ಗುಬ್ಬಿ: ರೈತರು ಬೆಳೆದಂತಹ ತರಕಾರಿ, ಹಣ್ಣು, ಹೂವು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ರೈತರ ಬದುಕು ಅವನತಿಯತ್ತ ಸಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಹೋಬಳಿ ತ್ಯಾಗಟೂರು ಗ್ರಾಮದಲ್ಲಿ ಸೆಲ್ಕೋ ಫೌಂಡೇಶನ್ ಬೆಂಗಳೂರು, ತೋಟಗಾರಿಕಾ ಇಲಾಖೆ ಮತ್ತು ಹೇಮಾವತಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ತ್ಯಾಗಟೂರು ಇವರ ಸಹಯೋಗದಲ್ಲಿ ಸೋಲಾರ್ ಶೀತಲ ಘಟಕ 10 ಎಂಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳೆ ಬೆಳೆಯುವವರು ಮತ್ತು ಕೊಂಡುಕೊಳ್ಳುವವರು ಹಾಗೇ ಇದ್ದಾರೆ, ಇವರ ಮಧ್ಯದಲ್ಲಿ ಕೆಲಸ ಮಾಡುವ ಮಧ್ಯವರ್ತಿಗಳು ಮಾತ್ರ ರಾಜ್ಯದಲ್ಲಿ ಶ್ರೀಮಂತರಾಗಿದ್ದಾರೆ, ಹಾಗಾಗಿ ರೈತರು ಅಭಿವೃದ್ಧಿಯಾಗಬೇಕು ಎಂದರೆ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸುವ ಶೀತಲ ಘಟಕಗಳನ್ನು ಸ್ಥಾಪನೆ ಮಾಡಿದಾಗ ರೈತರು ಬೆಳೆದಂತಹ ಸೊಪ್ಪು ತರಕಾರಿ ಹಣ್ಣು ಹೂವುಗಳನ್ನು ಮಾರುಕಟ್ಟೆ ಇಲ್ಲದಂತಹ ಸಂದರ್ಭದಲ್ಲಿ ಇಲ್ಲಿ ಸಂಗ್ರಹ ಮಾಡಿ ಹೆಚ್ಚಿನ ಬೆಲೆ ಬಂದಾಗ ಮಾರುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು.
ಎಲ್ಲಿ ಹಣ್ಣು ತರಕಾರಿ ಹೂವುಗಳನ್ನು ಹೆಚ್ಚು ಬೆಳೆಯುತ್ತಾರೋ ಅಲ್ಲಿ ರೈತರ ಒಕ್ಕೂಟಗಳನ್ನು ಮಾಡಿ ಆ ಭಾಗದಲ್ಲಿ ಈ ರೀತಿಯ ಶೀತಲ ಘಟಕ ನಿರ್ಮಿಸಿ ಅವರಿಗೆ ಅನುಕೂಲ ಮಾಡುವಂಥ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಮಾತ್ರವಲ್ಲದೆ ಸಂಗ್ರಹ ಮಾಡುವುದರ ಜೊತೆಯಲ್ಲಿ ಹಣ್ಣು ಮಾಡುವ ವ್ಯವಸ್ಥೆಯನ್ನು ಸಹ ಇದರ ಜೊತೆಯಲ್ಲಿ ಜೋಡಿಸಲಾಗಿದ್ದು, ಇದರಿಂದ ಬಾಳೆಹಣ್ಣು ಹಾಗೂ ಮಾವಿನ ಹಣ್ಣುಗಳನ್ನು ಯಾವುದೇ ರಾಸಾಯನಿಕ ಬಳಕೆ ಮಾಡದೆ ಹಣ್ಣು ಮಾಡುವಂಥ ವ್ಯವಸ್ಥೆಯು ಇಲ್ಲಿ ನಡೆಯುತ್ತದೆ ಎಂದರು.
ಸಾಂಪ್ರದಾಯಿಕವಾಗಿ ಹಣ್ಣು ಮಾಡಿದಂತಹ ಸಂದರ್ಭದಲ್ಲಿ ರೈತರಿಗೆ ಧಾರಣೆಯೂ ಹೆಚ್ಚಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು, ಇನ್ನೂ ಗುಬ್ಬಿ ತಾಲ್ಲೂಕಿನಲ್ಲಿ ಹೇಮಾವತಿ ಹರಿದ ಮೇಲೆ ಅಡಿಕೆ, ತೆಂಗು ಹೆಚ್ಚಾಗಿದೆ, ಹಿಂದಿನಿಂದಲೂ ಮಾವು ಹಾಗೂ ಬಾಳೆ ಕೂಡ ಅತ್ಯಧಿಕವಾಗಿ ಬೆಳವಣಿಗೆ ಕಾಣುತ್ತಿರುವುದರಿಂದ ಅವುಗಳನ್ನು ಸಂರಕ್ಷಣೆ ಮಾಡಿದಾಗ ರೈತ ಕೂಡ ಉತ್ತಮ ಜೀವನ ಮಾಡಬಹುದಾಗಿದೆ, ಕೃಷಿಯಲ್ಲಿ ಮಾರುಕಟ್ಟೆ ಮತ್ತು ವೈಜ್ಞಾನಿಕವಾದ ಕೃಷಿ ಪದ್ಧತಿ ಅಳವಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇನ್ನೂ ಸಂಶೋಧನೆ ಹಾಗೂ ಪ್ರಯೋಗಗಳು ಕೇವಲ ಪುಸ್ತಕದಲ್ಲಿ ಉಳಿದರೆ ಸಾಲದು, ಅದು ಭೂಮಿಯಲ್ಲಿ ಫಲವನ್ನು ನೀಡಿದರೆ ಮಾತ್ರ ಪ್ರಯೋಗ ಹಾಗೂ ಸಂಶೋಧನೆ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ. ಕೆಎಂಎಫ್ ಇಲ್ಲದೆ ಹೋಗಿದ್ದರೆ ಇವತ್ತು ನಗರದ ಹಣ ಗ್ರಾಮೀಣ ಭಾಗದ ಹಳ್ಳಿಯ ರೈತರಿಗೆ ಸಿಗುತ್ತಿರಲಿಲ್ಲ, ಪ್ರತಿದಿನ ಎಂಬತ್ತು 8 ಲಕ್ಷ ಲೀಟರ್‌ನಷ್ಟು ಹಾಲು ಸರಬರಾಜಾಗುತ್ತಿರುವುದರಿಂದ ಆರ್ಥಿಕವಾಗಿ ಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿಯತ್ತ ಸಾಗುತ್ತಿವೆ, ಈ ರೀತಿಯ ಕೆಲಸ ಕೃಷಿಯಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.
ಸೆಲ್ಕೋ ಇಂಡಿಯಾದ ಸಿಇಒ ಮೋಹನ್ ಹೆಗ್ಡೆ ಮಾತನಾಡಿ, ನಮ್ಮ ಸಂಸ್ಥೆ ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನುರೈತರಿಗೆ ಆಯೋಜನೆ ಮಾಡಿದ್ದು ಸೌರಶಕ್ತಿ ಬಳಸಿಕೊಂಡು ಇಂಧನದ ಮೇಲೆ ಇರುವಂತಹ ಒತ್ತಡ ಕಡಿಮೆ ಮಾಡುವುದು, ಕುಡಿಯುವ ನೀರಿನ ವ್ಯವಸ್ಥೆ, ರೈತರಿಗೆ ಅನುಕೂಲವಾದ ಮಾರುಕಟ್ಟೆ ವ್ಯವಸ್ಥೆ, ಶೀತಲ ಘಟಕಗಳು ಇಂತಹ ಹತ್ತು ಹಲವು ಕಾರ್ಯಕ್ರಮ ಮಾಡುವ ಮೂಲಕ ರೈತರ ಹಿತ ಕಾಯಲು ನಾವು ಬದ್ಧವಾಗಿದ್ದು, ಈ ಶೀತಲ ಘಟಕ ಸ್ಥಾಪನೆ ಮಾಡಲು ಸುಮಾರು ಇಪ್ಪತ್ತಾರು ಲಕ್ಷ ಹಣ ಖರ್ಚಾಗಿದೆ, ಇದರಲ್ಲಿ ಶೇಕಡಾ ಎಪ್ಪತ್ತೈದರಷ್ಟು ಪಾಲು ನಮ್ಮದಾಗಿದ್ದು, ಇನ್ನೂ ಇಪ್ಪತ್ತೈದು ಪಾಲು ರೈತ ಸಂಸ್ಥೆಯದ್ದು ಆಗಿರುವುದು ಬಹಳ ವಿಶೇಷ ಎಂದು ತಿಳಿಸಿದರು.
ಹೇಮಾವತಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಕಿಡಿಗಣ್ಣಪ್ಪ ಮಾತನಾಡಿ, ಗುಬ್ಬಿ ತಾಲ್ಲೂಕಿನಲ್ಲಿ ಸಾಕಷ್ಟು ತೆಂಗು ಮಾವು ಬೆಳೆಯುತ್ತಿರುವುದರಿಂದ ಅವುಗಳಿಗೆ ಸಂಬಂಧಪಟ್ಟಂತಹ ವಿಶೇಷ ಯೋಜನೆಗಳನ್ನು ಕಂಪನಿ ಹಾಗೂ ಸರಕಾರ ಮಾಡಿಕೊಡಬೇಕು, ಇದರಿಂದ ಸಾಕಷ್ಟು ರೈತರು ಅಭಿವೃದ್ಧಿಯತ್ತ ಸಾಗುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಎನ್.ಎಸ್.ಮೂರ್ತಿ, ತಹಸೀಲ್ದಾರ್ ಪಿ.ಆರತಿ, ತೋಟಗಾರಿಕಾ ಇಲಾಖಾ ನಿರ್ದೇಶಕ ರಘು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ,ಉಪಾಧ್ಯಕ್ಷೆ ವಿದ್ಯಾಧರ, ಸದಸ್ಯರಾದ ಶಿವಕುಮಾರ ಸ್ವಾಮಿ, ಓಂಕಾರ ಪ್ರಸಾದ್, ನಳಿನಾ ಪ್ರಕಾಶ್, ಭವ್ಯ ಪರಮೇಶ್, ತೋಟಗಾರಿಕಾ ನಿರ್ದೇಶಕ ರಾಜಪ್ಪ, ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ಅಧ್ಯಕ್ಷ ಕೆ.ಸಿ.ಪ್ರಸಾದ್, ಉಪಾಧ್ಯಕ್ಷ ಚಿಕ್ಕಣ್ಣ, ನಿರ್ದೇಶಕ ಕಿಡಿಗಣ್ಣಪ್ಪ, ಆತ್ಮಾನಂದ, ದಯಾನಂದ್, ಗುರುಶಾಂತಪ್ಪ, ಚೇತನ್, ಮಂಜುಳಾ, ಶಕುಂತಲಾ, ಮೋಹನ್, ಕೀರ್ತಿ, ಲೋಕೇಶ್, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಚಿದಾನಂದ್, ಸಾಗರನಹಳ್ಳಿ ವಿಜಯಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ದಯಾಶೀಲಾ ಇನ್ನಿತರರು ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.