ರೈತರ ಮೇಲೆ ವಾಹನ ಹತ್ತಿಸಿದ ಘಟನೆಗೆ ರೈತ ಸಂಘಟನೆಗಳ ಆಕ್ರೋಶ

ರೈತ ವಿರೋಧಿ ಕಾಯ್ದೆಗಳ ವಾಪಸ್ ಗೆ ಆಗ್ರಹ

156

Get real time updates directly on you device, subscribe now.

ತುಮಕೂರು: ರೈತ ವಿರೋಧಿ ಕಾಯ್ದೆಗಳ ವಾಪಸ್ ಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ವಾಹನ ಹತ್ತಿಸಿ ಮೂವರು ರೈತರನ್ನು ಬಲಿ ಪಡೆದ ಯುಪಿ ಸರಕಾರವನ್ನು ಕೂಡಲೇ ವಜಾಗೊಳಿಸಬೇಕು ಹಾಗೂ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ವತಿಯಿಂದ ಬಿಎಸ್‌ಎನ್‌ಎಲ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘ, ಹಸಿರು ಸೇನೆ, ಆರ್‌.ಕೆ.ಎಸ್‌, ಸಿಐಟಿಯು, ಪ್ರಾಂತ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸರಕಾರದ ಸಚಿವರೊಬ್ಬರ ಬೆಂಗಾವಲು ಪಡೆಯ ವಾಹನ ಹರಿದು ಮೂವರು ರೈತರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ ಸರಕಾರವನ್ನು ಕೇಂದ್ರ ಸರಕಾರ ವಜಾಗೊಳಿಸಬೇಕು ಹಾಗೂ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂಬುದು ಪ್ರತಿಭಟನಾನಿರತರ ಒತ್ತಾಯವಾಗಿತ್ತು.
ಪ್ರತಿಭಟನೆ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್‌ ಸರಕಾರ ಒಂದು ಗೂಂಡಾ ಸರಕಾರವಾಗಿದ್ದು, ಪ್ರತಿಭಟನಾನಿರತ ರೈತರ ಮೇಲೆ ವಾಹನ ಹತ್ತಿಸುವ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡಲೇ ಕೇಂದ್ರದ ಮಂತ್ರಿ ಹಾಗೂ ಅವರ ಮಗನ ವಿರುದ್ಧ ಕೊಲೆ ಕೇಸು ದಾಖಲಿಸಿ ತನಿಖೆ ನಡೆಸಬೇಕು. ಹಾಗೆಯೇ ಇಡೀ ಪ್ರಕರಣಕ್ಕೆ ಕಾರಣ ವಾಗಿರುವ ಉತ್ತರ ಪ್ರದೇಶ ಸರಕಾರ ವಜಾಗೊಳಿಸಬೇಕು. ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಿ ಅವರ ಒತ್ತಾಯದಂತೆ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್‌ ಮಾತನಾಡಿ, ಪ್ರತಿಭಟನಾನಿರತ ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹತ್ತಿಸುವ ಮೂಲಕ ಕೇಂದ್ರ ಸರಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಮುಂದುವರೆಸಿದೆ. ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಜನ್ಮಸಿದ್ದ ಹಕ್ಕಾಗಿದೆ. ಹೀಗಿದ್ದರೂ ಕೇಂದ್ರ ಸರಕಾರ ವಿವಿಧ ರೀತಿಯಲ್ಲಿ ಪ್ರತಿಭಟನೆ ಹತ್ತಿಕ್ಕಲು ಹೊರಟಿರುವುದು ನಾಚಿಕೇಗೇಡಿನ ಸಂಗತಿಯಾಗಿದೆ. ಬಿಜೆಪಿಯ ಹತ್ಯಾ ಸಂಸ್ಕೃತಿ ನಿಲ್ಲಬೇಕು, ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಬಿಜೆಪಿ ಸಂಸ್ಕೃತಿ ಎಂದರೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ಅವರನ್ನು ದೇಶ ದ್ರೋಹಿಗಳು ಎಂದು ಬಿಂಬಿಸುತ್ತಿದೆ. ಹಾಗಾದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೀವು ನಡೆಸಿದ ಹೋರಾಟವೂ ದೇಶದ್ರೋಹವೇ, ನಿಮ್ಮದು ನಕಲಿ ಹೋರಾಟವೇ ಎಂದು ಪ್ರಶ್ನಿಸಬೇಕಾಗಿದೆ. ಈ ದೇಶದಲ್ಲಿ ಸಂವಿಧಾನ, ನ್ಯಾಯಾಂಗ ವ್ಯವಸ್ಥೆ ಬದುಕಿದೆಯೇ ಎಂಬ ಅನುಮಾನ ಕಾಡುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಮತ್ತಷ್ಟು ಸಂಘಟಿತ ಹೋರಾಟ ನಡೆಸಬೇಕಾಗಿದೆ. ಬಿಜೆಪಿ ಮುಖಂಡರಿಗೂ, ಬೀದಿ ರೌಡಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಅದಕ್ಕಿಂತಲೂ ಕೀಳು ನಡೆಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಆನಂದ ಪಟೇಲ್‌ ಆರೋಪಿಸಿದರು.
ಸಿಐಟಿಯುನ ಸೈಯದ್‌ ಮುಜೀಬ್‌ ಮಾತನಾಡಿ, ಯುಪಿಯಲ್ಲಿ ಭಾನುವಾರ ನಡೆದ ಘಟನೆ ಖಂಡಿಸಿ ದೇಶದಾದ್ಯಂತ ರೈತರು ಪ್ರತಿಭಟನೆಗೆ ಇಳಿದಿದ್ದಾರೆ, ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಕೂಡಲೇ ಗೃಹ ಸಚಿವರನ್ನು ವಜಾಗೊಳಿಸಿ ಸ್ವತಂತ್ರ ತನಿಖೆ ನಡೆಸಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.
ಸಂಯುಕ್ತ ಹೋರಾಟ ಸಮಿತಿ ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು, ಆರ್‌.ಕೆ.ಎಸ್‌ನ ಸ್ವಾಮಿ ಮಾತನಾಡಿದರು. ಈ ವೇಳೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ರವೀಶ್‌, ಶಿರಾ ಕೆಂಚಪ್ಪ, ಗುಬ್ಬಿ ತಾಲೂಕಿನ ನಾಗರತ್ನ ಲೋಕೇಶ್‌, ವೆಂಕಟೇಗೌಡ, ರುದ್ರೇಶ್‌, ಸಿದ್ದರಾಜು, ಲಕ್ಕಣ್ಣ, ಚಿರತೆ ಚಿಕ್ಕಣ್ಣ, ಎಐಟಿಯುಸಿಯ ಕಂಬೇಗೌಡ, ಕೊಳಗೇರಿ ಹಿತರಕ್ಷಣಾ ಸಮಿತಿಯ ನರಸಿಂಹಮೂರ್ತಿ, ಮಹಿಳಾ ಸಂಘಟನೆಯ ಕಲ್ಯಾಣಿ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!