ಕೋವಿಡ್ 3ನೇ ಅಲೆ ಎದುರಿಸಲು ಸನ್ನದ್ಧ: ಮಾಧುಸ್ವಾಮಿ

196

Get real time updates directly on you device, subscribe now.

ಶಿರಾ: ಕೋವಿಡ್ ಮೂರನೇ ಅಲೆ ಬಂದರೂ ನಾವು ಹೆದರುವುದಿಲ್ಲ. ತುಮಕೂರು ಜಿಲ್ಲೆ ಎಲ್ಲ ರೀತಿಯಲ್ಲೂ ತಯಾರಿ ನಡೆಸಿದ್ದು, 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನುಡಿದರು.
ಗುರುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಉದ್ಟಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ನಿಮಿಷಕ್ಕೆ ಇಲ್ಲಿ ಸುಮಾರು 400 ಲೀಟರ್ ನಷ್ಟು ಆಕ್ಸಿಜನ್ ಉತ್ಪಾದಿಸಲಾಗುವುದು. ರಾಜ್ಯ ಸರ್ಕಾರ ಜಿಲ್ಲೆಗೆ ನೀಡಿದ್ದ ಮೂರು ಘಟಕಗಳಲ್ಲಿ ಶಿರಾದಲ್ಲಿಂದು ಅಂದಾಜು 80 ಲಕ್ಷ ಮೊತ್ತದ ಮೊದಲನೇ ಘಟಕ ಉದ್ಘಾಟಿಸಲಾಗುತ್ತಿದೆ. ಇದರ ಜೊತೆಯಲ್ಲಿ ಅವಶ್ಯಕತೆ ಬಿದ್ದಲ್ಲಿ ಆಕ್ಸಿಜನ್ ಸಿಲಿಂಡರ್ ಮೂಲಕವೂ ಆಕ್ಸಿಜನ್ ನೀಡಲಾಗುವುದು, ಎಂಥದ್ದೇ ಸಂದರ್ಭದಲ್ಲೂ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಭರವಸೆ ನಮಗಿದೆ ಎಂದರು.
ಮೂರನೇ ಅಲೆ ಮಕ್ಕಳ ಮೇಲೆ ಎಂದು ಅಂದಾಜಿಸಲಾಗಿದ್ದು, ತಯಾರಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಮಕ್ಕಳಲ್ಲಿ ಶೇ.2ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ಬರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ 200 ಜನ ಪೀಡ್ರಿಯಾಟ್ರಿಷನ್ ಗಳಿಗೆ ತಜ್ಞರಿಂದ ತರಬೇತಿ ನೀಡಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಿಲ್ಲೆಯ ಸುಮಾರು 6 ಸಾವಿರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅವರನ್ನು ಸದೃಢರನ್ನಾಗಿ ಮಾಡುವ ಯತ್ನ ನಡೆಸುತ್ತಿದ್ದೇವೆ. ಅವರಲ್ಲಿ 2 ಸಾವಿರ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರಿಗೆ ವಿಶೇಷ ಗಮನ ನೀಡಿ, ಪೌಷ್ಟಿಕತೆ ಹೆಚ್ಚಿಸುವ ಜೊತೆಯಲ್ಲಿ ರೋಗ ನಿರೋಧಕತೆ ಬೆಳೆಸುವ ನಿಟ್ಟಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಎದುರಿಸಲು ಎಲ್ಲಾ ಬಗೆಯ ತಯಾರಿ ನಡೆಸಿದ್ದೇವೆ. ಸಾರ್ವಜನಿಕರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಸರ್ಕಾರ ಎಲ್ಲಾ ಬಗೆಯಲ್ಲಿ ಸಿದ್ಧತೆ ನಡೆಸಿದೆ ಎಂದು ವಿವರಿಸಿದರು.
ಆರೋಗ್ಯ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೆಟರಿ ಅನಿಲ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ತಹಸೀಲ್ದಾರ್ ಮಮತಾ, ಟಿಎಚ್ಓ ಡಾ.ಮೋಹನ್ ಕುಮಾರ್, ಸಿಎಂಓ ಡಾ.ಶ್ರೀನಾಥ್, ಡಾ.ಡಿ.ಎಂ.ಗೌಡ, ಡಾ.ಮಂಜುನಾಥ್, ಡಾ.ಸಿದ್ದೇಶ್ ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!