ಜನರ ಆರೋಗ್ಯ ಕಾಪಾಡುವುದು ವೈದ್ಯರ ಕರ್ತವ್ಯ: ಡಾ.ಪರಮೇಶ್

183

Get real time updates directly on you device, subscribe now.

ತುಮಕೂರು: ಜನಸಾಮಾನ್ಯರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬ ವೈದ್ಯನ ಕರ್ತವ್ಯ.ಈ ನಿಟ್ಟಿನಲ್ಲಿ ಸಿದ್ದಗಂಗಾ ಆಸ್ಪತ್ರೆ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಆರೋಗ್ಯ ಶಿಬಿರಗಳ ಮೂಲಕ ಅವರ ಆರೋಗ್ಯವನ್ನು ಸುಸ್ಥಿತವಾಗಿಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್‌ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಏರ್ಪಡಿಸಿದ್ದ ಹೃದ್ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರಿಗಾಗಿ ಹಗಲಿರುಳು ದುಡಿಯುತ್ತಿರುವ ಶ್ರೀಸಿದ್ದಗಂಗಾ ಆಸ್ಪತ್ರೆಗೆ 2022-23ನೇ ಸಾಲಿಗೆ ಮೆಡಿಕಲ್‌ ಕಾಲೇಜು ಮಂಜೂರಾಗಿದೆ. ಇದರಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು 280 ಬೆಡ್‌ಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಅಲ್ಲದೆ ನಗರದ ಹೃದಯ ಭಾಗದಲ್ಲಿ ಆಸ್ಪತ್ರೆ ಇರುವುದರಿಂದ ಹೆಚ್ಚಿನ ಜನರಿಗೆ ಇದರ ಉಪಯೋಗ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್‌ ಮಾತನಾಡಿ, ಪತ್ರತರ್ಕರು ಸದಾ ಒತ್ತಡದಲ್ಲಿದ್ದು ಕೆಲಸ ಮಾಡುವುದರಿಂದ ಇತ್ತೀಚಿನ ದಿನಗಳಲ್ಲಿ ಮಾರಾಣಾತಿಕ ಹೃದ್ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂದಿನ ಒತ್ತಡದ ಬದುಕಿನಲ್ಲಿ ಹಲವಾರು ರೋಗಗಳು ಪತ್ರಕರ್ತರನ್ನು ಕಾಡುತ್ತಿವೆ. ಹಾಗಾಗಿ ಪತ್ರಿಕಾ ಪ್ರತಿನಿಧಿಗಳು ಸಮಾಜದ ಕೆಲಸದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕೆಂಬ ಉದ್ದೇಶದಿಂದ ಈ ಶಿಬಿರವನ್ನು ಸಿದ್ದಗಂಗಾ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ. ಪತ್ರಕರ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೆಯೇ ಸಿದ್ದಗಂಗಾ ಆಸ್ಪತ್ರೆಯಲ್ಲಿ ಪತ್ರಕರ್ತರು ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಹೆಲ್ತ್ ಕಾರ್ಡ್‌ ವಿತರಿಸುವಂತೆ ಆಸ್ಪತ್ರೆಯ ಎಂಡಿ ಡಾ.ಪರಮೇಶ್ವರಪ್ಪ ಅವರಲ್ಲಿ ಮನವಿ ಮಾಡಿದರು.
ಹೃದಯ ಸಂಬಂಧಿ ಕಾಯಿಲೆಗಳ ಕುರಿತು ವಿಶೇಷ ಸಂವಾದ ನಡೆಸಿದ ಸಿದ್ದಗಂಗಾ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್‌, ಮನುಷ್ಯ ಎಂದ ಮೇಲೆ ಕಾಯಿಲೆ ಬರುವುದು ಸಹಜ, ಹಾಗಾಗಿ ಪ್ರತಿಯೊಬ್ಬರು ಮಾರಾಣಾಂತಿಕ ಕಾಯಿಲೆಯಾದ ಹೃದಯ ಸ್ತಂಭನ, ಹೃದಯ ವೈಫಲ್ಯ ಇನ್ನಿತರ ಹಾರ್ಟ್‌ ಡಿಸೀಸ್ ಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ, ಜಗತ್ತಿನ ಯಾವುದೇ ವ್ಯಕ್ತಿಯಲ್ಲಿ ಶೇ.100 ರಷ್ಟು ರೋಗ ನಿರೋಧಕ ಶಕ್ತಿ ಇರುವುದಿಲ್ಲ, ವಯಸ್ಸಾದಂತೆ ಹಲವಾರು ಖಾಯಿಲೆಗಳು ನಮ್ಮನ್ನು ಬಾಧಿಸುತ್ತವೆ. ಅವುಗಳಲ್ಲಿ ಪ್ರಮುಖವಾದುದ್ದು ಹೃದಯ ಸಂಬಂಧಿ ಖಾಯಿಲೆಗಳು, ಆರಂಭದಲ್ಲಿಯೇ ತಜ್ಞ ವೈದ್ಯರಿಂದ ತಪಾಸಣೆಗೆ ಒಳಗಾಗಿ ಕಾಯಿಲೆ ಕಂಡುಕೊಂಡರೆ ಚಿಕಿತ್ಸೆಯ ಮೂಲಕ ಗುಣಪಡಿಸಿಕೊಳ್ಳಬಹುದು. ಉತ್ತಮ, ಶ್ರಮದಾಯಕ ಜೀವನ ಶೈಲಿ ರೂಢಿಸಿಕೊಂಡರೆ ಇದರಿಂದ ಹೊರಬರಬಹುದು. ಹೃದ್ರೋಗದಂತಹ ಕಾಯಿಲೆಗಳನ್ನು ನಿರ್ಲಕ್ಷ ಮಾಡದೆ, ಕಾಲ ಕಾಲಕ್ಕೆ ತಪಾಸಣೆ ನಡೆಸಿದರೆ ನಮ್ಮ ಜೀವಿತದ ಕಾಲಾವಧಿಯನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಆಸ್ಪತ್ರೆಯ ಪಿಆರ್‌ಓ ಕಾಂತರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಂಗರಾಜು.ಎನ್‌.ಡಿ., ಪದಾಧಿಕಾರಿಗಳಾದ ರಘುರಾಮ್‌, ಸಿ.ರಂಗನಾಥ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪತ್ರಕರ್ತರಿಗೆ ಹೃದಯ ಸಂಬಂಧಿ ರೋಗಗಳ ಕುರಿತು ತಪಾಸಣೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಲಾಯಿತು.

Get real time updates directly on you device, subscribe now.

Comments are closed.

error: Content is protected !!