ಪೊಲೀಸ್‌ ದೌರ್ಜನ್ಯ ಖಂಡಿಸಿ ದಲಿತರ ಹೋರಾಟ

ದಲಿತರ ಮೇಲಿನ ಶೋಷಣೆ ನಿಲ್ಲಿಸಿ..

186

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ದಲಿತರ ಮೇಲೆ ಪೊಲೀಸ್‌ ದೌರ್ಜನ್ಯ ಹೆಚ್ಚುತ್ತಿದ್ದು, ರಕ್ಷಣೆ ನೀಡಬೇಕಾದ ಪೊಲೀಸರೇ ದಲಿತರ ಶೋಷಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳೂರು ಮಾತನಾಡಿ, ಕುಣಿಗಲ್‌ ತಾಲ್ಲೂಕಿನಲ್ಲಿ ದಲಿತ ಮಹಿಳೆಯರಾದ ಮಾಯಮ್ಮ ಮತ್ತು ಸೌಭಾಗ್ಯಮ್ಮ ಅವರು ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ಬೆಳೆದಿದ್ದ ಫಸಲನ್ನು ಅಕ್ರಮವಾಗಿ ಸವರ್ಣೀಯರು ಕಡಿದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಠಾಣೆಗೆ ಹೋದರೆ ಅವರ ಮೇಲೆಯೇ ದೌರ್ಜನ್ಯಯುತವಾಗಿ ಪೊಲೀಸರು ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಯಡಿಯೂರು ಹೋಬಳಿ ಬ್ಯಾಲದಕೆರೆ ಸೌಭಾಗ್ಯಮ್ಮ, ಅಮೃತೂರು ಹೋಬಳಿಯ ಕುರುಬರ ಶೆಟ್ಟಿಹಳ್ಳಿಯ ಮಾಯಮ್ಮ ಅವರು ಕಳೆದ 20-30 ವರ್ಷಗಳಿಂದಲೂ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದು, ಸೌಭಾಗ್ಯಮ್ಮ ಅವರು 15ಗುಂಟೆ ಜಾಗದಲ್ಲಿ ಬೆಳೆದಿದ್ದ ಹೆಬ್ಬೇವಿನ ಮರಗಳನ್ನು ತಿಮ್ಮಪ್ಪ ಎಂಬುವರು ಅಕ್ರಮವಾಗಿ ತೆರವುಗೊಳಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದರೆ ಸ್ಥಳೀಯ ಠಾಣೆಯಲ್ಲಿ ದೂರು ಸ್ವೀಕರಿಸಿದೇ ಸೌಭಾಗ್ಯಮ್ಮ ಅವರನ್ನೇ ಹೆದರಿಸಿ, ಬೆದರಿಸಿ ಕಳುಹಿಸುತ್ತಾರೆ ಎಂದರೆ ಪೊಲೀಸರು ಯಾರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬುದ್ದಿಮಾಂದ್ಯ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಮಾಯಾಮ್ಮ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿ, ಜಮೀನಿನಿಂದ ಹೊರಹಾಕಿದ್ದು, ಈ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಜೀವ ಭಯದಲ್ಲಿಯೇ ಮಾಯಮ್ಮ ಅವರ ಕುಟುಂಬ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್‌ ವರಿಷ್ಠಾಧಿಕಾರಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಗರ್ ಹುಕುಂ ಕಮಿಟಿ ರಚನೆಗೆ ಆಗ್ರಹ: ಜಿಲ್ಲೆಯಲ್ಲಿ ಬಗರ್ ಹುಕುಂ ಕಮಿಟಿಗಳನ್ನು ರಚನೆ ಮಾಡದೇ ಇರುವುದರಿಂದ 20- 30 ವರ್ಷಗಳಿಂದ ಭೂಮಿ ಹಸನು ಮಾಡಿಕೊಂಡು ಜೀವನ ಕಟ್ಟಿಕೊಂಡಿರುವ ದಲಿತರ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದ್ದು, ಭೂಮಿ ಕಬಳಿಸಲು ಸರ್ವಣೀಯರು ಯತ್ನಿಸುತ್ತಿದ್ದು, ಇದರಿಂದ ಸಾಮಾಜಿಕ ಸಂಘರ್ಷ ಹೆಚ್ಚುತ್ತಿದ್ದು, ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣವಾಗುತ್ತಿದೆ, ಜಿಲ್ಲಾಧಿಕಾರಿಗಳು ಶೀಘ್ರವಾಗಿ ಬಗರ್ ಹುಕುಂ ಕಮಿಟಿ ರಚಿಸಿ ದಲಿತರಿಗೆ ಭೂಮಿ ಮಂಜೂರಾತಿ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಭೂ ರಹಿತ ಕುಟುಂಬಗಳಿಗೆ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿ, ಕಂದಾಯ ಕಟ್ಟಿಕೊಳ್ಳುತ್ತಿದ್ದರು ಸಹ ಸಮಿತಿ ರಚನೆಯಾಗದ ಕಾರಣ ಅರ್ಜಿ ಸಲ್ಲಿಸಿರುವ ದಲಿತರು ಮತ್ತು ಸರ್ವಣೀಯ ಮಧ್ಯ ಸಾಮಾಜಿಕ ಸಂಘರ್ಷವನ್ನುಂಟು ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಬಗರ್ ಹುಕುಂ ಕಮಿಟಿ ರಚಿಸುವ ಮೂಲಕ ದಲಿತ ಮಹಿಳೆಯರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ರಾಜು ವೆಂಕಟಪ್ಪ, ರಾಜ್ಯ ಸಂಚಾಲಕ ಹೆಚ್‌.ಜಿ.ನಾಗಣ್ಣ, ಪ್ರಕಾಶ್ ಕುಮಾರ್‌, ಶಂಕರ್‌, ಪ್ರಶಾಂತ್‌, ಸತೀಶ್‌, ಕೃಷ್ಣಮೂರ್ತಿ, ಸದಾಶಿವಯ್ಯ, ಶಿವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!