ಬಾಕಿ ಸ್ಮಾರ್ಟ್‌ ಕಾಮಗಾರಿ ಪೂರ್ಣಗೊಳಿಸಿ: ಡೀಸಿ

196

Get real time updates directly on you device, subscribe now.

ತುಮಕೂರು: ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಸ್ಮಾರ್ಟ್‌ ಸಿಟಿ ಲಿಮಿಟೆಡ್ ಸಮನ್ವಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ಮಾರ್ಟ್‌ ಸಿಟಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯುಜಿಡಿ ಕಾಮಗಾರಿ, ಬಾಕ್ಸ್ ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸುವಂತೆ ನಿರ್ದೇಶಿಸಿದರು.
ನಗರದಲ್ಲಿ ಕೈಗೊಂಡಿರುವ ಗ್ಯಾಸ್‌ ಲೈನ್‌, ಕುಡಿಯುವ ನೀರು ಸರಬರಾಜು, ಉದ್ಯಾನವನ ಸೇರಿದಂತೆ ವಾಣಿಜ್ಯ ಮಳಿಗೆಗಳನ್ನು ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ವಿದ್ಯುತ್‌ ಸರಬರಾಜಿಗೆ ತೊಂದರೆಯಾಗದಂತೆ ಬೆಸ್ಕಾಂ ಇಲಾಖಾಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಕಾಮಗಾರಿ ಕೈಗೊಳ್ಳಬೇಕು. ಅಮಾನಿಕೆರೆ ಅಂಗಳದ ಅಕ್ರಮ ಒತ್ತುವರಿ ತೆರವುಗೊಳಿಸಬೇಕು. ಕೆರೆಯನ್ನು ಅಭಿವೃದ್ಧಿ ಪಡಿಸಿ ನಿರ್ಮಿಸಲಾಗಿರುವ ಸೈನ್ಸ್ ಥೀಮ್‌ ಪಾರ್ಕ್ ನ ನಿರ್ವಹಣೆಯನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬೇಕು, ಸಂಚಾರಿ ವ್ಯಾಪಾರಸ್ಥರು ಅತಿಕ್ರಮಿಸಿಕೊಂಡಿರುವ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ನಿರ್ದೇಶನ ಮಾಡಿದರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ಮಾರ್ಟ್‌ಸಿಟಿ ಲಿಮಿಟೆಡ್ ನಿಂದ ಅಕ್ಟೋಬರ್‌ 2 ರಂದು ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ನಡೆಯಲಿರುವ ನಗರದ ಟೌನ್‌ಹಾಲ್‌ ವೃತ್ತದಿಂದ ರಿಂಗ್‌ ರಸ್ತೆಯವರೆಗೆ ಸೈಕಲ್‌ ಜಾಥಾ ಹಾಗೂ ಗಿಡ ನೆಡುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಂಸದ ಜಿ.ಎಸ್‌.ಬಸವರಾಜ ಮಾತನಾಡಿ, ನಗರದ ರಿಂಗ್‌ ರಸ್ತೆಯಲ್ಲಿ ಕೈಗೊಂಡ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ. ಯುಜಿಡಿ ಹಾಗೂ ಕೇಬಲ್‌ ಅಳವಡಿಸುವ ಕಾಮಗಾರಿ ನೆಪದಲ್ಲಿ ಅಗೆದಿರುವ ಗುಂಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ವಾಹನಗಳ ಸುಗಮ ಸಂಚಾರ ಕಷ್ಟಸಾಧ್ಯವಾಗಿದೆ. ಹಾಗಾಗಿ ಕಾಮಗಾರಿ ವೇಳೆ ಅಗೆದಿರುವ ಗುಂಡಿಗಳನ್ನು ಸರಿಯಾಗಿ ಮುಚ್ಚಿ, ಕಾಮಗಾರಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ, ಇಂಜಿನಿಯರ್‌ ಬಸವರಾಜಗೌಡ ಸೇರಿದಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!