ಪಹಣಿ ಇರುವ ರೈತರಿಗೆ ಡಿಸಿಸಿ ಬ್ಯಾಂಕ್‌ನಿಂದ ಕನಿಷ್ಟ ಸಾಲ: ಕೆಎನ್‌ಆರ್

257

Get real time updates directly on you device, subscribe now.

ಮಧುಗಿರಿ: ಜಿಲ್ಲೆಯಲ್ಲಿ ಪಹಣಿ ಹೊಂದಿರುವ ಎಲ್ಲಾ ಅರ್ಹ ರೈತರಿಗೂ ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಕನಿಷ್ಟ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಕ್ಷೇತ್ರದ ಮಾಜಿ ಶಾಸಕರು ಹಾಗೂ ಟಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಮಿಡಗೇಶಿ ಹೋಬಳಿಯ ನೇರಳೆಕೆರೆ ಗ್ರಾಮದಲ್ಲಿ ತಾಲ್ಲೂಕು ಮಾತಂಗ ಸಮುದಾಯದ ವತಿಯಿಂದ ಆಯೋಜಿಸಿದ್ದ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಪೂಜ ಕಾರ್ಯಕ್ರಮ ಹಾಗೂ 75ನೇ ಸ್ವತಂತ್ರ್ಯ ಅಮೃತ ಮಹೋತ್ಸವ, 153ನೇ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿಗಳಾಗಿದ್ದ ಜಗದೀಶ್‌ ಶೆಟ್ಟರ್‌ ಅವರು 25 ಸಾವಿರ ರೂ.ಗಳನ್ನು, ಸಿದ್ದರಾಮಯ್ಯನವರ ಅವಧಿಯಲ್ಲಿ ಕನಿಷ್ಠ 50 ಸಾವಿರ ರೂಪಾಯಿ ಸೇರಿದಂತೆ ನಮ್ಮ ತಾಲ್ಲೂಕಿನಲ್ಲಿ ಒಟ್ಟು 174 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದರು.
ಜನರಿಂದ ಮತ ಪಡೆದ ಪತ್ರಿಯೊಬ್ಬ ಜನಪ್ರತಿನಿಧಿಯು ತನ್ನ ಅಧಿಕಾರದ ಲಾಭವನ್ನು ಕ್ಷೇತ್ರದ ಜನರಿಗೆ ತಲುಪಿಸಿದಾಗ ಮಾತ್ರ ಜನ ನಾಯಕನಾಗಲು ಸಾಧ್ಯ, ರೈತ ಎಂದಿಗೂ ಅನ್ನ ನೀಡುವವನೆ ಹೊರತು ಬೇಡುವವನಲ್ಲಾ, ಕೊರೊನಾ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅನ್ನ ಭಾಗ್ಯ ಯೋಜನೆ ತುಂಬಾ ಸಹಕಾರಿಯಾಯಿತು ಎಂದರು.
ಸರಕಾರಗಳು ಬಡವರ ಪರವಾಗಿದ್ದು ಅವರ ಅಭಿವೃದ್ಧಿಗೆ ಶ್ರಮಿಸಿದರೆ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ, ಕೊರೊನಾ ನೆಪದಲ್ಲಿ ಕೆಲ ಆಸ್ಪತ್ರೆಗಳು ಮಾಡಿದ್ದ ಸಾಲಗಳನ್ನು ತೀರಿಸಿಕೊಂಡವು, ಈ ಸರಕಾರಗಳು ಬಲಿತವರನ್ನೆ ಮತ್ತುಷ್ಟು ಬಲಿಯುವಂತೆ ಮಾಡಿದವು, ಆದರೆ ಜನಸಾಮಾನ್ಯರು ಇವರ ಹೊಡೆತಕ್ಕೆ ಬಲಿಪಶುಗಳಾದರು, ನಾವು ಮನುಷ್ಯರೆಂದು ಕರೆಸಿಕೊಳ್ಳ ಬೇಕೆಂದರೆ ಬೇರೆಯವರ ಶ್ರೇಯೋಭಿವೃದ್ಧಿ ಬಯಸಬೇಕು, ಜೊತೆಯಲ್ಲಿ ಸಮುದಾಯಗಳ ಒಗ್ಗಟ್ಟು ಒಡೆಯುವ ಪ್ರಯತ್ನ ಮಾಡಬಾರದು, ಎಲ್ಲರಿಗೂ ಅನೂಕೂಲವಾಗಲಿ ಎಂಬ ದೃಷ್ಟಿಯಿಂದ ನನ್ನ ಅವಧಿಯಲ್ಲಿ ಸಾರಿಗೆ ಸೌಲಭ್ಯವನ್ನು ಹಳ್ಳಿಗಳಿಗೆ ಕಲ್ಪಿಸಿಕೊಟ್ಟೆ, ಆದರೆ ಸೌಲಭ್ಯ ಪಡೆದವರು ನನ್ನ ಕೈ ಬಲಪಡಿಸಲಿಲ್ಲ, ಈ ಸೌಲಭ್ಯದಿಂದ ಅನಾನೂಕೂಲವಾದವರು ಸಹ ನನ್ನನ್ನು ವಿರೋಧಿಸಿದರು, ಎರಡು ಕಡೆಯಿಂದ ನನಗೆ ಅನಾನುಕೂಲವಾಯಿತು, ಎಂದಿಗೂ ನಾನು ನನಗೆ ಮತ ನೀಡಿ ಎಂದು ಕೇಳುವುದಿಲ್ಲ, ನಿಮ್ಮಗಳ ಸಹಾಯ ಮಾಡಿದವರಿಗೆ ಆರ್ಶೀವದಿಸಿ ಎಂದರು.
ದಲಿತ ಸಮುದಾಯಗಳಲ್ಲಿ ಇಂದು ಶೇ.90ಕ್ಕೂ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿದ್ದಾರೆ, ಅವರಿಗೆ ನಾವು ವಿದ್ಯಾಭ್ಯಾಸಕ್ಕೆ ಅಗತ್ಯವಾದ ಪೂರಕ ವಾತಾವರಣ ಕಲ್ಪಿಸಿಕೊಟ್ಟರೆ ನಾವುಗಳು ಮಾಡಿರುವ ಲೋಪ ಸರಿಪಡಿಸಿಕೊಂಡಂತಾಗುತ್ತದೆ, ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಕೊಂಕಲ್‌ ಮಠದ ಓಂಕಾರನಾಥ ಸ್ವಾಮೀಜಿ ಮಾತನಾಡಿ, ಮಾದಿಗ ಜನಾಂಗ ಆದಿ ಜನಾಂಗವಾಗಿದ್ದರು ಅತಿ ಹಿಂದುಳಿದ ಜನಾಂಗವಾಗಿದೆ, ನಾಯಕರ ಕೊರತೆಯಿಂದ ನಮ್ಮ ಸಮುದಾಯ ಅಭಿವೃದ್ಧಿ ಕಂಡಿಲ್ಲ, ರಾಜಕೀಯವಾಗಿ ಆರ್ಥಿಕವಾಗಿ ಸಮುದಾಯದವರು ಅಭಿವೃದ್ಧಿ ಕಾಣಬೇಕಾಗಿದೆ, ತಾಲ್ಲೂಕಿನಲ್ಲಿರುವ ಕೊಂಕಲ್‌ ಮಠವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ರಾಜಣ್ಣ ನವರು ಶಾಸಕರಾಗಿದ್ದಾಗ ನಮ್ಮ ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಗೌರವ ಸ್ಥಾನಮಾನ ನೀಡುವ ಮೂಲಕ ಮಂಚೂಣಿ ನಾಯಕ ಎನಿಸಿಕೊಂಡಿದ್ದಾರೆ, ಇವರ ಅವಧಿಯಲ್ಲಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಕಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಜಿ.ಜೆ.ರಾಜಣ್ಣ, ನೇರಳೆಕೆರೆ ಗ್ರಾಪಂ ಅಧ್ಯಕ್ಷೆ ನಾಗಲಕ್ಷ್ಮಮ್ಮ, ನಿವೃತ್ತ ಅಪಾರ ಕಾರ್ಯದರ್ಶಿ ಗೋಪಾಲಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಆರ್‌.ರಾಜಗೋಪಾಲ್‌, ಮಲ್ಲಿಕಾರ್ಜುನಯ್ಯ, ಎಂ.ಕೆ.ನಂಜುಂಡರಾಜು, ಗಂಗಣ್ಣ, ಮಾಜಿ ತಾಪಂ ಸದಸ್ಯ ರಾಮಣ್ಣ, ಜೆ.ಡಿ.ವೆಂಕಟೇಶ್‌, ಸಿದ್ದಾಪುರ ರಂಗಶ್ಯಾಮಣ್ಣ, ದೊಡ್ಡೇರಿ ಕಣಿಮಯ್ಯ, ವಕೀಲ ನಾಗರಾಜು, ಪಿ.ಸಿ.ಕೃಷ್ಣರೆಡ್ಡಿ, ನರಸಿಂಹಯ್ಯ, ಸಿದ್ದಗಂಗಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!