updates directly on you device, subscribe now.

Comments are closed.

error: Content is protected !!