ಕುಣಿಗಲ್: ಕೈಗಾರಿಕೆ ತ್ಯಾಜ್ಯದಿಂದ ಹತ್ತಾರು ಹಳ್ಳಿಗಳ ಬೋರ್ ವೆಲ್ ಜಲಪೂರಣಕ್ಕೆ ಸಹಕಾರಿಯಾಗಿದ್ದ ಕೆರೆ ನೀರು ಕಪ್ಪುಬಣ್ಣಕ್ಕೆ ತಿರುಗಿ, ಕೆಟ್ಟವಾಸನೆ ಬೀರುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಜಲಮಾಲಿನ್ಯ ತಡೆಗಟ್ಟುವಂತೆ ಗೊಟ್ಟಿಕೆರೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗೊಟ್ಟಿಕೆರೆ, ಮುದಿಗೆರೆ, ಚನ್ನತಿಮ್ಮನಪಾಳ್ಯ, ಅಂಚೆಪಾಳ್ಯ ಸೇರಿದಂತೆ ಇತರೆ ನಾಲ್ಕಾರು ಗ್ರಾಮಗಳ ವ್ಯಾಪ್ತಿಯ ಬೋರ್ ವೆಲ್ ಸೇರಿದಂತೆ ಗೊಟ್ಟಿಕೆರೆ ಗ್ರಾಮಕ್ಕೆ ಪ್ರಮುಖ ನೀರು ಪೂರೈಕೆಗೆ ಗೊಟ್ಟಿಕೆರೆ ಗ್ರಾಮದಲ್ಲಿ 13.04 ಎಕರೆ ಪ್ರದೇಶದ ಗೊಟ್ಟಿಕೆರೆ ಕೆರೆ ಆಶ್ರಯವಾಗಿದೆ. ಆದರೆ ಗೊಟ್ಟಿಕೆರೆಗೆ ಹೊಂದಿಕೊಂಡಂತೆ ಅಂಚೇಪಾಳ್ಯ ಕೈಗಾರಿಕಾ ವಸಾಹತು ಎರಡನೇ ಹಂತ ವಿಸ್ತರಣೆ ಯಾಗಿದೆ, ಸದರಿ ಕೈಗಾರಿಕೆ ಪ್ರದೇಶ ವಿಸ್ತರಣೆ ಸಮಯದಲ್ಲಿ ಸರಿಯಾಗಿ ಮಳೆನೀರು ಹರಿಯಲು ಕಾಲುವೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕೈಗಾರಿಕೆ ಪ್ರದೇಶದಲ್ಲಿ ಬಿದ್ದ ನೀರು ಎಲ್ಲೆಂದರಲ್ಲಿ ಹರಿದು ರೈತರ ಜಮೀನಿನ ಬೆಳೆನಾಶ ಮಾಡುತ್ತಿದೆ.
ಕೆಲ ಕಾರ್ಖಾನೆಗಳು ಮಳೆ ಬಂದಾಗ ಕಾರ್ಖಾನೆಯ ದ್ರವತ್ಯಾಜ್ಯ ಶುದ್ಧೀಕರಿಸದೆ ಮಳೆ ನೀರ ಜೊತೆ ಹೊರಬಿಡುವ ಕಾರಣ, ಕೈಗಾರಿಕೆ ತ್ಯಾಜ್ಯ ಕೆರೆಗೆ ಹರಿದು ಕೆರೆ ನೀರು ಕಪ್ಪಾದರೆ, ಅಕ್ಕಪಕ್ಕದ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಕೆರೆಯಲ್ಲಿ ಅಂತರಗಂಗೆ ಕಳೆ ಬೆಳೆದು ಹಸಿರಾಗಿದ್ದು ಶನಿವಾರ ರಾತ್ರಿ ಕೈಗಾರಿಕೆ ತ್ಯಾಜ್ಯ ಕೆರೆಗೆ ಹರಿದಪರಿಣಾಮ ಇದೀಗ ಅಂತರಗಂಗೆ ಕಳೆ ಕೊಳೆತು ನೀರು ಕಪ್ಪಾಗಿ ಕೆಟ್ಟವಾಸನೆ ಬೀರುತ್ತಿದೆ. ಸ್ಥಳೀಯ ಬೇಗೂರು ಗ್ರಾಮ ಪಂಚಾಯಿತಿಯವರಿಗೆ ನಾಲ್ಕು ಮನವಿ ನೀಡಿದ್ದರೂ ಇನ್ನು ಗಮನ ಹರಿಸಿಲ್ಲದ ಕಾರಣ ಕೆರೆಯ ರಸಾಯಿನಿಕ ಯುಕ್ತವಾಗಿ ಹತ್ತಾರು ಗ್ರಾಮಗಳ ಅಂತರ್ಜಲ ವಿಷಯುಕ್ತವಾಗುವ ಅಪಾಯ ಎದುರಾಗಿದೆ. ಪರಿಸರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಇದುವರೆಗೂ ಭೇಟಿ ನೀಡಿ ಪರಿಶೀಲಿಸಿ ಜಲಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆಯ ಮತ್ತೊಂದು ಬದಿಯ ರಾಜಕಾಲುವೆ ನೂರಾರು ಅಡಿ ಇದ್ದು ಅಕ್ಕಪಕ್ಕದ ಜಮೀನಿವರು ಒತ್ತುವರಿ ಮಾಡಿ ಕೆಲವೆ ಅಡಿ ಬಿಟ್ಟ ಪರಿಣಾಮ ಬೇರೊಂದು ಸಮಸ್ಯೆ ಸೃಷಿಯಾಗಿದೆ. ತಾಲೂಕು ಆಡಳಿತ ಕೂಡಲೆ ಅಗತ್ಯ ಕ್ರಮ ಕೈಗೊಂಡು ಕೆರೆ, ಕೆರೆಯಲ್ಲಿನ ಜಲ ಸಂರಕ್ಷಣೆಗೆ ಮುಂದಾಗಬೇಕೆಂದು ಗೊಟ್ಟಿಕೆರೆ ಗ್ರಾಮಸ್ಥರಾದ ಚಂದ್ರು, ಮಹೇಶ, ಧನಂಜಯ, ಶ್ರೀನಿವಾಸ ಇತರರು ಒತ್ತಾಯಿಸಿದ್ದಾರೆ.
Get real time updates directly on you device, subscribe now.
Prev Post
Comments are closed.