ವಿಕಲಚೇತನರಿಗೆ ವ್ಹೀಲ್‌ ಚೇರ್‌ ವಿತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ

ವಿಶೇಷ ಚೇತನರು ಆತ್ಮವಿಶ್ವಾಸದಿಂದ ಬದುಕಲಿ

341

Get real time updates directly on you device, subscribe now.

ತುಮಕೂರು: ವಿಶೇಷ ಚೇತನರಿಗೆ ಆತ್ಮವಿಶ್ವಾಸದಿಂದ ಬದಕಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಸರ್ಕಾರ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆ, ಸೌಲಭ್ಯಗಳನ್ನು ನೀಡಿದೆ. ಅಧಿಕಾರಿಗಳು ಅದನ್ನು ಅವರಿಗೆ ಸರಿಯಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರಕ್ಕೆ ಸಮೀಪದ ದೇವರಾಯಪಟ್ಟಣ ಗ್ರಾಮ ಬೆಳಗುಂಬ ರಸ್ತೆಯಲ್ಲಿರುವ ದ ಸ್ಟಾಂಡರ್ಡ್ ಬ್ರಿಕ್‌ ಅಂಡ್‌ ಟೈಲ್‌ ಕಂಪನಿ ಆವರಣದಲ್ಲಿ ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್, ದ ಸ್ಟಾಂಡರ್ಡ್ ಬ್ರಿಕ್‌ ಅಂಡ್‌ ಟೈಲ್‌ ಕಂಪನಿ ಹಾಗೂ ಎಂಎಎಫ್‌ ಕ್ಲೋಥಿಂಗ್‌ ಪ್ರೈ.ಲಿಮಿಟೆಡ್‌ನ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಯ 50 ಮಂದಿ ವಿಕಲಚೇತನ ಫಲಾನುಭವಿಗಳಿಗೆ ವ್ಹೀಲ್‌ ಚೇರ್‌ ವಿತರಿಸಿ ಮಾತನಾಡಿದ ಅವರು, ಪೌಷ್ಠಿಕಾಂಶ ಆಹಾರದ ಕೊರತೆಯಿಂದ ಮಕ್ಕಳು ಇಂದು ಅಂಗವೈಕಲ್ಯತೆಗೆ ಒಳಗಾಗುತ್ತಿದ್ದು, ಒಳ್ಳೆಯ ಪೌಷ್ಠಿಕ ಆಹಾರವನ್ನು ಕೊಡುವ ಕಾರ್ಯವನ್ನು ರೋಟರಿ ಕ್ಲಬ್‌ನವರು ಮಾಡಬೇಕಾಗುತ್ತದೆ ಎಂದರು.
ತುಮಕೂರು ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪೌಷ್ಠಿಕ ಆಹಾರದ ಕೊರತೆಯಿಂದ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಇದರಿಂದ ಯಾವಾಗ ಬೇಕಾದರೂ ಕೋವಿಡ್‌ ಸೋಂಕು ತಗುಲಬಹುದು. ಇಂತಹ ಮಕ್ಕಳಿಗೆ ನಾವು ಆದಷ್ಟು ಕಾಳಜಿ ವಹಿಸಿ ಆರೋಗ್ಯವನ್ನು ಕಾಪಾಡುತ್ತಿದ್ದು, ಇಂತಹ ಮಕ್ಕಳಿಗೆ ನ್ಯೂಟ್ರಿಷಿಯನ್‌ ಆಹಾರ ನೀಡಿದರೆ ಭೌತಿಕವಾಗಿ ಉತ್ತಮವಾಗಿ ಬೆಳೆಯುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಾವು ನಮ್ಮ ದೇಶದಲ್ಲಿ ಪೊಲಿಯೋ ಮುಕ್ತ ದೇಶವನ್ನು ಮಾಡಿದ್ದೇವೆ ಎಂದರೆ ಅದಕ್ಕೆ ರೋಟರಿ ಕ್ಲಬ್‌ ನೀಡಿರುವ ಉತ್ತಮ ಸಹಕಾರವೇ ಕಾರಣ ಇದನ್ನು ನಾವು ಯಾರೂ ಮರೆಯುವಂತಿಲ್ಲ ಎಂದು ಹೇಳಿದರು.
ಬೆಂಗಳೂರಿನ ರೋಟರಿ ಕ್ಲಬ್ ನವರು ತುಮಕೂರು ಜಿಲ್ಲೆಯಲ್ಲಿರುವ 216 ವಿಕಲಚೇತನ ಮಕ್ಕಳಿಗೆ ವ್ಹೀಲ್‌ ಚೇರ್‌ ನೀಡುವ ಗುರಿಯನ್ನಿಟ್ಟುಕೊಂಡಿರುವುದು ಉತ್ತಮವಾದ ಕೆಲಸ, ಇಂತಹ ಕೆಲಸಗಳು ಸಮಾಜದಲ್ಲಿ ಅತಿ ಹೆಚ್ಚು ನಡೆಯಬೇಕು ಎಂದರು.
ಅಂತರ್ಜಲ ಮತ್ತು ಮೇಲ್ಮೈ ನೀರು ಉಳಿಸಿ, ಕೆರೆ ಕಟ್ಟೆಗಳನ್ನು ಸಮೃದ್ಧಿಯಾಗಿಸುವ ವಾತಾವರಣವನ್ನು ರೋಟರಿ ಕ್ಲಬ್ ನವರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ವಿಕಲಚೇತನರಲ್ಲಿರುವ ವಿಶಿಷ್ಟ ಶಕ್ತಿಯನ್ನು ಸಂಘಸಂಸ್ಥೆಗಳು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಜತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ವಿಕಲಚೇತನರಲ್ಲಿ ಸಾಮಾನ್ಯ ಮನುಷ್ಯನಿಗಿಂತ ವಿಶಿಷ್ಟವಾದ ಶಕ್ತಿ ಇರುತ್ತದೆ. ಆದರೆ, ಅದರ ಅರಿವು ಅವರಿಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜ ಮತ್ತು ಪೋಷಕರು ವಿಕಲ ಚೇತನತರಲ್ಲಿ ಈ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅವರಲ್ಲಿರುವ ವಿಶಿಷ್ಟ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಇಂದು ರೋಟರಿ ಕ್ಲಬ್ ನವರು ವಿಕಲಚೇತನರಿಗೆ ವ್ಹೀಲ್‌ ಚೇರ್‌ ನೀಡಬೇಕೆಂದು ತೀರ್ಮಾನಿಸಿರುವುದು ಶ್ಲಾಘನೀಯ. ಎಲ್ಲವನ್ನೂ ಸರ್ಕಾರದಿಂದ ಮಾಡುವುದು ಕಷ್ಟ, ಅಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಸರ್ಕಾರಕ್ಕೂ ಸಹ ಒಂದು ರೀತಿಯ ಬಲ ಬಂದಂತಾಗುತ್ತದೆ. ಸರ್ಕಾರಗಳಿಗೆ ಸಹಕಾರ ಕೊಟ್ಟಂತಾಗುತ್ತದೆ. ಇದು ಬರೀ ಸರ್ಕಾರದ ಜವಾಬ್ದಾರಿ ಮಾತ್ರ ಅಲ್ಲ, ಸಮಾಜದಲ್ಲಿರುವಂತಹ ಎಲ್ಲರ ಜವಾಬ್ದಾರಿ, ಆ ಹಿನ್ನಲೆಯಲ್ಲಿ ಇಂದು ರೋಟರಿ ಕ್ಲಬ್‌ನವರು ಹಾಗೂ ಅನೇಕ ಸಂಸ್ಥೆಗಳು ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಂಗವಿಕಲ ಎನ್ನುವುದು ಒಂದು ವೈಫಲ್ಯ ಅಥವಾ ಒಂದು ಶಾಪ ಎಂದು ಭಾವಿಸದೇ ಅಥವಾ ಅಂಗವಿಕಲತೆಯಿಂದ ಕೊರಗದೇ ಆ ಮಕ್ಕಳು ಎಲ್ಲರ ಜೊತೆ ಬೆರೆಯಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸವಾಗಬೇಕು, ಬರೀ ಅನುಕಂಪ ತೋರಿಸಿದರೆ ಸಾಲದು ಅವರು ತಮ್ಮ ಬದುಕಿನಲ್ಲಿ ನೆಲೆ ನಿಲ್ಲುವುದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕಾಗಿದೆ ಎಂದರು.
ಬೆಂಗಳೂರು ರೋಟರಿ ಕ್ಲಬ್‌ ಅಧ್ಯಕ್ಷ ಗಿರೀಶ್‌ ಮಾತನಾಡಿ, ರೋಟರಿ ಕ್ಲಬ್‌ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು, ಇಂದು ತುಮಕೂರಿನ 50 ಮಂದಿ ವಿಕಲಚೇತನರಿಗೆ ವ್ಹೀಲ್‌ ಚೇರ್ ಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದರು.
ರೋಟರಿ ಕ್ಲಬ್‌ ವತಿಯಿಂದ ಆರೋಗ್ಯ ಶಿಬಿರಗಳು, ಪರಿಸರ, ಕೋವಿಡ್‌ ಸಂದರ್ಭದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ರೋಟರಿ ಕ್ಲಬ್‌ ಸೇವಾ ನಿರತ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ 50 ವಿಕಲಚೇತನ ಫಲಾನುಭವಿಗಳಿಗೆ ವ್ಹೀಲ್‌ ಚೇರ್ ಗಳನ್ನು ಬೆಂಗಳೂರು ರೋಟರಿ ಕ್ಲಬ್‌ ವತಿಯಿಂದ ವಿತರಿಸಲಾಯಿತು.
ಈ ವೇಳೆ ತುಮಕೂರು ಉಪಕುಲಪತಿ ಪೊ.ವೈ.ಎಸ್‌. ಸಿದ್ಧೇಗೌಡ, ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಅಧ್ಯಕ್ಷ ಕೆ.ಜೆ.ಪ್ರಸಾದ್‌, ರೋಟರಿ ತುಮಕೂರು ಅಧ್ಯಕ್ಷ ಎ.ಎಸ್‌.ಬಸವರಾಜ್‌ ಹಿರೇಮಠ್‌, ಡಿಡಿಪಿಐ ನಂಜಯ್ಯ, ರೋಟರಿ ಸಂಸ್ಥೆಯ ಎಸ್‌.ಎಲ್‌.ಕಾಡದೇವರಮಠ್‌, ಉಮೇಶ್‌, ಟಿ.ಆರ್‌.ಸದಾಶಿವಯ್ಯ, ಮಲ್ಲಸಂದ್ರ ಶಿವಣ್ಣ, ಮಹೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!