ಪ್ರವಾಸಿ ತಾಣಗಳನ್ನು ಗುರ್ತಿಸಿ ಅಭಿವೃದ್ಧಿ ಮಾಡಿ: ಸಚಿವ

141

Get real time updates directly on you device, subscribe now.

ತುಮಕೂರು: ಗಣಿಗಾರಿಕೆಯಿಂದ ನಲುಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಮದಲಿಂಗನ ಕಣಿವೆ ಇಂದು ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿರುವ ಇಂತಹ ಪ್ರವಾಸಿತಾಣಗಳನ್ನು ಗುರುತಿಸಿ ಅವುಗಳನ್ನೆಲ್ಲಾ ಪ್ರವಾಸೋದ್ಯಮ ವ್ಯಾಪ್ತಿಗೆ ತರಬೇಕು ಎಂಬ ಆಶಯವನ್ನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿಂದು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊಸಹಳ್ಳಿಯ ಮದಲಿಂಗನ ಕಣಿವೆಯ ತಿನಂಶ್ರೀ. ಸಸ್ಯಕ್ಷೇತ್ರದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಕ್ಕನಾಯಕನಹಳ್ಳಿ ಬಹಳ ಸುಂದರವಾದ ಪ್ರದೇಶ, ಮದಲಿಂಗನ ಕಣಿವೆಯಂತಹ ಅನೇಕ ತಾಣಗಳನ್ನು ಒಳಗೊಂಡಿದೆ. ಇಲ್ಲಿ ತೀರ್ಥರಾಮೇಶ್ವರ, ಮದಲಿಂಗನ ಬೆಟ್ಟದಂತಹ ಅನೇಕ ಪ್ರವಾಸಿತಾಣಗಳಾಗಹುದಾದ ಅದರದ್ದೇ ಆದ ಇತಿಹಾಸ ಹೊಂದಿರುವಂತಹ ಬೆಟ್ಟಗುಡ್ಡಗಳಿವೆ ಎಂದರು.
ದುರಾದೃಷ್ಟವಶಾತ್‌ ಇಂತಹ ನಿಸರ್ಗದತ್ತ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವಾಗಬೇಕಿತ್ತು. ಆದರೆ ಈ ಸುಂದರ ಪ್ರದೇಶಗಳು ಗಣಿಗಾರಿಕೆಗೆ ಸ್ವರ್ಗವಾದವೇ ಹೊರತು ಪ್ರವಾಸೋದ್ಯಮಕ್ಕೆ ಸ್ವರ್ಗವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಸಿರುತನದಿಂದ ಕೂಡಿದ್ದ ಈ ಪ್ರದೇಶಗಳಲ್ಲಿ ಅತೀ ಹೆಚ್ಚಾಗಿ ಗಣಿ ನಿಕ್ಷೇಪಗಳನ್ನು ತೆಗೆದ ಪರಿಣಾಮ ಬೆಟ್ಟಗುಡ್ಡಗಳು ನಾಶದ ಹಾದಿ ಹಿಡಿದು ಹಸಿರಿದ್ದ ಗುಡ್ಡಗಳು ಬಹುಬಣ್ಣಗಳಾದವು. ಹಸಿರು ಸಿರಿಗೆ ಕೆಂಪು ಬಣ್ಣ ಮಿಶ್ರಣವಾಗಿ ಪ್ರಕೃತಿಯ ರಸದೌತಣದ ಸವಿಯೇ ಇಲ್ಲದಂತಾಗಿ, ಚಿಕ್ಕನಾಯಕನಹಳ್ಳಿಯವರೆಗೆ ಸುವಾಸನೆ ತರುತ್ತಿದ್ದ ಮದಲಿಂಗನ ಕಣಿವೆ ಪ್ರದೇಶಗಳ ಜಾತಿಯ ಜಾಲಿಗಿರಿ ಮರಗಳು ಕಣ್ಮರೆಯಾಗಿದೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಸ್ವಲ್ಪ ಹಸಿರು ಕಾಣುತ್ತಿದೆ. ಪ್ರವಾಸಿ ತಾಣವಾಗಿ ಆಕರ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಗಣಿಗಾರಿಕೆ, ಕಾಡುಕಳ್ಳರು ಮತ್ತು ಮರಗಳನ್ನು ಕಡಿದು ಸೌದೆ ಮಾರುವವರ ಸ್ವರ್ಗವಾಗಿ ಸರ್ವನಾಶದ ಅಂಚಿಗೆ ಬಂದಿದ್ದ ತಾಲೂಕಿನ ಮದಲಿಂಗನ ಕಣಿವೆ ಭಾಗದ ಸುತ್ತಮುತ್ತಲಿನ ಪ್ರದೇಶವನ್ನು ಉಳಿಸಬೇಕೆಂಬ ಮುತುವರ್ಜಿ ವಹಿಸಿದ್ದ ಪರಿಣಾಮ ಸ್ವಲ್ಪಮಟ್ಟಿಗೆ ಪುನಶ್ಚೇತನವಾಗಿದೆ. ಹಸಿರು ತುಂಬಿಕೊಂಡು ಕಣ್ಣು ಮನಸ್ಸಿಗೆ ತಂಪನೆರೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮದಲಿಂಗನ ಕಣಿವೆಯಿಂದ ಅನತಿ ದೂರದಲ್ಲೇ ತೀನಂಶ್ರೀ ಕಂಠಯ್ಯ ಅವರ ಸ್ವಗ್ರಾಮವಿರುವ ಕಾರಣ ಮದಲಿಂಗನ ಕಣಿವೆಯ ಸಸ್ಯೋದ್ಯಾನಕ್ಕೆ ತೀನಂಶ್ರೀ ಅವರ ಹೆಸರನ್ನು ಇಡಲಾಗಿದೆ. ಬಹುದೊಡ್ಡ ವಿದ್ವಾಂಸರಾದ ಅವರ ಹೆಸರನ್ನು ಈ ಭಾಗದಿಂದ ಸಾಗುವಾಗ ಸ್ಮರಣೆ ಮಾಡಲಿ ಎಂಬ ಉದ್ದೇಶದಿಂದಲೂ ಈ ಸಸ್ಯಕಾಶಿಗೆ ಅವರ ನಾಮಧೇಯವನ್ನಿಡಲಾಗಿದೆ ಎಂದರು.
ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರು ತಮ್ಮ ಕೃತಿಯಲ್ಲಿ ಮದಲಿಂಗನ ಕಣಿವೆಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಶಾಲೆಗಳಲ್ಲಿ ಮದಲಿಂಗನಕಣಿವೆ ಬಗ್ಗೆ ಪಠ್ಯವಿತ್ತು. ಅದನ್ನು ನಾವೆಲ್ಲಾ ಓದಿದ್ದೇವೆ. ಮಾಸ್ತಿವೆಂಕಟೇಶ್‌ ಅವರು ಕಣಿವೆಯ ಸೌಂದರ್ಯವನ್ನು ಕಣಿವೆಯ ಸೌಂದರ್ಯಕ್ಕಿಂತಲೂ ರಮಣೀಯವಾಗಿ ತಮ್ಮ ಕೃತಿಯಲ್ಲಿ ವರ್ಣಿಸಿದ್ದಾರೆ ಎಂದು ಮದಲಿಂಗನ ಕಣಿವೆ ಕುರಿತ ಇತಿಹಾಸವನ್ನು ಸಚಿವರು ಸವಿವರವಾಗಿ ವರ್ಣಿಸಿದರು.
ಪ್ರಕೃತಿ ಮಾತೆಗಿಂತ ದೊಡ್ಡ ವಿನ್ಯಾಸಕಾರರು ಯಾರೂ ಇಲ್ಲ. ವೈವಿಧ್ಯಮಯ ಬಣ್ಣಗಳನ್ನು ನಿರ್ಧರಿಸಿ ಮನಸ್ಸಿಗೆ ಮುದ ನೀಡುವ ಪ್ರಕೃತಿ ಸೌಂದರ್ಯದ ಮುಂದೆ ಮತ್ತೊಬ್ಬ ಕಲಾವಿದನಿಲ್ಲ. ಪ್ರಕೃತಿದತ್ತವಾದ ಪರಿಸರವನ್ನು ಮನಸಿದ್ದವರು ಮಾತ್ರ ಅನುಭವಿಸಲು ಸಾಧ್ಯ. ಪರಿಸರದ ರಮಣೀಯ ಸೊಬಗನ್ನು ಸವಿಯಲು ಮನಸ್ಸಿರಬೇಕು. ಅಂತಹ ಪ್ರವಾಸಿತಾಣಗಳು ಮತ್ತಷ್ಟು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಪ್ರವಾಸಿ ತಾಣಗಳನ್ನು ಮಕ್ಕಳಿಗೆ ಪರಿಚಯಿಸುವ ಜೊತೆಗೆ ಅಲ್ಲಿರುವ ಗಿಡ, ಮರಗಳ ಬಗ್ಗೆಯೂ ಅರಿವು ಮೂಡಿಸಬೇಕು ಇದರಿಂದ ವಿಜ್ಞಾನವೂ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮದಲಿಂಗನ ಕಣಿವೆ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸಬೇಕು ಎಂದರು.
ಜಿಲ್ಲೆಯ ರಮಣೀಯ ತಾಣಗಳನ್ನು ಪರಿಚಯಿಸಿ ಪರಿಸರ ಪ್ರೇಮಿಗಳ ಸಂಚಾರ ಮತ್ತು ಅಧ್ಯಯನಕ್ಕೆ ಅನುವು ಮಾಡಿಕೊಡಬೇಕು. ತುಮಕೂರು ಸುತ್ತಲಿನ ಪ್ರದೇಶಗಳ ಜಿಲ್ಲೆಯ ಎಲ್ಲಾ ಭಾಗಗಳಿಗೂ ಪ್ರಾಶಸ್ತ್ಯ ನೀಡಿ ಪ್ರವಾಸಿತಾಣಗಳ ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ತರಲು ಆದ್ಯತೆ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮಾತನಾಡಿ, ಇಂದಿನ ಯುವಪೀಳಿಗೆಯಲ್ಲಿ ದೈಹಿಕ ಚಟುವಟಿಕೆಗಳೇ ಕಡಿಮೆಯಾಗಿದ್ದು, ಆಧುನಿಕತೆಯ ಸೋಗಿನಲ್ಲಿ ಜೀವನ ಶೈಲಿಯೂ ಬದಲಾಗಿದೆ. ಪ್ರಕೃತಿದತ್ತವಾಗಿ ಕಾಣಸಿಗುವ ಎಲ್ಲ ಬಗೆಯ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುವಂತಹ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರ್ಕಾರ ಕೈಗೊಳ್ಳುವ ವಿವಿಧ ಬಗೆಯ ಕಾರ್ಯಕ್ರಮಗಳ ಸದುಪಯೋಗ ಪಡೆದು ಮತ್ತಷ್ಟು ಅಭಿವೃದ್ಧಿಗೊಳಿಸುವಲ್ಲಿ ಯುವಜನತೆ ಕೈಜೋಡಿಸಬೇಕು ಎಂದರು.
ಕೇರಳದಂತಹ ನೆರೆ ರಾಜ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ಸಿಗುತ್ತಿರುವ ಮನ್ನಣೆ ಹಾಗೂ ಪ್ರಾಮುಖ್ಯತೆ ನಮ್ಮ ರಾಜ್ಯದಲ್ಲಿಯೂ ಸಿಗಬೇಕು. ಅದರಲ್ಲಿಯೂ ತುಮಕೂರು ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳು ಪ್ರವಾಸಕ್ಕೆ ಯೋಗ್ಯವಾಗಿದ್ದು ಈ ಕುರಿತ ಮಾಹಿತಿಗಳು ಮತ್ತಷ್ಟು ಪ್ರಚಾರವಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಥೈಲ್ಯಾಂಡ್‌, ಸಿಂಗಾಪುರ ಸೇರಿದಂತೆ ವಿವಿಧ ದೇಶಗಳು ಪ್ರವಾಸೋದ್ಯಮ ಕ್ಷೇತ್ರದಿಂದ ಅತಿ ಹೆಚ್ಚು ಆದಾಯ ಗಳಿಸುತ್ತಿವೆ. ಅದೇ ರೀತಿ ನಮ್ಮ ನಾಡಿನಲ್ಲಿಯೂ ಇರುವ ಸುಂದರ ತಾಣಗಳನ್ನು ಗುರುತಿಸಿ ಅಭಿವೃದ್ಧಿಗೊಳಿಸುವ ಕಾರ್ಯಗಳಾಗಬೇಕಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರವಾಸೋದ್ಯಮದಿಂದ ಬಹಳ ಮಂದಿಗೆ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಯುವಕರು ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಡಿವೈಎಸ್‌ಪಿ ಚಂದನ್‌, ತಹಸೀಲ್ದಾರ್‌ ತೇಜಸ್ವಿನಿ, ತಿಪಟೂರು ಉಪವಿಭಾಗಾಧಿಕಾರಿ ದಿಗ್ವಿಜಯ್‌ ಸಿಂಗ್‌, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಗೌರಿ ವಿ.ಭಟ್ಟ, ಹೊನ್ನೆಬಾಗಿ ಗ್ರಾಪಂನ ಉಪಾಧ್ಯಕ್ಷೆ ಪಾರ್ವತಮ್ಮ ಹಾಗೂ ಸದಸ್ಯೆ ಭಾರತಿ ಇದ್ದರು.

Get real time updates directly on you device, subscribe now.

Comments are closed.

error: Content is protected !!