ಬಾಕಿ ವಸೂಲಿಗೆ ತೆರಳಿದ್ದ ಬೆಸ್ಕಾಂ ಸಿಬ್ಬಂದಿ ಮೇಲೆ ಗ್ರಾಮಸ್ಥರ ಹಲ್ಲೆ

579

Get real time updates directly on you device, subscribe now.

ಶಿರಾ: ಬಾಕಿ ಇದ್ದ ಬಿಲ್‌ ಪಾವತಿಸುವಂತೆ ಮನೆ ಬಾಗಿಲಿಗೆ ತೆರಳಿದ್ದ ಬೆಸ್ಕಾಂ ಸಿಬ್ಬಂದಿ ಮೇಲೆ ಮನೆಯವರು ಮತ್ತು ಗ್ರಾಮಸ್ಥರು ಸೇರಿ ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ ಬುಧವಾರ ಬೆಳಗ್ಗೆ ಜರುಗಿದೆ.
ಕಳೆದ ನಾಲ್ಕಾರು ತಿಂಗಳಿನಿಂದ ವಿದ್ಯುತ್‌ ಬಿಲ್‌ ಪಾವತಿಸದೇ ಬಾಕಿ ಉಳಿಸಿಕೊಂಡ ಮನೆಗಳಿಂದ ವಸೂಲಾತಿಗೆ ತೆರಳಿದ್ದ ನಗರ ಉಪವಿಭಾಗದ 3ನೇ ಕಾರ್ಯಪಾಲ ಘಟಕದ ಶಾಖಾಧಿಕಾರಿ ಹೆಚ್‌.ರಾಜಣ್ಣ ಮತ್ತು ತಂಡದ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿ ತಲೆಗೆ ಪೆಟ್ಟು ತಗುಲಿದ್ದು, ಜೊತೆಯಲ್ಲಿದ್ದ ಪವರ್‌ ಮ್ಯಾನ್‌ ಭೂತರಾಜು ಎಂಬುವರ ಭುಜದ ಬಳಿ ಮೂಳೆ ಮುರಿತಕ್ಕೆ ಒಳಗಾಗಿದೆ. ಉಳಿದಂತೆ ನರಸಿಂಹಪ್ಪ, ತಿಪ್ಪೇಸ್ವಾಮಿ, ರಿಯಾಜ್‌ ಎನ್ನುವ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ್ದ ತಹಸೀಲ್ದಾರ್‌ ಮಮತಾ ಗಾಯಾಳುಗಳಿಂದ ಘಟನೆ ಕುರಿತು ವಿವರ ಪಡೆದುಕೊಂಡರು. ಈ ವೇಳೆ ಮಾತನಾಡಿದ ಗಾಯಾಳು ರಾಜಣ್ಣ ಎಂದಿನಂತೆ ಬಾಕಿ ವಸೂಲಾತಿಗೆ ತೆರಳಿದ್ದೆವು. ಅಲ್ಲೊಂದು ಮನೆಯ ಯಜಮಾನಿ ಪವರ್‌ ಕಟ್‌ ಮಾಡಿಕೊಂಡು ಹೋಗಿ ಎಂದರು. ಅಲ್ಲಿಂದ ಮುಂದೆ ತೆರಳಿದ ಕೆಲವೇ ಕ್ಷಣಗಳಲ್ಲಿ ಆಕೆಯ ಮಗ ತನ್ನೊಂದಿಗೆ ಏಳೆಂಟು ಜನರನ್ನು ಕರೆದುಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಿದನು. ನಮ್ಮ ಸಿಬ್ಬಂದಿಯನ್ನು ಬಿಡಿಸಲು ತೆರಳಿದ ನನ್ನ ತಲೆಗೆ ಪೆಟ್ಟು ತಗುಲಿತು. ಆತನ ಕೈನಲ್ಲಿದ್ದ ಮೊಬೈಲ್‌ ಬೀಸಿದಾಗ, ಕಣ್ಣಿನ ಬಳಿ ಗಾಯವಾಯಿತು. ಹೆಚ್ಚು ಪೆಟ್ಟು ತಗುಲದ ಇತರೆ ಸಿಬ್ಬಂದಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಲು ಪಟ್ಟನಾಯಕನಹಳ್ಳಿಗೆ ತೆರಳಿದ್ದಾರೆ ಎಂದು ವಿವರಿಸಿದರು.
ಮತ್ತೊಬ್ಬ ಗಾಯಾಳು ಭೂತರಾಜು ತಹಸೀಲ್ದಾರರಿಗೆ ಘಟನೆ ವಿವರಿಸುತ್ತಾ, ನಮ್ಮ ಸಿಬ್ಬಂದಿಯೊಬ್ಬರು ಕೆಳಕ್ಕೆ ಬಿದ್ದಿದ್ದರು. ಅವರನ್ನು ಎತ್ತಲು ಹೋದ ಸಂದರ್ಭ ಕಬ್ಬಿಣದ ಸಲಾಕೆಯಂತಹ ಆಯುಧದಿಂದ ನನ್ನ ಮೇಲೆ ಹಲ್ಲೆ ನಡೆಸಲಾಗಿದ್ದು, ಬಲಗಡೆ ಭುಜದ ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ವಿವರಿಸಿದರು.
ಗಾಯಾಳುಗಳಿಂದ ವಿವರ ಪಡೆದ ತಹಸೀಲ್ದಾರ್‌ ಮಮತಾ ನಿಮ್ಮ ಜೊತೆಯಲ್ಲಿ ನಾವಿದ್ದೇವೆ. ಹೆದರಬೇಡಿ ಎಂದು ಧೈರ್ಯ ತುಂಬಿದರು. ಗಾಯಾಳುಗಳ ಕುಟುಂಬದವರೊಂದಿಗೆ ಮಾತನಾಡಿ ಉತ್ತಮ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಇದೇ ವೇಳೆ ದೂರವಾಣಿಯಲ್ಲಿ ಪೊಲೀಸರೊಂದಿಗೆ ಮಾತನಾಡಿದ ಅವರು ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕರುಣೆ ಇಲ್ಲದಂತೆ ದೂರು ದಾಖಲಿಸಿ, ಮತ್ತೊಬ್ಬರಿಗೆ ಪಾಠವಾಗುವಂತಹ ಶಿಕ್ಷೆ ಕೊಡಿಸಬೇಕು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!